ಆರ್‌ಸಿಬಿ ತಾರೆಯ ನಡೆಯನ್ನು ಗಟ್ಟಿಯಾಗಿ ಪ್ರಶ್ನಿಸಿದ ಲಖನೌ ಮೆಂಟರ್‌ ಗಂಭೀರ್‌ಸಾಮಾಜಿಕ ತಾಣಗಳಲ್ಲಿ ಘಟನೆಯ ವಿಡಿಯೋ ವೈರಲ್‌ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಇಬ್ಬರಿಗೂ ಪಂದ್ಯದ ಸಂಭಾವನೆಯ ಶೇ.100ರಷ್ಟುದಂಡ

ನವದೆಹಲಿ(ಮೇ.03): ತೀರಾ ಕಡಿಮೆ ಎನಿಸಿದ್ದ ಮೊತ್ತವನ್ನು ರಕ್ಷಿಸಿಕೊಳ್ಳಲು ಆರ್‌ಸಿಬಿ ಯತ್ನಿಸುತ್ತಿದ್ದಾಗ ವಿರಾಟ್‌ ಕೊಹ್ಲಿ ತುಸು ಹೆಚ್ಚಾಗೇ ಲಖನೌ ಆಟಗಾರರನ್ನು ಕೆಣಕುವ ಮೂಲಕ ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸಿದರು. ಕೊಹ್ಲಿಯ ಐಡಿಯಾ ಕೈಹಿಡಿದರೂ, ಕೊನೆಯಲ್ಲಿ ಲಖನೌ ತಂಡದ ಮಾರ್ಗದರ್ಶಕ(ಮೆಂಟರ್‌), ತಂಡದ ರಿಮೋಟ್‌ ಕಂಟ್ರೋಲ್‌ ನಾಯಕ ಎಂದೇ ಕರೆಸಿಕೊಳ್ಳುವ ಗೌತಮ್‌ ಗಂಭೀರ್‌ ಜೊತೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು.

ಈ ಪ್ರಸಂಗದ ಬಗ್ಗೆ ಕ್ರಿಕೆಟ್‌ ವಲಯದಲ್ಲಿ, ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು ಇಬ್ಬರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುವ, ಟ್ರೋಲ್‌ ಮಾಡುವ ಪ್ರಸಂಗಗಳು ನಡೆಯುತ್ತಿವೆ. ಹಾಲಿ, ಮಾಜಿ ಕ್ರಿಕೆಟಿಗರು ಬಹಿರಂಗವಾಗಿಯೇ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ವರ್ತನೆಯನ್ನು ಖಂಡಿಸಿದ್ದಾರೆ. ಇನ್ನು ಐಪಿಎಲ್‌ ಆಡಳಿತ ಮಂಡಳಿ ಇಬ್ಬರ ಪಂದ್ಯ ಸಂಭಾವನೆಯ ಶೇ.100ರಷ್ಟುಮೊತ್ತವನ್ನು ದಂಡವಾಗಿ ವಿಧಿಸಿದೆ. ಈ ಘಟನೆಯಲ್ಲಿ ಲಖನೌ ವೇಗಿ ನವೀನ್‌-ಉಲ್‌-ಹಕ್‌ರ ಪಾತ್ರವೂ ಇದ್ದಿದ್ದರಿಂದ ಅವರಿಗೂ ಪಂದ್ಯದ ಸಂಭಾವನೆಯ ಶೇ.50ರಷ್ಟುಮೊತ್ತವನ್ನು ದಂಡ ಹಾಕಲಾಗಿದೆ.

ಕೊಹ್ಲಿ-ಗಂಭೀರ್‌ ನಡುವೆ ಆಗಿದ್ದೇನು?

