ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ನೀಡಿದಾಗ ಕೆ.ಎಲ್. ರಾಹುಲ್ ಪೆವಿಲಿಯನ್‌ಗೆ ಹೆಜ್ಜೆ ಹಾಕುತ್ತಿದ್ದರು. ಆದರೆ, ನಾನ್-ಸ್ಟ್ರೈಕರ್‌ನಲ್ಲಿದ್ದ ದೇವದತ್ ಪಡಿಕ್ಕಲ್ ಅವರ ಒತ್ತಾಯದ ಮೇರೆಗೆ ಡಿಆರ್‌ಎಸ್ ತೆಗೆದುಕೊಂಡಾಗ, ರಾಹುಲ್ ನಾಟೌಟ್ ಎಂದು ಸಾಬೀತಾಯಿತು. ಈ ಚಾಣಾಕ್ಷತನದಿಂದ ವಿಕೆಟ್ ಉಳಿದ ಖುಷಿಯಲ್ಲಿ ರಾಹುಲ್, ಪಡಿಕ್ಕಲ್ ಹೆಲ್ಮೆಟ್‌ಗೆ ಮುತ್ತಿಕ್ಕಿ ಸಂಭ್ರಮಿಸಿದರು.
ಗಾಲೆ: ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ಅಂತ ತೀರ್ಪು ಕೊಟ್ಟಾಗ, ಪೆವಿಲಿಯನ್‌ಗೆ ಹೆಜ್ಜೆ ಹಾಕ್ತಿದ್ದ ಕೆ.ಎಲ್. ರಾಹುಲ್ ವಿಕೆಟ್ ಉಳಿಸಿದ್ದು ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್. ವಿಕೆಟ್ ಉಳಿದ ಖುಷಿಯಲ್ಲಿ ರಾಹುಲ್, ಪಡಿಕ್ಕಲ್ ಹೆಲ್ಮೆಟ್‌ಗೆ ಮುತ್ತಿಕ್ಕಿ ಸಂಭ್ರಮಿಸಿದ್ರು. ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಈ ಒಂದು ಸ್ವಾರಸ್ಯಕರ ಘಟನೆ ನಡೆಯಿತು.
ನಾಲ್ಕನೇ ದಿನದಾಟ ಶುರು ಮಾಡಿದ ಭಾರತಕ್ಕೆ ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡು ಆಘಾತ ಎದುರಾಗಿತ್ತು. ಅಸಿತ ಫೆರ್ನಾಂಡೋ ಬೌಲಿಂಗ್‌ನಲ್ಲಿ ಜೈಸ್ವಾಲ್ ವಿಕೆಟ್ ಕೀಪರ್‌ಗೆ ಕ್ಯಾಚ್ ಕೊಟ್ಟು ಔಟಾದರು. ನಂತರ ಕ್ರೀಸ್‌ಗೆ ಬಂದ ಪಡಿಕ್ಕಲ್ ಜೊತೆಗೂಡಿ ರಾಹುಲ್ ಉತ್ತಮ ಜೊತೆಯಾಟ ಆಡುತ್ತಿದ್ದರು. ಆಗಲೇ ಈ ಡ್ರಾಮಾ ನಡೆದಿದ್ದು.
ರಾಹುಲ್ ಕಾಪಾಡಿದ ದೇವದತ್ ಪಡಿಕ್ಕಲ್
ಪ್ರಭಾತ್ ಜಯಸೂರ್ಯ ಅವರ ಓವರ್‌ನಲ್ಲಿ ರಾಹುಲ್ ಒಂದು ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲೇ ಜಯಸೂರ್ಯ, ರಾಹುಲ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಶ್ರೀಲಂಕಾ ಆಟಗಾರರು ಮನವಿ ಮಾಡಿದ್ದೇ ತಡ, ಅಂಪೈರ್ ಬೆರಳೆತ್ತಿ ಔಟ್ ಎಂದು ತೀರ್ಪು ನೀಡಿದರು. ಚೆಂಡು ತನ್ನ ಹಿಂದಿನ ಕಾಲಿನ ತೊಡೆಗೆ ಬಡಿದಿದೆ ಎಂದು ರಾಹುಲ್‌ಗೆ ಅನಿಸಿತ್ತು. ಡಿಆರ್‌ಎಸ್ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲದಲ್ಲಿ ಅವರು ನಾನ್-ಸ್ಟ್ರೈಕ್‌ನಲ್ಲಿದ್ದ ಪಡಿಕ್ಕಲ್ ಕಡೆ ನೋಡಿದರು. ಆಗ ಪಡಿಕ್ಕಲ್, ಚೆಂಡು ಎತ್ತರದಲ್ಲಿ ಹೋಗುತ್ತೆ ಮತ್ತು ಕಾಲಿಗೆ ಬಡಿದ ಜಾಗವನ್ನು ಗಮನಿಸಿ, ಖಂಡಿತ ಡಿಆರ್‌ಎಸ್ ತೆಗೆದುಕೊಳ್ಳಿ ಎಂದು ರಾಹುಲ್‌ಗೆ ಹೇಳಿದರು. ಪಡಿಕ್ಕಲ್ ಮಾತನ್ನು ನಂಬಿದ ರಾಹುಲ್ ತಕ್ಷಣ ರಿವ್ಯೂ ಕೇಳಿದರು.
