ಕೋಲ್ಕತಾ[ನ.23] ಭಾರತ, ಬಾಂಗ್ಲಾ ನಡುವಿನ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಅಪರೂಪದ ಪ್ರಸಂಗ ನಡೆಯಿತು. ಇದೇ ಮೊದಲ ಬಾರಿಗೆ ತಂಡವೊಂದು ಇಬ್ಬರು ಬದಲಿ ಆಟಗಾರರನ್ನು ಕಣಕ್ಕಿಳಿಸಿದೆ. 

ಬಾಂಗ್ಲಾ ಕ್ರಿಕೆಟಿಗನ ತುರ್ತು ಚಿಕಿತ್ಸೆಗೆ ಭಾರತೀಯ ಫಿಸಿಯೋ ಕರೆದ ಕೊಹ್ಲಿ!

ವೇಗಿ ಮೊಹಮದ್‌ ಶಮಿ ಎಸೆತದಲ್ಲಿ ತಲೆಗೆ ಪೆಟ್ಟು ತಿಂದ ಲಿಟನ್‌ ದಾಸ್‌ ಕೆಲಕಾಲ ಬ್ಯಾಟಿಂಗ್‌ ನಡೆಸಿ ಹೊರನಡೆಯಲು ನಿರ್ಧರಿಸಿದರು. ಐಸಿಸಿಯ ಸುಪ್ತಾವಸ್ಥೆ ಬದಲಿ ಆಟಗಾರನ ನಿಯಮದ ಪ್ರಕಾರ ಲಿಟನ್‌ ಬದಲು ಮೆಹಿದಿ ಹಸನ್‌ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು. ಬಳಿಕ ನಯೀಮ್‌ ಹಸನ್‌ ಕೂಡ ಶಮಿ ಬೌಲಿಂಗ್‌ನಲ್ಲಿ ಗಾಯಗೊಂಡರೂ ಬ್ಯಾಟಿಂಗ್‌ ಮುಂದುವರೆಸಿದರು. ಆದರೆ ಅವರು ಬೌಲಿಂಗ್‌ ಮಾಡಲಿಲ್ಲ. ಹೀಗಾಗಿ ಬೌಲಿಂಗ್‌ ಮಾಡಲು ಅವರ ಬದಲಿಗೆ ತೈಜುಲ್‌ ಇಸ್ಲಾಂ ಮೈದಾನಕ್ಕಿಳಿದರು.

ಪಿಂಕ್ ಬಾಲ್ ಟೆಸ್ಟ್; ಕೊಹ್ಲಿ, ಪೂಜಾರ ಅರ್ಧಶತಕ, ಇನಿಂಗ್ಸ್ ಮುನ್ನಡೆ ಪಡೆದ ಭಾರತ!

ಐಸಿಸಿ ನಿಯಮವೇನು?

ಐಸಿಸಿ ಕಳೆದ ಆಗಸ್ಟ್‌ನಲ್ಲಿ ಜಾರಿ ಮಾಡಿದ್ದ ಹೊಸ ನಿಯಮದ ಪ್ರಕಾರ, ಪಂದ್ಯದ ಪರಿಸ್ಥಿತಿಯಲ್ಲಿ ತಂಡವೊಂದರ ಆಟಗಾರನೊಬ್ಬ ಗಾಯಗೊಂಡರೆ, ಅವನ ಬದಲು ಮತ್ತೊಬ್ಬ ಆಟಗಾರ ಕಣಕ್ಕಿಳಿಯಬಹುದಾಗಿದೆ. ಒಂದೊಮ್ಮೆ ಬ್ಯಾಟ್ಸ್‌ಮನ್‌ ಒಬ್ಬ ಗಾಯಗೊಂಡಿದ್ದರೆ ಬ್ಯಾಟ್ಸ್‌ಮನ್‌, ಬೌಲರ್‌ ಗಾಯಗೊಂಡಿದ್ದರೆ ಬೌಲರ್‌ ಅಥವಾ ಆಲ್ರೌಂಡರ್‌ ಗಾಯಗೊಂಡಿದ್ದರೆ ಆಲ್ರೌಂಡರ್‌ 11ರ ಬಳಗದಲ್ಲಿ ಆಡಬಹುದಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಬಾರಿ ಬದಲಿ ಆಟಗಾರರು ಆಡಿದ್ದಾರೆ. ಇದರಲ್ಲಿ 3 ಬಾರಿ ಭಾರತದ ವಿರುದ್ಧವೇ ಬದಲಿ ಆಟಗಾರರು ಆಡಿದ್ದಾರೆ.

2019ರ ಆಗಸ್ಟ್‌ನಲ್ಲಿ ಲಾರ್ಡ್ಸ್’ನಲ್ಲಿ ನಡೆದಿದ್ದ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಸ್ಪ್ರೇಲಿಯಾ ತಂಡ ಬದಲಿ ಆಟಗಾರನನ್ನು ಪಡೆದಿತ್ತು. ಸ್ಮಿತ್‌ ಬದಲು ಮಾರ್ನಸ್‌ ಆಡಿದ್ದರು. ಭಾರತ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ನ ಡರೇನ್‌ ಬ್ರಾವೋ ಗಾಯಗೊಂಡಿದ್ದರಿಂದ ಜರ್ಮೈನ್‌ ಬ್ಲಾಕ್‌ ವುಡ್‌ ತಂಡದಲ್ಲಿ ಆಡಿದ್ದರು. ಭಾರತ ವಿರುದ್ಧದ ಪಂದ್ಯದಲ್ಲಿ ದ.ಆಫ್ರಿಕಾದ ಡೀನ್‌ ಎಲ್ಗರ್‌ ಗಾಯಗೊಂಡಿದ್ದರಿಂದ ತೇನಿಸ್‌ ಡಿ ಬ್ರೂನ್‌ ಕಣಕ್ಕಿಳಿದಿದ್ದರು.