ವಿಶ್ವದ ಶ್ರೇಷ್ಠ ಫಿನಿಷರ್ ಎನ್ನುವ ಖ್ಯಾತಿಗೆ ತಕ್ಕಂತೆ ಆಟವಾಡಿದ ಎಂಎಸ್ ಧೋನಿ, ಕೊನೇ 4 ಎಸೆತಗಳಲ್ಲಿ ಗೆಲುವಿಗೆ ಬೇಕಿದ್ದ 16 ರನ್ ಗಳನ್ನು ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ತಂಡದ 3 ವಿಕೆಟ್ ರೋಚಕ ಗೆಲುವಿಗೆ ಕಾರಣರಾಗಿದ್ದಾರೆ.
ಮುಂಬೈ (ಏ.21): ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ ಬೇಕಿದ್ದ ಹಂತದಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಹಾಗೂ ಜೋಡಿ ರನ್ ಸಾಹಸ ನಡೆಸಿದ ಎಂಎಸ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ ( Chennai Super Kings ) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) 2ನೇ ಗೆಲುವು ನೀಡಿದ್ದಾರೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ (Mumbai Indians) ಧೋನಿಯ ಸಾಹಸಿಕ ಇನ್ನಿಂಗ್ಸ್ ನ ಮುಂದೆ ಮಂಕಾಗಿ 7ನೇ ಸೋಲು ಕಂಡಿತು.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ತಿಲಕ್ ವರ್ಮ (51 ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್) ಬಾರಿಸಿದ ಆಕರ್ಷಕ ಅರ್ಧಶತಕ, ಸೂರ್ಯಕುಮಾರ್ ಯಾದವ್ (32) ಹಾಗೂ ಹೃತಿಕ್ ಶೋಕೆನ್ (25) ಉಪಯುಕ್ತ ಕಾಣಿಕೆಯಿಂದಾಗಿ 7 ವಿಕೆಟ್ ಗೆ 155 ರನ್ ಬಾರಿಸಿತ್ತು. ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 156 ರನ್ ಬಾರಿಸಿ ಗೆಲುವು ಕಂಡಿತು. 13 ಎಸೆತಗಳನ್ನು ಎದುರಿಸಿದ ಎಂಎಸ್ ಧೋನಿ 3 ಬೌಂಡರಿ, 1 ಸಿಕ್ಸರ್ ಗಳೊಂದಿಗೆ ಅಜೇಯ 28 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ಚೇಸಿಂಗ್ ಅರಂಭಿಸಿದ ಚೆನ್ನೈ ಮೊದಲ ಎಸೆತದಲ್ಲಿಯೇ ಅಘಾತ ಕಂಡಿತು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 73 ರನ್ ಬಾರಿಸಿ ಮಿಂಚಿದ್ದ ರುತುರಾಜ್ ಗಾಯಕ್ವಾಡ್, ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಡೇನಿಯಲ್ ಸ್ಯಾಮ್ಸ್ ಎಸೆದ ಚೆಂಡನ್ನು ಮುಟ್ಟಲು ಪ್ರಯತ್ನಿಸಿದ ರುತುರಾಜ್, ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿದ್ದ ತಿಲಕ್ ವರ್ಮಗೆ ಕ್ಯಾಚ್ ನೀಡಿ ಹೊರನಡೆದರು.
ಮೊದಲ ಎಸೆತದಲ್ಲೇ ಎದುರಾದ ಆಘಾತದಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಮಿಚೆಲ್ ಸ್ಯಾಂಟ್ನರ್ ಗೆ ಬಡ್ತಿ ನೀಡಿ ಚೆನ್ನೈ ತಂಡ ಕಳಿಸಿತು. ಆದರೆ, ಇದರಿಂದ ಹೆಚ್ಚಿನ ಲಾಭವಾಗಲಿಲ್ಲ, 9 ಎಸೆತಗಳನ್ನು ಎದುರಿಸಿದ ಸ್ಯಾಂಟ್ನರ್ 2 ಬೌಂಡರಿಗಳೊಂದಿಗೆ 9 ರನ್ ಸಿಡಿಸಿ ಡೇನಿಯಲ್ ಸ್ಯಾಮ್ಸ್ ಗೆ 2ನೇ ವಿಕೆಟ್ ಆಗಿ ಹೊರನಡೆದರು.
