ಬೆಂಗಳೂರು(ಮಾ.21): ಮಾರಕ ಕೊರೋನಾ ಸೋಂಕಿನ ಭೀತಿ ಇನ್ನೂ ಕೆಲ ತಿಂಗಳುಗಳ ಕಾಲ ಇರುವ ಸಾಧ್ಯತೆ ಇದ್ದು, ಸಂಪೂರ್ಣವಾಗಿ ಸ್ತಬ್ಧಗೊಂಡಿರುವ ಕ್ರೀಡಾ ಜಗತ್ತಿಗೇ ದೊಡ್ಡ ಪೆಟ್ಟು ನೀಡುತ್ತಿದೆ. 4 ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್‌ ಕ್ರೀಡಾಕೂಟವನ್ನೇ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿರುವಾಗ ಇನ್ನು ವರ್ಷಪೂರ್ತಿ ನಡೆಯುವ ಕ್ರಿಕೆಟ್‌ ಟೂರ್ನಿಗಳಿಗೂ ಸಮಸ್ಯೆ ಆಗದೆ ಇರುತ್ತದೆಯೇ. ಎರಡನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಕ್ರಿಕೆಟ್‌ ಜಗತ್ತು ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

IPL 2020ಗೆ ತಯಾರಿ ನಡೆಸುತ್ತಿರುವ ಬಿಸಿಸಿಐಗೆ ಶಾಕ್ ನೀಡಿದ ಕೇಂದ್ರ ಕ್ರೀಡಾ ಸಚಿವ ರಿಜಿಜು!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿ ಮಾತ್ರವಲ್ಲ ಇನ್ನೂ ಹಲವು ಟೂರ್ನಿಗಳನ್ನು ಮುಂದೂಡಬೇಕಾಗಬಹುದು ಎನ್ನುವ ಲೆಕ್ಕಾಚಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಕಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಐಸಿಸಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಯಾವೆಲ್ಲಾ ಟೂರ್ನಿಗಳಿಗೆ ಸಮಸ್ಯೆಯಾಗಬಹುದು ಎನ್ನುವ ವಿವರ ಇಲ್ಲಿದೆ.

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

2019ರ ಏಕದಿನ ವಿಶ್ವಕಪ್‌ ಮುಗಿಯುತ್ತಿದ್ದಂತೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭಗೊಂಡಿತು. ಟೂರ್ನಿ ಅಗ್ರ 9 ಟೆಸ್ಟ್‌ ರಾಷ್ಟ್ರಗಳ ನಡುವೆ ನಡೆಯುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು 2021ರ ಜೂನ್‌ನಲ್ಲಿ ಲಾರ್ಡ್ಸ್ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸೆಣಸಲಿದೆ. ಮಾರ್ಚ್‌ನಲ್ಲಿ  ನಡೆಯಬೇಕಿದ್ದ ಶ್ರೀಲಂಕಾ ಹಾಗೂ ಇಂಗ್ಲೆಂಡ್‌ ನಡುವಿನ 2 ಟೆಸ್ಟ್‌ ಪಂದ್ಯಗಳ ಸರಣಿ ಈಗಾಗಲೇ ಮುಂದೂಡಲ್ಪಟ್ಟಿದೆ. ಜೂನ್‌ನಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ನಡುವೆ 3 ಪಂದ್ಯಗಳ ಸರಣಿ, ಜುಲೈನಲ್ಲಿ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವೆ 3 ಪಂದ್ಯಗಳ ಸರಣಿ, ವೆಸ್ಟ್‌ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2 ಟೆಸ್ಟ್‌, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವೆ 3 ಟೆಸ್ಟ್‌, ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ನಡುವೆ 2 ಟೆಸ್ಟ್‌, ನವೆಂಬರ್‌-ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ನಡುವೆ 3 ಟೆಸ್ಟ್‌, ಡಿಸೆಂಬರ್‌-ಜನವರಿ (2021)ರಲ್ಲಿ ಭಾರತ-ಆಸ್ಪ್ರೇಲಿಯಾ ನಡುವೆ 4 ಟೆಸ್ಟ್‌, ನ್ಯೂಜಿಲೆಂಡ್‌-ಪಾಕಿಸ್ತಾನ ನಡುವೆ 2 ಟೆಸ್ಟ್‌ ಪಂದ್ಯಗಳ ಸರಣಿ ನಡೆಯಬೇಕಿದೆ.