ತಂಡವೊಂದರ ಡಗೌಟ್‌ನಲ್ಲಿ ಕೂತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಷ್ಠಿತ ಸುದ್ದಿ ಸಂಸ್ಥೆಗೆ ಘಟನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ. ‘ಟೀವಿಯಲ್ಲಿ ನೋಡಿದಂತೆ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಮೇಯ​ರ್‍ಸ್ ಮಾತನಾಡುತ್ತಾ ನಡೆಯುತ್ತಿದ್ದರು. ಏಕೆ ನಿರಂತರವಾಗಿ ತಮ್ಮ ತಂಡದ ಆಟಗಾರರನ್ನು ನಿಂದಿಸುತ್ತಿದ್ದಿರಿ ಎಂದು ಮೇಯ​ರ್‍ಸ್ ಕೊಹ್ಲಿಯನ್ನು ಕೇಳಿದಾಗ, ನೀವೇಕೆ(ಮೇಯ​ರ್‍ಸ್) ನನ್ನನ್ನು ಗುರಾಯಿಸಿ ನೋಡಿದಿರಿ ಎಂದು ಕೊಹ್ಲಿ ಮರು ಪ್ರಶ್ನೆ ಕೇಳಿದರು. ಇದಕ್ಕೂ ಮುನ್ನ ಕೊಹ್ಲಿ ಬಿಟ್ಟೂಬಿಡದಂತೆ ನಂ.10 ಬ್ಯಾಟರ್‌ ನವೀನ್‌-ಉಲ್‌-ಹಕ್‌ರ ವಿರುದ್ಧ ಅವಾಚ್ಯ ಶಬ್ಧಗಳ ಬಳಕೆ ಮಾಡುತ್ತಿದ್ದ ಕಾರಣ, ಅವರ ಜೊತೆ ಬ್ಯಾಟ್‌ ಮಾಡುತ್ತಿದ್ದ ಅಮಿತ್‌ ಮಿಶ್ರ ಅಂಪೈರ್‌ಗಳಿಗೆ ದೂರು ನೀಡಿದ್ದರು’.

ನೀನು ನನ್ನ ಕಾಲು ಧೂಳಿಗೆ ಸಮ: ಚರ್ಚೆಗೆ ಗ್ರಾಸವಾದ ವಿರಾಟ್ ಕೊಹ್ಲಿ ವರ್ತನೆ, ವಿಡಿಯೋ ವೈರಲ್

‘ಇದನ್ನು ಗಮನಿಸಿದ ಗಂಭೀರ್‌, ಮೇಯ​ರ್‍ಸ್ರನ್ನು ಕೊಹ್ಲಿ ಜೊತೆ ಮಾತಾಡದಂತೆ ಕರೆದರು. ಇದರಿಂದ ಕೊಹ್ಲಿ ಹಾಗೂ ಗಂಭೀರ್‌ ನಡುವೆ ಮಾತಿನ ಚಕಮಕಿ ಶುರುವಾಯಿತು’ ಎಂದು ವಿವರಿಸಿದ್ದಾರೆ. ‘‘ಗಂಭೀರ್‌, ‘ನೀನೇನು ಹೇಳುತ್ತಿದ್ದೀಯ ಈಗ ಹೇಳು’ ಎಂದು ಪ್ರಶ್ನಿಸಿದಾಗ ‘ನಾನು ನಿಮಗೇನು ಹೇಳಿಲ್ಲ. ನೀವೇಕೆ ತಲೆಹಾಕುತ್ತಿದ್ದೀರಿ’ ಎಂದು ಉತ್ತರಿಸಿದರು. ಇದಕ್ಕೆ ಗಂಭೀರ್‌ ‘ನೀನು ನನ್ನ ಆಟಗಾರನನ್ನು ನಿಂದಿಸಿದರೆ ನನ್ನ ಕುಟುಂಬವನ್ನು ನಿಂದಿಸಿದ ಹಾಗೆ’ ಎಂದರು. ಇದಕ್ಕೆ ಕೊಹ್ಲಿ, ‘ಹಾಗಿದ್ದರೆ ನಿಮ್ಮ ಕುಟುಂಬವನ್ನು ನೀವು ಸರಿಯಾಗಿ ನಿರ್ವಹಿಸಿ’ ಎಂದರು. ಗಂಭೀರ್‌ರನ್ನು ಕೆ.ಎಲ್‌.ರಾಹುಲ್‌ ಸೇರಿ ಇತರರು ಕರೆದೊಯ್ಯುವ ಮುನ್ನ, ‘ಹಾಗಿದ್ದರೆ, ಈಗ ನಾನು ನಿನ್ನಿಂದ ಕಲಿಯಬೇಕಾ’ ಎಂದರು’’ ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.

