ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಸೀಸ್ ತಂಡ ಪ್ರಕಟ; ಯಾರಿಗೆ ಸಿಕ್ಕಿದೆ ಸ್ಥಾನ?
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ 17 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮೆಲ್ಬರ್ನ್(ನ.13): ಭಾರತ ವಿರುದ್ಧ ಡಿಸೆಂಬರ್ 17ರಿಂದ ಆರಂಭವಾಗಲಿರುವ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ 17 ಆಟಗಾರರನ್ನೊಳಗೊಂಡ ಆಸೀಸ್ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಹಾಗೂ ವಿಲ್ ಪುಕೊವಸ್ಕಿ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಟಿಮ್ ಪೈನೆ ಮುನ್ನಡೆಸಲಿದ್ದು, ವೇಗದ ಬೌಲರ್ ಸೀನ್ ಅಬ್ಬೋಟ್, ಲೆಗ್ ಸ್ಪಿನ್ನರ್ ಮಿಚೆಲ್ ಸ್ವ್ಯಾಪ್‌ಸನ್ ಹಾಗೂ ಆಲ್ರೌಂಡರ್ ಮಿಚೆಲ್ ನೀಸರ್ ಸಹಾ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಟಗಾರರು ಬೇರೆ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರೂ ಸಹ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಮೇಲಿನ ಈ ಐವರು ಆಟಗಾರರು ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಆಸೀಸ್ ಆಯ್ಕೆ ಸಮಿತಿ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಡ್ನಿಯಲ್ಲಿಳಿದ ಟೀಂ ಇಂಡಿಯಾ ಆಟಗಾರರಿಗೆ 14 ದಿನ ಕ್ವಾರಂಟೈನ್..!
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಡಿಸೆಂಬರ್ 17ರಿಂದ ಜನವರಿ 19ರವರೆಗೆ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದ್ದು, ಟೀಂ ಇಡಿಯಾ ವಿದೇಶಿ ನೆಲದಲ್ಲಿ ಆಡುತ್ತಿರುವ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿದೆ.
ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ: ಡೇವಿಡ್ ವಾರ್ನರ್, ವಿಲ್ ಪುಕೊವಸ್ಕಿ, ಜೋ ಬರ್ನ್ಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ತ್ರಾವೀಸ್ ಹೆಡ್, ಮ್ಯಾಥ್ಯೂ ವೇಡ್, ಕ್ಯಾಮರೋನ್ ಗ್ರೀನ್, ಟಿಮ್ ಪೈನೆ(ನಾಯಕ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಸ್ ಹ್ಯಾಜಲ್‌ವುಡ್, ನೇಥನ್ ಲಯನ್, ಜೇಮ್ಸ್ ಪ್ಯಾಟಿನ್‌ಸನ್, ಮಿಚೆಲ್ ನೇಸರ್, ಮಿಚೆಲ್ ಸ್ವ್ಯಾಪ್ಸನ್, ಸೀನ್ ಅಬ್ಬೋಟ್.