2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಸೋತಿದೆ. ಭಾರತ ಗೆದ್ದಿದೆ. ಮಾಜಿ ಕ್ರಿಕೆಟಿಗ ಅತುಲ್ ವಾಸನ್, ಟೂರ್ನಿ ರೋಚಕವಾಗಿರಲು ಪಾಕಿಸ್ತಾನ ಗೆಲ್ಲಬೇಕೆಂದು ಹೇಳಿದ್ದಾರೆ. ಭಾರತ-ಪಾಕ್ ಪಂದ್ಯ ಏಕಪಕ್ಷೀಯವಾಗಿರಬಾರದು, ಪಾಕ್ ಕಮ್‌ಬ್ಯಾಕ್ ಮಾಡಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಫೆಬ್ರವರಿ 23ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹೀಗಿರುವಾಗಲೇ ಈ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಗೆಲುವು ಸಾಧಿಸಲಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಪಾಕ್ ಪಾಲಿಗೆ ಒಂದು ರೀತಿ ವರ್ಚುವಲ್ ನಾಕೌಟ್ ಪಂದ್ಯ ಎನಿಸಿಕೊಂಡಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ವೇಗಿ ಅತುಲ್ ವಾಸನ್, ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಗೆಲ್ಲಲಿ ಎಂದು ಅಭಿಪ್ರಾಯಪಟ್ಟಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. 

ಇಂಡೋ-ಪಾಕ್ ಹೈವೋಲ್ಟೇಜ್ ಫೈಟ್; ದುಬೈನಲ್ಲಿ ಪಾಕ್‌ ಎದುರು ಟೀಂ ಇಂಡಿಯಾ ರೆಕಾರ್ಡ್ಸ್ ಹೇಗಿದೆ?

"ಟೂರ್ನಮೆಂಟ್ ಇನ್ನಷ್ಟು ರೋಚಕತೆಯಿಂದ ಕೂಡಿರಬೇಕೆಂದರೆ ನನ್ನ ಪ್ರಕಾರ ಭಾರತ ಎದುರು ಪಾಕಿಸ್ತಾನ ತಂಡವು ಗೆಲ್ಲಬೇಕು. ಒಂದು ವೇಳೆ ಪಾಕಿಸ್ತಾನಕ್ಕೆ ನೀವು ಗೆಲ್ಲಲು ಬಿಟ್ಟಿಲ್ಲ ಅಂದ್ರೆ ಏನ್ಮಾಡ್ತೀರಾ ಹೇಳಿ? ಒಂದು ವೇಳೆ ಪಾಕಿಸ್ತಾನ ಚೆನ್ನಾಗಿ ಆಡಿ ಗೆದ್ದರೇ, ಆ ಬಳಿಕ ಟೂರ್ನಿ ಸ್ಪರ್ಧಾತ್ಮಕವಾಗಿರಲಿದೆ" ಎಂದು ಅತುಲ್ ವಾಸನ್ ANI ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

"ಇದೊಂದು ರೀತಿ ಅಮಿತಾಬ್‌ ಬಚ್ಚನ್ ಸಿನಿಮಾದಂತೆ. ಹೀರೋ ಶತೃವಿಗೆ ಪದೇ ಪದೇ ಪಂಚ್ ಮಾಡುತ್ತಾ ಇದ್ದರೇ ಅದನ್ನು ನೋಡೋಕೆ ಅಷ್ಟೊಂದು ಮಜಾ ಇರುವುದಿಲ್ಲ. ಪಾಕಿಸ್ತಾನ ಈ ಬಾರಿ ಕಮ್‌ಬ್ಯಾಕ್ ಮಾಡುವ ವಿಶ್ವಾಸವಿದೆ. . ಇದು ಟೂರ್ನಮೆಂಟ್ ದೃಷ್ಟಿಕೋನದಲ್ಲಿಯೂ ಒಳ್ಳೆಯದ್ದು ಎಂದು ಅತುಲ್ ವಾಸನ್ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ: ಭಾರತ ಪಂದ್ಯದ ಲೈವ್‌ ವೇಳೆ ಪಾಕ್‌ ಹೆಸರಿಲ್ಲದ್ದಕ್ಕೆ ಐಸಿಸಿಗೆ ಪಿಸಿಬಿ ದೂರು!

"ಪಾಕಿಸ್ತಾನ ತಂಡವು ಗಮನಾರ್ಹ ಪ್ರದರ್ಶನ ತೋರುವವರೆಗೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ರೋಚಕತೆಯ ಕೊರತೆಯಾಗಲಿದೆ. 90ರ ದಶಕದಲ್ಲಿ ನಾನು ಭಾರತ ಪರ ಆಡುವಾಗ ಪಾಕಿಸ್ತಾನ ತಂಡದಲ್ಲಿ ವಾಸೀಂ ಅಕ್ರಂ, ವಕಾರ್ ಯೂನಿಸ್, ಸಯೀದ್ ಅನ್ವರ್ ಅವರಂತಹ ದಿಗ್ಗಜ ಆಟಗಾರರು ಪಾಕ್ ತಂಡದಲ್ಲಿದ್ದರು ಎಂದು ವಾಸನ್ ಹೇಳಿದ್ದಾರೆ. 

ಭಾರತ ಪರ 4 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನಾಡಿರುವ ಅತುಲ್ ವಾಸನ್, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಏಕಪಕ್ಷೀಯವಾಗಿರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. "ಪಾಕಿಸ್ತಾನದಲ್ಲಿ ಏನೇನು ಅನಾಹುತಗಳು ನಡೆದಿದೆಯೋ ಅವೆಲ್ಲದರ ಪರಿಣಾಮ ಕ್ರಿಕೆಟ್ ಮೇಲೂ ಆಗಿದೆ. ಇನ್ನು ಇದೇ ವೇಳೆ ಭಾರತ ತಂಡವು ಸಾಕಷ್ಟು ಬಲಿಷ್ಠವಾಗುತ್ತಾ ಬಂದಿದೆ. 2000ದಿಂದೀಚೆಗೆ ಭಾರತ ತಂಡವು ನೆರೆಯ ಪಾಕಿಸ್ತಾನದ ಮೇಲೆ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸರ್ಫರಾಜ್ ಅಹಮದ್ ನೇತೃತ್ವದ ಪಾಕಿಸ್ತಾನ ತಂಡವು ಭಾರತವನ್ನು ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಕಳೆದ ಬಾರಿಯ ಫೈನಲ್ ಸೋಲಿನ ಲೆಕ್ಕಾಚಾರ ಚುಕ್ತಾ ಮಾಡಲು ಟೀಂ ಇಂಡಿಯಾ ತುದಿಗಾಲಿನಲ್ಲಿ ನಿಂತಿದೆ. ಒಂದು ವೇಳೆ ಪಾಕಿಸ್ತಾನ ತಂಡವು ಭಾರತ ಎದುರು ಸೋಲು ಅನುಭವಿಸಿದರೆ ಬಹುತೇಕ ಗ್ರೂಪ್ ಹಂತದಲ್ಲಿಯೇ ತನ್ನ ಅಭಿಯಾನವನ್ನು ಕೊನೆಗೊಳಿಸಲಿದೆ. ಭಾರತ ತಂಡವು ಈ ಹಿಂದಿನ ಎರಡು ಐಸಿಸಿ ಟೂರ್ನಿಯಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಗೆಲುವಿನ ನಗೆ ಬೀರಿದೆ.