ಕೊಹ್ಲಿ vs ಗಂಭೀರ್‌ ಕಿತ್ತಾಟ ಹೊಸದೇನಲ್ಲ!

2013ರಲ್ಲಿ ಕೊಹ್ಲಿ ಭಾರತ ತಂಡದ ಸೂಪರ್‌ಸ್ಟಾರ್‌ ಆಗುವತ್ತ ಸಾಗಿದ್ದರು. ಭಾರತ ತಂಡದಿಂದ ಹೊರಬಿದ್ದಿದ್ದ ಗಂಭೀರ್‌ ಆಗ ಕೆಕೆಆರ್‌ ನಾಯಕ. ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಿನ ಪಂದ್ಯದ ವೇಳೆ ಕೊಹ್ಲಿ ಹಾಗೂ ಗಂಭೀರ್‌ ಮೈದಾನದಲ್ಲೇ ಹೆಚ್ಚೂ ಕಡಿಮೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಬಳಿಕ ಗಂಭೀರ್‌ ಹಲವು ಬಾರಿ ಕೊಹ್ಲಿಯ ನಾಯಕತ್ವದ ಬಗ್ಗೆ ಟೀಕಿಸಿದ್ದಾರೆ. ಇಬ್ಬರು ‘ನಮ್ಮ ನಡುವೆ ಯಾವುದೇ ದ್ವೇಷವಿಲ್ಲ’ ಎಂದು ಹಲವು ಬಾರಿ ಹೇಳಿದ್ದರೂ, ಇಬ್ಬರ ನಡುವಿನ ಶೀತಲ ಸಮರ ಮುಂದುವರಿಯುತ್ತಲೇ ಇದೆ.

ಗಂಭೀರ್‌ ಕಾಲೆಳೆದ ಕೊಹ್ಲಿ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲ ವಾರಗಳ ಹಿಂದೆ ನಡೆದಿದ್ದ ಪಂದ್ಯವನ್ನು ಲಖನೌ ಕೊನೆಯ ಎಸೆತದಲ್ಲಿ ಗೆದ್ದಾಗ ಗಂಭೀರ್‌ ಆರ್‌ಸಿಬಿ ಅಭಿಮಾನಿಗಳಿಗೆ ‘ಬಾಯಿ ಮುಚ್ಚುವಂತೆ’ ಸಂಜ್ಞೆ ಮಾಡಿದ್ದರು. ಸೋಮವಾರ ಕೊಹ್ಲಿ ಅದೇ ರೀತಿ ಮಾಡಿ ಗಂಭೀರ್‌ರ ಕಾಲೆಳೆದರು. ಜೊತೆಗೆ ಪಂದ್ಯದ ಬಳಿಕ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮಾತನಾಡುತ್ತಾ, ‘ಕೆಣಕಲು ಸಿದ್ಧರಿದ್ದರೆ, ಬೇರೆಯವರು ಕೆಣಕಿದಾಗ ಅದನ್ನು ಸ್ವೀಕರಿಸಲೂ ಸಿದ್ಧರಿರಬೇಕು. ಇಲ್ಲವಾದರೆ ಸುಮ್ಮನಿರಬೇಕು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದು, ಆ ವಿಡಿಯೋವನ್ನು ಆರ್‌ಸಿಬಿ ತನ್ನ ಟ್ವೀಟರ್‌ ಖಾತೆ ಮೂಲಕ ಹಂಚಿಕೊಂಡಿದೆ.