ರಾಂಚಿ(ಮೇ.08): ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಹಾಲಿ ನಾಯಕ ಎಂ.ಎಸ್. ಧೋನಿ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಾಕಲು ಕುದುರೆಯೊಂದನ್ನು ಖರೀದಿಸಿದ್ದಾರೆ. ಆ ಕುದುರೆಗೆ ಚೇತಕ್ ಎಂದು ಹೆಸರಿಟ್ಟಿದ್ದಾರೆ.

ಪ್ರಾಣಿಪ್ರಿಯ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಮನೆಯಲ್ಲಿ ಈಗಾಗಲೇ ಸ್ಯಾಮ್(ಬೆಲ್ಜಿಯನ್ ಮೆಲಿನೊಯ್ಸ್), ಲಿಲ್ಲಿ(ವೈಟ್ ಹಸ್ಕಿ), ಗಬ್ಬರ್(ವೈಟ್ ಹಸ್ಕಿ) ಹಾಗೂ ಜೋಯಾ(ಡಚ್ ಶೆಫರ್ಡ್‌) ನಾಯಿಗಳನ್ನು ಸಾಕಿದ್ದಾರೆ. ಇದೀಗ ಚೇತಕ್ ಹೆಸರಿನ ಕುದುರೆಯು ರಾಂಚಿಯಲ್ಲಿರುವ ಧೋನಿ ಫಾರ್ಮ್‌ ಹೌಸ್‌ ಸೇರಿಕೊಂಡಿದೆ.

ಧೋನಿ ಪತ್ನಿ ಸಾಕ್ಷಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕುದುರೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಎಂದು ಬರೆದುಕೊಂಡಿದ್ದಾರೆ. 

ಎಂ ಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಸಹಪಾಠಿ ರವೀಂದ್ರ ಜಡೇಜಾ ಜಾಮ್ನಾನಗರದಲ್ಲಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿ 4 ಕುದುರೆಗಳನ್ನು ಸಾಕಿಕೊಂಡಿದ್ದಾರೆ. ಐಪಿಎಲ್‌ ದಿಢೀರ್ ಮುಂದೂಡಲ್ಪಟ್ಟಿದ್ದರಿಂದ ಕೆಲದಿನಗಳ ಹಿಂದಷ್ಟೇ ಜಡೇಜಾ ತಮ್ಮ ನೆಚ್ಚಿನ ಕುದುರೆಯೊಂದಿಗೆ ಫಾರ್ಮ್‌ ಹೌಸ್‌ನಲ್ಲಿ ಪೋಸ್‌ ನೀಡಿದ್ದರು.

ಎಲ್ಲಾ ಆಟಗಾರರನ್ನು ತವರಿಗೆ ಕಳಿಸಿ ಕೊನೆಗೆ ವಿಮಾನವೇರಲಿರುವ ಧೋನಿ..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅದ್ಭುತ ಪ್ರದರ್ಶನ ತೋರಿತ್ತು. ಆಡಿದ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಹಾಗೂ 2 ಪಂದ್ಯಗಳಲ್ಲಿ ಸೋಲು ಕಂಡು 10 ಅಂಕಗಳೊಂದಿಗೆ ಅಂಕಪಟ್ಟಿಯ 2ನೇ ಸ್ಥಾನದಲ್ಲಿತ್ತು. ಹೀಗಿರುವಾಗಲೇ ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಅಂತಿಮವಾಗಿ ಮಹೇಂದ್ರ ಸಿಂಗ್ ಧೋನಿ ವಿದೇಶಿ ಆಟಗಾರರನ್ನು, ಬಳಿಕ ಭಾರತೀಯ ಆಟಗಾರರನ್ನು ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಕಳಿಸಿಕೊಟ್ಟ ಬಳಿಕ ಕೊನೆಯವರಾಗಿ ಧೋನಿ ರಾಂಚಿಯತ್ತ ಮುಖ ಮಾಡಿದ್ದಾರೆ.