Asianet Suvarna News Asianet Suvarna News

ಗ್ರೇಟ್ ಫಿನಿಶರ್ ಧೋನಿಗೆ ತಲೆಬಾಗಿದ ಜಡ್ಡು, ಮಹಿಗೆ ಫುಲ್‌ ಮಾರ್ಕ್ಸ್‌ ನೀಡಿದ ಸಿಎಸ್‌ಕೆ ನಾಯಕ..!

* ಮುಂಬೈ ಇಂಡಿಯನ್ಸ್ ಎದುರು ರೋಚಕ ಗೆಲುವು ಸಾಧಿಸಿದ ಸಿಎಸ್‌ಕೆ

* ಚೆನ್ನೈಗೆ ಗೆಲುವು ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ

* ಮಹೇಂದ್ರನ ಮಾಸ್ಟರ್‌ ಕ್ಲಾಸ್ ಬ್ಯಾಟಿಂಗ್‌ಗೆ ತಲೆಬಾಗಿದ ರವೀಂದ್ರ ಜಡೇಜಾ

CSK Captain Ravindra Jadeja bows down to MS Dhoni after Finish off in style against Mumbai Indians kvn
Author
Bengaluru, First Published Apr 22, 2022, 12:02 PM IST

ಬೆಂಗಳೂರು(ಏ.22): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ, ಅಮೋಘ ಪ್ರದರ್ಶನ ತೋರಿದ ಸಿಎಸ್‌ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಮುಂಬೈ ಇಂಡಿಯನ್ಸ್ ಎದುರು ಕೊನೆಯ ಎಸೆತದಲ್ಲಿ ರೋಚಕ ಗೆಲುವು ತಂದುಕೊಟ್ಟರು. ಕ್ರಿಕೆಟ್ ಜಗತ್ತು ಕಂಡ ಗ್ರೇಟ್ ಮ್ಯಾಚ್ ಫಿನಿಶರ್ ಧೋನಿ ಕೇವಲ 13 ಎಸೆತಗಳನ್ನು ಎದುರಿಸಿ ಅಜೇಯ 28 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 40 ವರ್ಷದ ಮಹೇಂದ್ರ ಸಿಂಗ್ ಧೋನಿ, ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸುವ ಮೂಲಕ ತಾನು ಈಗಲೂ ಗ್ರೇಟ್ ಮ್ಯಾಚ್ ಫಿನಿಶರ್ ಎನ್ನುವುದನ್ನು ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನ ಮೊದಲ ಎಸೆತದಲ್ಲೇ ಸಿಎಸ್‌ಕೆ ತಂಡವು ಡ್ವೇನ್ ಪ್ರಿಟೋರಿಯಸ್ ವಿಕೆಟ್ ಕಳೆದುಕೊಂಡಿತ್ತು. ಆದರೆ ಮತ್ತೊಂದು ತುದಿಯಲ್ಲಿದ್ದ ಧೋನಿ, ತಮ್ಮ ಹಳೆಯ ಖದರ್ ತೋರಿಸಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ರೋಚಕವಾಗಿ ಸಿಎಸ್‌ಕೆ ತಂಡಕ್ಕೆ ಗೆಲುವಿನ ಸಿಂಚನವನ್ನು ಒದಗಿಸಿದರು.

ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಡ್ವೇನ್ ಬ್ರಾವೋ ಒಂದು ರನ್ ಗಳಿಸುವ ಮೂಲಕ ಧೋನಿಗೆ ಸ್ಟ್ರೈಕ್ ನೀಡಿದರು. ಕೊನೆಯ 4 ಎಸೆತಗಳಲ್ಲಿ ಸಿಎಸ್‌ಕೆ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಮೂರು ಹಾಗೂ ನಾಲ್ಕನೇ ಎಸೆತದಲ್ಲಿ ಧೋನಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಹೀಗಾಗಿ ಕೊನೆಯ ಎರೆಡು ಎಸೆತದಲ್ಲಿ ಸಿಎಸ್‌ಕೆ ತಂಡಕ್ಕೆ 6 ರನ್‌ಗಳ ಅಗತ್ಯವಿತ್ತು. ಐದನೇ ಎಸೆತದಲ್ಲಿ 2 ರನ್ ಬಾರಿಸಿದ ಧೋನಿ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮದೇ ಶೈಲಿಯಲ್ಲಿ ಮ್ಯಾಚ್ ಫಿನಿಶ್ ಮಾಡಿದರು. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

IPL 2022 ಕೊನೇ 4 ಎಸೆತಗಳಲ್ಲಿ 16 ರನ್ ಸಿಡಿಸಿ ಚೆನ್ನೈಗೆ ಗೆಲುವು ತಂದ ಧೋನಿ!

ಮ್ಯಾಚ್‌ ಫಿನಿಶ್ ಮಾಡಿ ಡಗೌಟ್‌ನತ್ತ ಬರುತ್ತಿದ್ದ ಧೋನಿಗೆ ತಲೆಬಾಗಿ ನಮಸ್ಕರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ (Ravindra Jadeja) ವಿನೂತನವಾಗಿ ಗೌರವ ಸೂಚಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ..

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನಿಜ ಹೇಳಬೇಕೆಂದರೆ, ನಾವೆಲ್ಲರೂ ಪಂದ್ಯ ಏನಾಗುತ್ತದೋ ಎಂದು ಆತಂಕದಲ್ಲಿದ್ದೆವು. ಆದರೆ ಒಂದು ಹಂತದಲ್ಲಿ ಗ್ರೇಟ್ ಫಿನಿಶರ್ ಆಗಿರುವ ಧೋನಿ ಕ್ರೀಸ್‌ನಲ್ಲಿದ್ದಿದ್ದು ನಮ್ಮಲ್ಲಿ ಒಂದು ರೀತಿ ಸಮಾಧಾನ ತಂದಿತ್ತು. ಅವರು ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಆಡಿದರೆ ಖಂಡಿತವಾಗಿಯೂ ಪಂದ್ಯ ನಮ್ಮ ಕಡೆ ವಾಲುವಂತೆ ಮಾಡುತ್ತಾರೆ ಎನ್ನುವ ವಿಶ್ವಾಸವಿತ್ತು. ಇಂದು ಮತ್ತೊಮ್ಮೆ ತಮ್ಮ ಅಮೋಘ ಪ್ರದರ್ಶನ ತೋರುವ ಮೂಲಕ ಧೋನಿ ತಾವು ಈಗಲೂ ಮ್ಯಾಚ್ ಫಿನಿಶ್ ಮಾಡಬಲ್ಲೆ ಎನ್ನುವುದನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ ಎಂದು ಜಡ್ಡು ಹೇಳಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ, ತಿಲಕ್ ವರ್ಮಾ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 155 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಕೂಡಾ 7 ವಿಕೆಟ್ ಕಳೆದುಕೊಂಡು ರೋಚಕವಾಗಿ ಗೆಲುವಿನ ನಗೆ ಬೀರಿತು. 

Follow Us:
Download App:
  • android
  • ios