ನೀನು ನನ್ನ ಕಾಲು ಧೂಳಿಗೆ ಸಮ: ಚರ್ಚೆಗೆ ಗ್ರಾಸವಾದ ವಿರಾಟ್ ಕೊಹ್ಲಿ ವರ್ತನೆ, ವಿಡಿಯೋ ವೈರಲ್
* ಲಖನೌ ಎದುರು ಗೆದ್ದು ಬೀಗಿದ ಆರ್‌ಸಿಬಿ
* ವಿರಾಟ್ ಕೊಹ್ಲಿ-ನವೀನ್ ಉಲ್ ಹಕ್ ಗಲಾಟೆ ವಿಡಿಯೋ ವೈರಲ್
* ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ನಡೆಯ ಬಗ್ಗೆ ವ್ಯಾಪಕ ಚರ್ಚೆ
ಲಖನೌ(ಮೇ.02): ಹಲವು ಕಾರಣಗಳಿಗಾಗಿ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲಖನೌದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯವು ಕ್ರಿಕೆಟ್ ಅಬಿಮಾನಿಗಳ ಸ್ಮೃತಿಪಟಲದಲ್ಲಿ ಉಳಿಯಲಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಲಖನೌ ತಂಡವನ್ನು 18 ರನ್‌ಗಳಿಂದ ಬಗ್ಗುಬಡಿಯುವ ಮೂಲಕ ತವರಿನಲ್ಲಿ ಅನುಭವಿಸಿದ್ದ ಸೋಲಿನ ಲೆಕ್ಕಚುಕ್ತಾ ಮಾಡುವಲ್ಲಿ ಯಶಸ್ವಿಯಾಗಿತ್ತು. ಪಂದ್ಯ ಮುಕ್ತಾಯದ ಬಳಿಕ ಆರ್‌ಸಿಬಿ ಮಾಜಿ ನಾಯಕ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿಗೂ ಸಾಕ್ಷಿಯಾಯಿತು.
ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಯಾವ ಕಾರಣಕ್ಕೆ ಮಾತಿನ ಚಕಮಕಿ ನಡೆಯಿತು ಎನ್ನುವುದು ಸ್ಪಷ್ಟವಾಗದಿದ್ದರೂ, ಇಬ್ಬರ ಮುಖದಲ್ಲೂ ಸಿಟ್ಟಿನಿಂದ ಆಕ್ರೋಶದ ಭಾವನೆ ವ್ಯಕ್ತಪಡಿಸಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಗಮನಿಸಿದ್ದಾರೆ. ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಗಂಭೀರ್, ತುಟಿಮೇಲೆ ಬೆರಳಿಟ್ಟು ಶಾಂತವಾಗಿರಿ ಎಂದು ಸನ್ನೆ ಮಾಡಿದ್ದರು.
ಇದೀಗ ಲಖನೌದಲ್ಲಿ ನಡೆದ ಪಂದ್ಯದ ವೇಳೆ ಲಖನೌ ಸೂಪರ್ ಜೈಂಟ್ಸ್ ತಂಡದ ವಿಕೆಟ್ ಪತನವಾದಾಗಲೆಲ್ಲಾ ವಿರಾಟ್ ಕೊಹ್ಲಿ, ಕೊಂಚ ಹೆಚ್ಚಾಗಿಯೇ ಉತ್ಸಾಹಭರಿತವಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಲಖನೌ ತಂಡಕ್ಕೆ ತಿರುಗೇಟು ನೀಡುತ್ತಿದ್ದರು. ಇನ್ನು ಲಖನೌ ತಂಡದ ಪರ ಬ್ಯಾಟಿಂಗ್ ಮಾಡಲಿಳಿದಿದ್ದ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವೆ 17ನೇ ಓವರ್‌ನಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.
ಯಾರು ಮೊದಲು ಗಲಾಟೆ ಆರಂಭಿಸಿದರು ಎನ್ನುವುದು ಸ್ಪಷ್ಟವಾಗದಿದ್ದರೂ, ವಾಗ್ವಾದ ದೊಡ್ಡ ಹಂತಕ್ಕೆ ತಿರುಗುವ ಸಾಧ್ಯತೆಯಿತ್ತು. ಈ ಸಂದರ್ಭದಲ್ಲಿ ಅಮಿತ್ ಮಿಶ್ರಾ ಹಾಗೂ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು. ಇಷ್ಟಕ್ಕೆ ಸುಮ್ಮನಾಗದೇ ಆಫ್ಘಾನಿಸ್ತಾನದ ಕ್ರಿಕೆಟಿಗ ಕೊಹ್ಲಿಯ ಬಗ್ಗೆ ಗೊಣಗುವುದನ್ನು ನೋಡಿದ ವಿರಾಟ್ ಕೊಹ್ಲಿ, ತಮ್ಮ ಶೂ ತೋರಿಸಿ, ಧೋಳಿನ ಸನ್ನೆ ಮಾಡಿದರು. ಕೊಹ್ಲಿಯ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ.
ಇನ್ನು ಪಂದ್ಯ ಮುಕ್ತಾಯದ ಬಳಿಕ ನವೀನ್ ಉಲ್ ಹಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ ಸ್ಟೋರಿ, ವಿರಾಟ್ ಕೊಹ್ಲಿಯನ್ನೇ ಗುರಿ ಮಾಡಿ ಹಾಕಿದಂತಿದೆ. "ನೀನು ಯಾವುದನ್ನು ಪಡೆಯಲು ಅರ್ಹನೋ ಅದನ್ನೇ ಪಡೆಯುತ್ತೀಯ, ಅದೇ ನಿಯಮ, ಅದು ಹಾಗೆಯೇ ನಡೆಯುತ್ತದೆ" ಎಂದು ನವೀನ್ ಉಲ್ ಹಕ್ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಇನ್ನು ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಕೂಡಾ ಪಂದ್ಯ ಮುಕ್ತಾಯದ ಬಳಿಕ ಗೂಢಾರ್ಥದ ಸ್ಟೋರಿಯನ್ನು ಪೋಸ್ಟ್ ಮಾಡಿದ್ದು, ರೋಮನ್‌ನ ಮಾಜಿ ಸಾಮ್ರಾಟ ಮಾರ್ಕಸ್ ಆರ್ಲಿಯಸ್ ಅವರ " ನಾವು ಕೇಳುವ ಪ್ರತಿಯೊಂದು ಅಭಿಪ್ರಾಯವಾಗಿರುತ್ತದೆ. ಆದರೆ ಸತ್ಯವಾಗಿರುವುದಿಲ್ಲ. ಪ್ರತಿಯೊಂದು ನಾವು ನೋಡುವುದು ದೃಷ್ಟಿಕೋನವಾಗಿರುತ್ತದೆ, ಆದರೆ ಸತ್ಯವಾಗಿರುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.