Ind vs WI: ವಿಂಡೀಸ್ ಎದುರಿನ ಟಿ20 ಸರಣಿಗೂ ಮುನ್ನ ಕೊಹ್ಲಿ ಕುರಿತಂತೆ ವಿಶೇಷ ಮನವಿ ಮಾಡಿದ ರೋಹಿತ್ ಶರ್ಮಾ
ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಫೆಬ್ರವರಿ 16ರಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಲಿದೆ. ಟಿ20 ಸರಣಿಗೂ ಮುನ್ನ ಮತ್ತೊಮ್ಮೆ ವಿರಾಟ್ ಕೊಹ್ಲಿಯವರ (Virat Kohli) ಬ್ಯಾಟಿಂಗ್ ಫಾರ್ಮ್ ಮತ್ತೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದೀಗ ವಿರಾಟ್ ಕೊಹ್ಲಿಯ ಕುರಿತಂತೆ ರೋಹಿತ್ ಶರ್ಮಾ (Rohit Sharma) ಮಾಧ್ಯಮದವರಲ್ಲಿ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಗೆದ್ದು ಬೀಗಿದೆ. ಇದೀಗ ಉಭಯ ತಂಡಗಳು ಬುಧವಾರ(ಫೆ.16)ದಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿವೆ.
ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಕರ್ಷಣೆಯ ಕೇಂದ್ರ ಬಿಂದುವೆನಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ದೊಡ್ಡ ಮೊತ್ತ ಗಳಿಸಲು ವಿಫಲವಾಗುತ್ತಾ ಬಂದಿರುವ ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 2019ರ ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನೇ ಬಾರಿಸಿಲ್ಲ.
ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗೂ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ ಮತ್ತೊಮ್ಮೆ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ನೀವು ಸದಾ ಕಾಲ ಕೊಹ್ಲಿಯ ಫಾರ್ಮ್ ಬಗ್ಗೆ ಆಲೋಚಿಸುವುದನ್ನು ಬಿಡಿ. ಅವರಿಗೆ ಕೊಂಚ ಸಮಯ ಸಿಕ್ಕಿದರೆ, ಎಲ್ಲವೂ ಸರಿಯಾಗುತ್ತದೆ ಎಂದು ಮಾಧ್ಯಮದವರಿಗೆ ಹಿಟ್‌ಮ್ಯಾನ್ ಮನವಿ ಮಾಡಿಕೊಂಡಿದ್ದಾರೆ.
ನನಗನಿಸುತ್ತದೆ, ಇದೆಲ್ಲಾ ನಿಮ್ಮಿಂದನೇ ಆರಂಭವಾಗಿದ್ದು. ನೀವು ಕೆಲಕಾಲ ಸುಮ್ಮನಿದ್ದರೆ, ಎಲ್ಲವೂ ಸರಿಯಾಗುತ್ತದೆ. ನಿಮ್ಮ ಕಡೆಯಿಂದ ಮಾತನಾಡುವುದು ನಿಲ್ಲಿಸಿದರೆ, ಎಲ್ಲವೂ ಸರಿಯಾಗುತ್ತದೆ. ಅವರಿಗೆ ಸೂಕ್ತ ಕಾಲಾವಕಾಶ ಸಿಗಬೇಕು, ಅವರು ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ದೊಡ್ಡ ಇನಿಂಗ್ಸ್ ಆಡುವ ವಿಶ್ವಾಸವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂದು ಅವರಿಗೆ ಗೊತ್ತಿದೆ. ನನಗನಿಸುತ್ತದೆ, ಇದೆಲ್ಲವೂ ಮಾಧ್ಯಮದರಾದ ನಿಮ್ಮಿಂದಲೇ ಆರಂಭವಾಗಿದ್ದು. ನೀವೆಲ್ಲರೂ ಕೆಲಕಾಲ ಸುಮ್ಮನಿದ್ದರೆ, ಎಲ್ಲವೂ ಸರಿ ಹೋಗುತ್ತದೆ. ಕೊಹ್ಲಿ ಕುರಿತಂತೆ ಸುಖಾಸುಮ್ಮನೆ ಆರೋಪಗಳನ್ನು ಮಾಡುವುದನ್ನು ತಾವು ಸಹಿಸುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಈ ಮೊದಲು, ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಮಾಧ್ಯಮದವರು, ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ಆತ್ಮವಿಶ್ವಾದ ಕೊರತೆಯನ್ನು ಎದುರಿಸುತ್ತಿದ್ದರಾ ಎನ್ನುವ ಪ್ರಶ್ನೆಗೆ ನಗುತ್ತಾ ಪ್ರತಿಕ್ರಿಯಿಸಿದ್ದ ರೋಹಿತ್ ಶರ್ಮಾ, ಕೊಹ್ಲಿಗೆ ಆತ್ಮ ವಿಶ್ವಾಸದ ಕೊರತೆ..! ಏನು ಅಂತ ಮಾತನಾಡುತ್ತಿದ್ದೀರಾ? ಎಂದು ಉತ್ತರಿಸುವ ಮೂಲಕ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.