ಟಿವಿ ಅಂಪೈರ್ ಪರಿಶೀಲನೆ ನಡೆಸಿದಾಗ, ಬಾಲ್ ಟ್ರ್ಯಾಕಿಂಗ್‌ನಲ್ಲಿ ಚೆಂಡು ಸ್ಟಂಪ್ಸ್‌ನ ಮೇಲಿಂದ ಹೋಗುತ್ತಿರುವುದು ಸ್ಪಷ್ಟವಾಯಿತು. ಇದರಿಂದ, ಫೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು. ಔಟ್ ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ರಾಹುಲ್‌ಗೆ ಖುಷಿ ತಡೆಯಲಾಗಲಿಲ್ಲ. ನೇರವಾಗಿ ಪಡಿಕ್ಕಲ್ ಬಳಿ ಓಡಿಹೋಗಿ ಅವರನ್ನು ಅಪ್ಪಿಕೊಂಡು ಹೆಲ್ಮೆಟ್‌ಗೆ ಮುತ್ತಿಟ್ಟರು. ಇವರಿಬ್ಬರೂ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ ಆಟಗಾರರು ಅನ್ನೋದು ವಿಶೇಷ. ಆದರೆ, ಸಿಕ್ಕ ಈ ಜೀವದಾನವನ್ನು ರಾಹುಲ್ ಹೆಚ್ಚು ಹೊತ್ತು ಬಳಸಿಕೊಳ್ಳಲಿಲ್ಲ. 15ನೇ ಓವರ್‌ನಲ್ಲಿ ಪ್ರಭಾತ್ ಜಯಸೂರ್ಯ ಬೌಲಿಂಗ್‌ನಲ್ಲೇ ಮತ್ತೊಂದು ಸಿಕ್ಸರ್‌ಗೆ ಯತ್ನಿಸಿ, ಮಿಲನ್ ರತ್ನಾಯಕೆ ಅವರಿಗೆ ಕ್ಯಾಚ್ ನೀಡಿ 35 ರನ್‌ಗಳಿಗೆ ಔಟಾದರು.
ಟೀಂ ಇಂಡಿಯಾ 193ಕ್ಕೆ ಆಲೌಟ್; ಲಂಕಾಗೆ ಗಾಲೆ ಟೆಸ್ಟ್ ಗೆಲ್ಲಲು 372 ರನ್ ಟಾರ್ಗೆಟ್:
ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಗಳಿಸಿತ್ತು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 193 ರನ್ ಗಳಿಸಿ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ಪಂತ್ 69 ಎಸೆತಗಳಲ್ಲಿ 66 ರನ್ ಸಿಡಿಸಿದರೆ, ಪಡಿಕ್ಕಲ್ 44 ಹಾಗೂ ಕೆ ಎಲ್ ರಾಹುಲ್ 35 ರನ್ ಬಾರಿಸಿದರು. ಈ ಮೂವರನ್ನು ಹೊರತುಪಡಿಸಿ ಉಳಿದ್ಯಾವ ಭಾರತೀಯ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ಇನ್ನು ಇದೀಗ ಭಾರತ ತಂಡವು ಒಟ್ಟಾರೆ 371 ರನ್‌ಗಳ ಮುನ್ನಡೆ ಸಾಧಿಸಿದ್ದು, ಗಾಲೆ ಟೆಸ್ಟ್ ಪಂದ್ಯ ಗೆಲ್ಲಲು 372 ರನ್‌ಗಳ ಟಾರ್ಗೆಟ್ ಸಿಕ್ಕಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.


