ಅಂತೂ ಇಂತೂ ಭಾರಿ ಕಸರತ್ತಿನ ಬಳಿಕವೂ ರಾಜ್ಯ ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಿದ್ಧವಾಗಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ), ಕರ್ನಾಟಕ ಸರ್ಕಾರವು ಅನುಮತಿ ನಿರಾಕರಿಸಿದೆ.

ಬೆಂಗಳೂರು (ಡಿ.24): ಅಂತೂ ಇಂತೂ ಭಾರಿ ಕಸರತ್ತಿನ ಬಳಿಕವೂ ರಾಜ್ಯ ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಿದ್ಧವಾಗಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ), ಕರ್ನಾಟಕ ಸರ್ಕಾರವು ಅನುಮತಿ ನಿರಾಕರಿಸಿದೆ. ಬುಧವಾರ ಚಿನ್ನಸ್ವಾಮಿಯಲ್ಲಿ ಡೆಲ್ಲಿ-ಆಂಧ್ರ ನಡುವೆ ವಿಜಯ್‌ ಹಜಾರೆ ಟೂರ್ನಿಯ ಪಂದ್ಯ ನಡೆಯಬೇಕಿತ್ತು. ತಾರಾ ಆಟಗಾರ ವಿರಾಟ್‌ ಕೊಹ್ಲಿ ಡೆಲ್ಲಿ ಪರ ಆಡಲು ಸಜ್ಜಾಗಿದ್ದರು.

ಆದರೆ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಪಂದ್ಯವನ್ನು ನಗರದ ಹೊರವಲಯದ ದೇವನಹಳ್ಳಿ ಬಳಿ ಇರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌(ಸಿಒಎ)ಗೆ ಸ್ಥಳಾಂತರಿಸಲಾಗಿದೆ. ಅಲ್ಲೂ ಪ್ರೇಕ್ಷಕರಿಗೆ ಅನುಮತಿ ಇಲ್ಲ. ಇದರೊಂದಿಗೆ ಚಿನ್ನಸ್ವಾಮಿಯಲ್ಲಿ ಮತ್ತೆ ಮಹತ್ವದ ಪಂದ್ಯಗಳು ನಡೆಯುವುದನ್ನು ಎದುರು ನೋಡುತ್ತಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದ್ದು, ಮುಂದಿನ ಐಪಿಎಲ್‌ ಪಂದ್ಯಗಳ ಮೇಲೂ ಕರಿನೆರಳು ಆವರಿಸಿದೆ.

ಪೊಲೀಸ್‌ ಆಯುಕ್ತ ಹೇಳಿದ್ದೇನು?

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಅನುಮತಿ ನೀಡಲು ಸರ್ಕಾರ ಸಮ್ಮತಿ ನೀಡಿಲ್ಲ’ ಎಂದರು. ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ ಸಂಬಂಧ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿಯಲ್ಲಿ ಪೊಲೀಸ್‌, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳು ಸದಸ್ಯರಾಗಿದ್ದರು.

ಅಂತೆಯೇ ಕ್ರೀಡಾಂಗಣ ತಪಾಸಣೆ ನಡೆಸಿ ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಸಿತು. ಆದರೆ ಕ್ರಿಕೆಟ್ ಪಂದ್ಯ ಆಯೋಜನೆಗೆ ಸಮಿತಿ ಸಹಮತ ವ್ಯಕ್ತಪಡಿಸಿಲ್ಲ. ಈ ವರದಿ ಹಿನ್ನಲೆಯಲ್ಲಿ ಪಂದ್ಯಾವಳಿ ಆಯೋಜನೆಗೆ ಕೆಎಸ್‌ಸಿಎ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಸಿಂಗ್ ಹೇಳಿದರು. ಕಳೆದ ಜೂ.4ರಂದು ಐಪಿಎಲ್ ಚಾಂಪಿಯನ್‌ ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ, 11 ಮಂದಿ ಅಭಿಮಾನಿಗಳು ಬಲಿಯಾಗಿದ್ದರು. ಈ ದುರ್ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಮುಖ ಕ್ರಿಕೆಟ್ ಪಂದ್ಯಗಳನ್ನು ನಿರ್ಬಂಧಿಸಲಾಗಿದೆ.

ಆದರೆ ಇತ್ತೀಚೆಗೆ ಕೆಎಸ್‌ಸಿಎ ಚುನಾವಣೆ ವೇಳೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್‌ ಪಂದ್ಯ ಆಯೋಜಿಸಲಾಗುತ್ತದೆ’ ಎಂದಿದ್ದರು. ಅಲ್ಲದೆ ಚಿನ್ನಸ್ವಾಮಿಯಲ್ಲಿ ಮತ್ತೆ ಕ್ರಿಕೆಟ್ ಪಂದ್ಯ ಆಯೋಜನೆಗೆ ಹೊಸದಾಗಿ ಕೆಎಸ್‌ಸಿಎ ಚುಕ್ಕಾಣಿ ಹಿಡಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪ್ರಯತ್ನಿಸಿದ್ದರು. ಡಿ.24ರಿಂದ ವಿಜಯ್ ಹಜಾರೆ ಟೂರ್ನಿಯ ಕೆಲ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ನಡೆಸಲು ಕೆಎಸ್‌ಸಿಎ ಯತ್ನಿಸಿತ್ತು. ಆದರೆ ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಕಾಲ್ತುಳಿತ ಸಂಬಂಧ ನ್ಯಾ.ಕುನ್ಹಾ ವರದಿ ಅನುಸಾರ ಪೊಲೀಸರು ವಿಧಿಸಿದ್ದ ನಿಯಮಗಳ ಪಾಲನೆಗೆ ಕೆಎಸ್‌ಸಿಎ ಸಮ್ಮತಿಸದೆ ಹೋಗಿದ್ದು ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿ ಸಹಮತ ವ್ಯಕ್ತಪಡಿಸಿಲ್ಲ. ಹೀಗಾಗಿ ಪಂದ್ಯಾವಳಿ ನಡೆಸಲು ಅನುಮತಿ ನಿರಾಕರಿಸಲಾಗಿದೆ.
- ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