ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ರೋಹಿತ್ ಶರ್ಮ ನಾಯಕಟಿ20 ಹಾಗೂ ಟೆಸ್ಟ್ ತಂಡಗಳಿಗೆ ಜಸ್ ಪ್ರೀತ್ ಬುಮ್ರಾ ಉಪನಾಯಕವಿರಾಟ್ ಕೊಹ್ಲಿ ರಾಜೀನಾಮೆಯಿಂದ ತೆರವಾಗಿದ್ದ ಟೆಸ್ಟ್ ತಂಡದ ನಾಯಕ ಸ್ಥಾನ 

ಮುಂಬೈ (ಫೆ.19): ಮುಂಬರುವ ಶ್ರೀಲಂಕಾ (Sri Lanka) ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡದ ನಾಯಕ ಸ್ಥಾನದ ಜವಾಬ್ದಾರಿಯನ್ನೂ ರೋಹಿತ್ ಶರ್ಮ (Rohit Sharma) ಅವರಿಗೆ ನೀಡಲಾಗಿದೆ. ಇದರೊಂದಿಗೆ ಟೆಸ್ಟ್, ಟಿ20 ಹಾಗೂ ಏಕದಿನ ಈ ಮೂರೂ ಮಾದರಿಯಲ್ಲಿ ರೋಹಿತ್ ಶರ್ಮ ಟೀಂ ಇಂಡಿಯಾದ ನಾಯಕರಾಗಿದ್ದಾರೆ. ಶನಿವಾರ ಬಿಸಿಸಿಐ (BCCI) ಈ ನಿರ್ಧಾರವನ್ನು ಪ್ರಕಟಿಸಿದ್ದು, ಟಿ20 ಹಾಗೂ ಟೆಸ್ಟ್ ತಂಡಗಳಿಗೆ ಜಸ್ ಪ್ರೀತ್ ಬುಮ್ರಾ (Jasprit Bumrah)ಉಪನಾಯಕರಾಗಿ ಇರಲಿದ್ದಾರೆ ಎಂದು ಹೇಳಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೆಟ್ಟ ನಿರ್ವಹಣೆ ತೋರಿದ್ದ ಅನುಭವಿ ಬ್ಯಾಟ್ಸ್ ಮನ್ ಗಳಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈಬಿಡಲಾಗಿದೆ. ಇನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ವಿರಾಟ್ ಕೊಹ್ಲಿ (Virat Kohli) ಹಾಗೂ ರಿಷಭ್ ಪಂತ್ ಗೆ (Rishabh Pant) ವಿಶ್ರಾಂತಿ ನೀಡಲಾಗಿದ್ದರೆ, ಶಾರ್ದೂಲ್ ಠಾಕೂರ್ ಅವರನ್ನು ಟೆಸ್ಟ್ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗುವುದು ಎಂದು ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ತಿಳಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಹಾಗೂ ಕೆಎಲ್ ರಾಹುಲ್ (KL Rahul) ಗಾಯದ ಕಾರಣದಿಂದಾಗಿ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದರೆ, ಹಿರಿಯ ಬೌಲರ್ ಗಳ ವಾಪಸಾತಿಯಿಂದ ಟೀಂ ಇಂಡಿಯಾ ಇನ್ನಷ್ಟು ಬಲಿಷ್ಠವಾಗಿದೆ. ಜಸ್ ಪ್ರೀತ್ ಬುಮ್ರಾ ಅವರೊಂದಿಗೆ ಗಾಯದಿಂದಾಗಿ ಕೆಲ ತಿಂಗಳಿನಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ, ಟಿ20 ತಂಡಕ್ಕೆ ವಾಪಸಾಗಿದ್ದಾರೆ.

