ಎಲ್ಲಾ ಆಟಗಾರರನ್ನು ತವರಿಗೆ ಕಳಿಸಿ ಕೊನೆಗೆ ವಿಮಾನವೇರಲಿರುವ ಧೋನಿ..!
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಡೆಲ್ಲಿಯಿಂದ ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಅವರ ತವರಿಗೆ ಕಳಿಸಿದ ಬಳಿಕ ಕೊನೆಯವರಾಗಿ ರಾಂಚಿಯತ್ತ ಮುಖ ಮಾಡಲು ತೀರ್ಮಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.06): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಸಹ ಆಟಗಾರರನ್ನೆಲ್ಲ ಕಳಿಸಿಕೊಟ್ಟು ಸುರಕ್ಷಿತವಾಗಿ ಕಳಿಸಿಕೊಟ್ಟು ಬಳಿಕ ಕೊನೆಯವರಾಗಿ ತಾವು ರಾಂಚಿಯತ್ತ ಮುಖಮಾಡುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಿಳಿಸಿದ್ದಾರೆ. ಧೋನಿಯ ಈ ನಡೆ ಸಾಕಷ್ಟು ಮೆಚ್ಚಿಗೆಗೆ ಪಾತ್ರವಾಗಿದೆ.
ಧೋನಿ ಮೊದಲಿಗೆ ವಿದೇಶಿ ಆಟಗಾರರೆಲ್ಲರನ್ನು ಕಳಿಸಿ, ಆನಂತರ ಭಾರತೀಯ ಆಟಗಾರರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಡೆಲ್ಲಿಯಿಂದ ಹೊರಟ ಬಳಿಕ ಕೊನೆಯವರಾಗಿ ಹೊರಡಲು ಧೋನಿ ತೀರ್ಮಾನಿಸಿದ್ದಾರೆ. ಈ ಸಂಬಂಧ ವರ್ಚುವಲ್ ಮೀಟಿಂಗ್‌ನಲ್ಲಿ ಸಹ ಆಟಗಾರರೊಂದಿಗೆ ಮಾತನಾಡಿದ ಧೋನಿ, ಐಪಿಎಲ್ ಈ ಬಾರಿ ಭಾರತದಲ್ಲಿ ನಡೆದಿದ್ದರಿಂದ ಮೊದಲಿಗೆ ವಿದೇಶಿ ಆಟಗಾರರು ತಮ್ಮ ತವರು ಸೇರಿಕೊಳ್ಳಲು ಆಧ್ಯತೆಯ ಮೇರೆಗೆ ಅವಕಾಶ ಮಾಡಿಕೊಡಬೇಕು. ಆ ನಂತರ ಭಾರತೀಯ ಆಟಗಾರರು ತಮ್ಮ ಮನೆಗಳತ್ತ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಐಪಿಎಲ್ 2021: ಲಂಡನ್‌ಗೆ ತೆರಳಿದ ಇಂಗ್ಲೆಂಡ್ ಕ್ರಿಕೆಟಿಗರು..!
ತಾವು ಕೊನೆಯವರಾಗಿ ಹೋಟೆಲ್ ತೊರೆಯುವುದಾಗಿ ಧೋನಿ ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ತವರು ಸೇರಿದ ಬಳಿಕ ಮರು ದಿನ ಡೆಲ್ಲಿಯಿಂದ ರಾಂಚಿಯತ್ತ ಕೊನೆಯ ವಿಮಾನದಲ್ಲಿ ಪ್ರಯಾಣಿಸುವುದಾಗಿ ಧೋನಿ ತಿಳಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೊಬ್ಬರು ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಧೋನಿ ಪೋಷಕರಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಿದ್ದೂ ಆಟಗಾರರ ಕಾಳಜಿ ವಹಿಸಿದ್ದರ ಬಗ್ಗೆ ಧೋನಿ ಕುರಿತಂತೆ ಶ್ಲಾಘನೆ ವ್ಯಕ್ತವಾಗಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಯೋಬಬಲ್‌ನಲ್ಲಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮೇ.02ರಂದು ನಡೆಯಬೇಕಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯ ಮುಂದೂಡಲ್ಪಟ್ಟಿತ್ತು. ಮರುದಿನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ ಅನಿರ್ದಿಷ್ಟಾವಧಿಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡಲ್ಪಟ್ಟಿದೆ.