ನವದೆಹಲಿ(ಏ.18): ವಿಶ್ವ ಟೆಸ್ಟ್‌ ಹಾಗೂ ಏಕದಿನ ಚಾಂಪಿಯನ್‌ಶಿಪ್‌ಗಳನ್ನು ರದ್ದುಗೊಳಿಸುವಂತೆ ಐಸಿಸಿ ಮೇಲೆ ಬಿಸಿಸಿಐ, ಇಂಗ್ಲೆಂಡ್‌, ಆಸ್ಪ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಒತ್ತಡ ಹೇರುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಮುಂದಿನ ವರ್ಷ ಐಪಿಎಲ್‌ ಸೇರಿದಂತೆ ಪ್ರಬಲ ಕ್ರಿಕೆಟ್‌ ರಾಷ್ಟ್ರಗಳಾದ ಆಸ್ಪ್ರೇಲಿಯಾ, ಇಂಗ್ಲೆಂಡ್‌ನ ತವರಿನ ಸರಣಿಗಳ ಪ್ರಸಾರ ಹಕ್ಕು ಹರಾಜು ನಡೆಯಲಿದೆ. ಟೆಸ್ಟ್‌ ಹಾಗೂ ಏಕದಿನ ಚಾಂಪಿಯನ್‌ಶಿಪ್‌ನಿಂದಾಗಿ ಕ್ರಿಕೆಟ್‌ ಮಂಡಳಿಗಳು ತಮಗೆ ಅನುಕೂಲವಾಗುವಂತೆ ದ್ವಿಪಕ್ಷೀಯ ಸರಣಿಗಳು ಆಯೋಜಿಸಲು ಸಾಧ್ಯವಾಗುವುದಿಲ್ಲ. ಜತೆಗೆ ಐಸಿಸಿ ವರ್ಷಕ್ಕೊಂದು ವಿಶ್ವಕಪ್‌ ನಡೆಸಲು ಚಿಂತನೆ ನಡೆಸುತ್ತಿದೆ. ಹೀಗಾಗಿ, ಪ್ರಸಾರ ಹಕ್ಕು ಹಣ ನಷ್ಟವಾಗಲಿದೆ ಎನ್ನುವ ಕಾರಣಕ್ಕೆ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ರದ್ದುಗೊಳಿಸಲು ಒತ್ತಡ ಹೇರುತ್ತಿವೆ ಎನ್ನಲಾಗಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ವಿಶ್ವ ಟಿ20ಗೂ ಕೊರೋನಾ ಅಡ್ಡಿ?

ಕೊರೋನಾ ವೈರಸ್‌ನಿಂದಾಗಿ ಐಸಿಸಿಯ ಎಲ್ಲಾ ಕ್ರೀಡಾಚಟುವಟಿಕೆಗಳ ವೇಳಾಪಟ್ಟಿಗಳು ತಲೆ ಕೆಳಗಾಗಿವೆ. ಇನ್ನು ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೂಡಾ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಐಸಿಸಿ 2019ರ ಜುಲೈನಲ್ಲಿ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿತ್ತು. ಈ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಸೇರಿ ಒಟ್ಟು 9 ತಂಡಗಳು ಅರ್ಹತೆಗಿಟ್ಟಿಸಿಕೊಂಡಿದ್ದವು. ಈ ಎಲ್ಲಾ ತಂಡಗಳು ಮುಂಬರುವ ಎರಡು ವರ್ಷಗಳಲ್ಲಿ 27 ಸರಣಿಗಳಿಂದ ಒಟ್ಟು 71 ಪಂದ್ಯಗಳನ್ನು ಆಡಬೇಕಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು 2021ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದು, ವಿಜೇತ ತಂಡವು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಲಿದೆ. 

ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವೇನು..?

ಇದುವರೆಗೂ ಎಲ್ಲಾ 9 ತಂಡಗಳು ಸೇರಿ ಒಟ್ಟು 56 ಟೆಸ್ಟ್ ಪಂದ್ಯಗಳನ್ನಾಡಿವೆ. ಟೀಂ ಇಂಡಿಯಾ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 296 ಅಂಕ ಗಳಿಸಿರುವ ಆಸ್ಟ್ರೇಲಿಯಾ ಹಾಗೂ 180 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್‌ ತಂಡಗಳು ಟಾಪ್ 3 ಪಟ್ಟಿಯಲ್ಲಿ ಭದ್ರವಾಗಿವೆ.