16 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ 3ನೇ ವಿಕೆಟ್ ಗೆ ರಾಬಿನ್ ಉತ್ತಪ್ಪ (30 ರನ್, 25 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಅಂಬಟಿ ರಾಯುಡು (40 ರನ್, 35 ಎಸೆತ, 2 ಬೌಂಡರಿ, 3 ಸಿಕ್ಸರ್) ಅಮೂಲ್ಯ 50 ರನ್ ಜೊತೆಯಾಟವಾಡಿ ತಂಡವನ್ನು ಆಧರಿಸಿದರು. ಈ ಜೊತೆಯಾಟದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುಲಭ ಗೆಲುವು ಕಾಣುತ್ತದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು ಜೈದೇವ್ ಉನಾದ್ಕತ್ 9ನೇ ಓವರ್ ನಲ್ಲಿ ಬೇರ್ಪಡಿಸಿದರು. ಡೆವಾಲ್ಡ್ ಬ್ರೇವಿಸ್ ಗೆ ಕ್ಯಾಚ್ ನೀಡಿ ರಾಬಿನ್ ಉತ್ತಪ್ಪ ಹೊರನಡೆದರೆ, 4ನೇ ವಿಕೆಟ್ ಗೆ ಅಂಬಟಿ ರಾಯುಡು ಹಾಗೂ ಶಿವಂ ದುಬೆ (13) 22 ರನ್ ಜೊತೆಯಾಟವಾಡಿದರು. ಮುಂಬೈ ತಂಡ ಗೆಲುವು ಸಾಧಿಸಬೇಕಿದ್ದಲ್ಲಿ ಜೊತೆಯಾಟವನ್ನು ಬೇಗನೆ ಮುರಿಯಬೇಕಾದ ಅನಿವಾರ್ಯತೆಯಲ್ಲಿತ್ತು.
ಅದರಂತೆ 13ನೇ ಓವರ್ ನಲ್ಲಿ ಡೇನಿಯಲ್ ಸ್ಯಾಮ್ಸ್, ಶಿವಂ ದುಬೇ ವಿಕೆಟ್ ಉರುಳಿಸಿ ಮೇಲುಗೈ ನೀಡಿದ್ದು ಮಾತ್ರವಲ್ಲದೆ, ಚೆನ್ನೈ ತಂಡದ ಮೊತ್ತ 100ರ ಗಡಿ ದಾಟಿದ ಬಳಿಕ ಅಂಬಟಿ ರಾಯುಡು ಅವರನ್ನೂ ಡಗ್ ಔಟ್ ಗಟ್ಟಿ ಗಮನಸೆಳೆದರು. ಈ ಮೊತ್ತಕ್ಕೆ 4 ರನ್ ಸೇರಿಸುವ ವೇಳೆಗೆ ನಾಯಕ ರವೀಂದ್ರ ಜಡೇಜಾ ಕೂಡ ಔಟಾಗಿದ್ದರಿಂದ ಚೆನ್ನೈ ತಂಡ ಸೋಲಿನ ಎಚ್ಚರಿಕೆ ಎದುರಿಸಿತ್ತು. ಕೊನೆಯಲ್ಲಿ ಡ್ವೈನ್ ಪ್ರಿಟೋರಿಯಸ್ (22ರನ್, 14 ಎಸೆತ, 2 ಬೌಂಡರಿ, 1 ಸಿಕ್ಸರ್) ಮೂಲಕ ಗೆಲುವಿಗಾಗಿ ದೊಡ್ಡ ಮಟ್ಟದ ಹೋರಾಟ ತೋರಿದ್ದರು. ಕೊನೇ ಓವರ್ ನಲ್ಲಿ ಪ್ರಿಟೋರಿಯಸ್ ಔಟಾದರೂ, ಎಂಎಸ್ ಧೋನಿ ಭರ್ಜರಿ ಆಟವಾಡುವ ಮೂಲಕ ತಂಡಕ್ಕೆ ಗೆಲುವು ನೀಡಿದರು.