ಟಿ20 ಸರಣಿಗೆ ವಿಶ್ರಾಂತಿ ಪಡೆದುಕೊಂಡಿರುವ ಕೊಹ್ಲಿ ಹಾಗೂ ರಿಷಭ್ ಪಂತ್ ಟೆಸ್ಟ್ ಸರಣಿಗೆ ವಾಪಸಾಗಲಿದ್ದಾರೆ. ಚೇತೇಶ್ವರ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆಯನ್ನು (Ajinkya Rahane) ತಂಡದಿಂದ ಕೈಬಿಡುವ ಕುರಿತಾಗಿ ದೀರ್ಘ ಚರ್ಚೆಗಳು ನಡೆದವು. ಸಾಕಷ್ಟು ಅವಕಾಶಗಳ ಹೊರತಾಗಿಯೂ ಹಿರಿಯ ಆಟಗಾರರು ಜವಾಬ್ದಾರಿ ತೋರದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದ್ದರೆ, ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಹಾಗೂ ಇಶಾಂತ್ ಶರ್ಮ ಅವರನ್ನೂ ಕೂಡ ತಂಡದಿಂದ ಹೊರದಬ್ಬಲಾಗಿದೆ. ಶ್ರೇಯಸ್ ಅಯ್ಯರ್ ಹಾಗೂ ಹನುಮ ವಿಹಾರಿಗೆ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕ ಜವಾಬ್ದಾರಿ ನೀಡಲಾಗಿದ್ದರೆ, ರಾಹುಲ್ ಅಲಭ್ಯತೆಯಲ್ಲಿ ಮಯಾಂಕ್ ಅಗರ್ವಾಲ್ ಅವರು ರೋಹಿತ್ ಶರ್ಮ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಜಸ್ ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ಮೊಹಮದ್ ಸಿರಾಜ್ ಮೊದಲ ಆಯ್ಕೆಯ ಬೌಲಿಂಗ್ ವಿಭಾಗವಾಗಿದ್ದರೆ, ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಜಯಂತ್ ಯಾದವ್ ಟೆಸ್ಟ್ ತಂಡದ ಸ್ಪಿನ್ ಬೌಲಿಂಗ್ ಆಯ್ಕೆಯಾಗಿದ್ದಾರೆ.

Scroll to load tweet…


ಫೆಬ್ರವರಿ 24 ರಿಂದ ಮಾರ್ಚ್ 16ರವರೆಗೆ ಶ್ರೀಲಂಕಾ ತಂಡ ಭಾರತ ಪ್ರವಾಸ ಮಾಡಲಿದ್ದು,, ಮೂರು ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಫೆಬ್ರವರಿ 24, 26 ಹಾಗೂ 27 ರಂದು ಟಿ20 ಪಂದ್ಯಗಳು ನಿಗದಿಯಾಗಿದ್ದು ಮೊದಲ ಪಂದ್ಯ ಲಕ್ನೋದಲ್ಲಿ ನಡೆಯಲಿದ್ದರೆ, ಕೊನೆಯ ಎರಡು ಟಿ20 ಪಂದ್ಯಗಳು ಧರ್ಮಶಾಲಾದಲ್ಲಿ ನಡೆಯಲಿದೆ. ಮಾರ್ಚ್ 4-8ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದರೆ, ಮಾರ್ಚ್ 12 ರಿಂದ 16ರವರೆಗೆ ಬೆಂಗಳೂರಿನಲ್ಲಿ(Bengaluru) ಅಹರ್ನಿಶಿಯಾಗಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.

Ind vs WI: ವಿಂಡೀಸ್ ಎದುರಿನ ಟಿ20 ಸರಣಿಗೂ ಮುನ್ನ ಕೊಹ್ಲಿ ಕುರಿತಂತೆ ವಿಶೇಷ ಮನವಿ ಮಾಡಿದ ರೋಹಿತ್ ಶರ್ಮಾ
ಟಿ20 ತಂಡ: ರೋಹಿತ್ ಶರ್ಮ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್ ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಆವೇಶ್ ಖಾನ್.

IND vs WI T20 ರೋಹಿತ್ ಅಬ್ಬರ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು!​​​​​​​
ಟೆಸ್ಟ್ ತಂಡ: ರೋಹಿತ್ ಶರ್ಮ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮವಿಹಾರಿ, ಶುಭ್ ಮಾನ್ ಗಿಲ್, ರಿಷಭ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್ (ಫಿಟ್ ಇದ್ದಲ್ಲಿ), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ (ಉಪನಾಯಕ), ಮೊಹಮದ್ ಶಮಿ, ಮೊಹಮದ್ ಸಿರಾಜ್, ಉಮೇಶ್ ಯಾಧವ್, ಸೌರಭ್ ಕುಮಾರ್