ಮನೆಯಲ್ಲೇ ಇರಿ ಆರೋಗ್ಯವಾಗಿರಿ: ವಿರುಷ್ಕಾ ಜೋಡಿಯ ಮನವಿ

ಐಸಿಸಿ ಏಕದಿನ ಲೀಗ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಜತೆಯಲ್ಲೇ ಏಕದಿನ ಲೀಗ್‌ ಸಹ ನಡೆಸಲು ಐಸಿಸಿ ಒಪ್ಪಿಗೆ ನೀಡಿದೆ. ಮೇ 1ರಿಂದ ಲೀಗ್‌ಗೆ ಚಾಲನೆ ಸಿಗಲಿದೆ ಮಾ.31, 2022ರ ವರೆಗೂ ನಡೆಯಲಿದೆ. ಈ ಲೀಗ್‌ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಅರ್ಹತಾ ಟೂರ್ನಿಗಳಾಗಿರಲಿದೆ. ಲೀಗ್‌ನಲ್ಲಿ 12 ಟೆಸ್ಟ್‌ ಆಡುವ ರಾಷ್ಟ್ರಗಳ ಜತೆ ನೆದರ್‌ಲೆಂಡ್ಸ್‌ ಸಹ ಸ್ಪರ್ಧಿಸಲಿದೆ. 2 ವರ್ಷಗಳಲ್ಲಿ ಪ್ರತಿ ತಂಡ 8 ಸರಣಿಗಳನ್ನು ಆಡಲಿದ್ದು, ಭಾರತ (ಆತಿಥ್ಯ ವಹಿಸುವ ರಾಷ್ಟ್ರ) ಹಾಗೂ ಅಗ್ರ ಸ್ಥಾನ ಪಡೆಯುವ 7 ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿವೆ. ಕೊನೆ 5 ಸ್ಥಾನಗಳನ್ನು ಪಡೆಯುವ ತಂಡಗಳು ಅರ್ಹತಾ ಟೂರ್ನಿಯಲ್ಲಿ ಸ್ಪರ್ಧಿಸಬೇಕಿದೆ.

ಏಷ್ಯಾಕಪ್‌ ಟಿ20

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌ ಟಿ20 ಟೂರ್ನಿ ನಡೆಯಬೇಕಿದೆ. ಏಷ್ಯಾ ಕ್ರಿಕೆಟ್‌ ಸಂಸ್ಥೆ (ಎಸಿಸಿ) ನಡೆಸಲಿರುವ ಟೂರ್ನಿಯ ವೇಳಾಪಟ್ಟಿಇನ್ನೂ ಪ್ರಕಟಗೊಂಡಿಲ್ಲ. ಭಾರತ ಸೇರಿದಂತೆ 6 ರಾಷ್ಟ್ರಗಳು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ಈ ತಿಂಗಳಾಂತ್ಯದಲ್ಲಿ ಟೂರ್ನಿ ಎಲ್ಲಿ ನಡೆಯಲಿದೆ ಎನ್ನುವುದು ನಿರ್ಧಾರವಾಗಲಿದೆ.

ಪುರುಷರ ಟಿ20 ವಿಶ್ವಕಪ್‌

ಮಹಿಳಾ ಟಿ20 ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಳಿಕ ಆಸ್ಪ್ರೇಲಿಯಾ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗೂ ಆತಿಥ್ಯ ನೀಡಲು ಸಜ್ಜಾಗುತ್ತಿದೆ. ಅ.18ರಿಂದ ನ.15ರ ವರೆಗೂ ಟೂರ್ನಿ ನಡೆಯಬೇಕಿದ್ದು, 16 ತಂಡಗಳು ಪಾಲ್ಗೊಳ್ಳಲಿವೆ. ಅರ್ಹತಾ ಸುತ್ತಿನಲ್ಲಿ 8 ತಂಡಗಳು ಸ್ಪರ್ಧಿಸಲಿದ್ದು, 4 ತಂಡಗಳು ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿವೆ. ಸೂಪರ್‌ 12 ಹಂತದಲ್ಲಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.