ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೆ ಎಲ್ ರಾಹುಲ್ ಭೇಟಿ; ಟೆಂಪಲ್ ರನ್ ಟ್ರೋಲ್ ಮಾಡಿದ ನೆಟ್ಟಿಗರು..!
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ ಎಲ್ ರಾಹುಲ್
ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ
ಕೆ ಎಲ್ ರಾಹುಲ್ ಟೆಂಪಲ್ ರನ್ ಟ್ರೋಲ್ ಮಾಡಿದ ನೆಟ್ಟಿಗರು
ಬೆಂಗಳೂರು(ಜೂ.26): ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಕೆ ಎಲ್ ರಾಹುಲ್, ಗಾಯದ ಸಮಸ್ಯೆಯಿಂದ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದು, ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ ಕ್ಷೇತ್ರರಕ್ಷಣೆ ವೇಳೆ ತೊಡೆ ಸಂದು ಗಾಯಕ್ಕೆ ಒಳಗಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಇದಾದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಭಾರತ ತಂಡದಿಂದ ಹೊರಬಿದ್ದಿದ್ದರು. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಕೆ ಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದು, ಟೆಂಪಲ್ ರನ್ ಆರಂಭಿಸಿದ್ದಾರೆ.
ಹೌದು, ಕನ್ನಡಿಗ ಕೆ ಎಲ್ ರಾಹುಲ್, ಫಿಟ್ನೆಸ್ ಸಮಸ್ಯೆಯ ಜತೆಗೆ ಫಾರ್ಮ್ ಸಮಸ್ಯೆ ಕೂಡಾ ಅನುಭವಿಸುತ್ತಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾಗ ಟೆಂಪಲ್ ರನ್ ಮಾಡಿದ್ದರು. ಇದಾದ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು. ಇದೀಗ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಕೆ ಎಲ್ ರಾಹುಲ್, ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದರು. ಇದಾದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆ ಅವರ ಜತೆ ಮಾತುಕತೆ ನಡೆಸಿದರು. ನಂತರ ವೀರೇಂದ್ರ ಹೆಗಡೆಯವರು ಕೆ ಎಲ್ ರಾಹುಲ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
Yashasvi Jaiswal: ಟೆಸ್ಟ್ ಕ್ರಿಕೆಟ್ನಲ್ಲಿ ಅಬ್ಬರಿಸಲು ರೆಡಿಯಾದ ಪಾನಿಪೂರಿವಾಲಾ..!
ಇನ್ನು ಕೆ ಎಲ್ ರಾಹುಲ್, ಧರ್ಮಸ್ಥಳಕ್ಕೆ ಭೇಟಿ ನೀಡಿದ್ದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಓರ್ವ ನೆಟ್ಟಿಗ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಿಮ್ಮ ಪ್ರದರ್ಶನ ಉತ್ತಮವಾಗುವುದಿಲ್ಲ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಈ ರೆಸ್ಟ್ ಇತಿಹಾಸ ನಿರ್ಮಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈಗ ಇವರು ಫಾರ್ಮ್‌ಗೆ ಮರಳಿದ ಎಂದು ಟ್ವೀಟ್ ಮಾಡಿದ್ದಾರೆ. ಎಲ್ಲರೂ ದೇವಸ್ಥಾನದ ಮೂಲಕವೇ ಗುಣಮುಖರಾಗುತ್ತಿದ್ದಾರೆಯೇ ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾನೆ.
ಏಷ್ಯಾಕಪ್‌ಗೂ ರಾಹುಲ್,ಶ್ರೇಯಸ್ ಗೈರು ಸಾಧ್ಯತೆ
ನವದೆಹಲಿ: ಆಗಸ್ಟ್ 31ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೂ ಭಾರತದ ತಾರಾ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಗೈರಾಗಲಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಐಪಿಎಲ್ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ರಾಹುಲ್, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದರೂ ಏಷ್ಯಾಕಪ್‌ಗೂ ಮುನ್ನ ಫಿಟ್ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇನ್ನು, ಬೆನ್ನು ನೋವಿನಿಂದಾಗಿ ದೀರ್ಘ ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಶ್ರೇಯಸ್ ಕೂಡಾ ಏಷ್ಯಾಕಪ್‌ಗೂ ಮುನ್ನ ಮೈದಾನಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ.