Asianet Suvarna News Asianet Suvarna News

County Cricket: ಸಸೆಕ್ಸ್‌ ಪರ ಸತತ ಮೂರನೇ ಶತಕ ಸಿಡಿಸಿ ತೆಂಡುಲ್ಕರ್, ಗವಾಸ್ಕರ್ ಸಾಲಿಗೆ ಸೇರಿದ ಪೂಜಾರ

ಕೌಂಟಿ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ ಚೇತೇಶ್ವರ್ ಪೂಜಾರ
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ಸಾವಿರ ರನ್ ಪೂರೈಸಿದ ಪೂಜಾರ
ದಿಗ್ಗಜ ಸಾಲಿಗೆ ಸೇರ್ಪಡೆಯಾದ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್

Cheteshwar Pujara joins Sachin Tendulkar Sunil Gavaskar In Elite List After Scoring Third Century For Sussex in County kvn
Author
First Published May 6, 2023, 4:50 PM IST

ನವದೆಹಲಿ(ಮೇ.06): ಭಾರತ ಟೆಸ್ಟ್ ತಂಡದ ನಂಬಿಗಸ್ಥ ಬ್ಯಾಟರ್ ಚೇತೇಶ್ವರ್ ಪೂಜಾರ, ಸದ್ಯ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಸಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚೇತೇಶ್ವರ್ ಪೂಜಾರ, ವರ್ಸೆಸ್ಟರ್‌ಶೈರ್ ಎದುರು ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಇದಷ್ಟೇ ಅಲ್ಲದೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19,000+ ರನ್ ಬಾರಿಸಿದ ಭಾರತದ ಆರನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್ ಪೂಜಾರ 19 ಸಾವಿರ ರನ್ ಪೂರೈಸುವ ಮೂಲಕ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್, ವಾಸೀಂ ಜಾಫರ್‌, ರಾಹುಲ್‌ ದ್ರಾವಿಡ್ ಹಾಗೂ ವಿವಿಎಸ್‌ ಲಕ್ಷ್ಮಣ್ ಅವರ ಸ್ಥಾನ ಪೂರೈಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಭಾರತದ ಬ್ಯಾಟರ್ ಎನ್ನುವ ದಾಖಲೆ ಗವಾಸ್ಕರ್ ಹೆಸರಿನಲ್ಲಿದೆ. ಸುನಿಲ್ ಗವಾಸ್ಕರ್ 348 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 25,834 ರನ್‌ ಬಾರಿಸಿದ್ದಾರೆ. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್, 310 ಪಂದ್ಯಗಳನ್ನಾಡಿ 25,396 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. 

ಇನ್ನು ಮುಂಬೈನ ಈ ಇಬ್ಬರು ಆಟಗಾರರ ಬಳಿಕ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್‌, 298 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 23,794 ರನ್‌ ಗಳಿಸಿದ್ದಾರೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್‌ 267 ಪಂದ್ಯಗಳನ್ನಾಡಿ 19,730 ರನ್‌ ಬಾರಿಸಿದ್ದಾರೆ. ಇನ್ನು ರಣಜಿ ಟ್ರೋಫಿಯಲ್ಲಿ ಸಾರ್ವಕಾಲಿಕ ಗರಿಷ್ಠ ರನ್ ಸರದಾರ ಎನಿಸಿಕೊಂಡಿರುವ ವಾಸೀಂ ಜಾಫರ್ ಇದುವರೆಗೂ ಒಟ್ಟು 260 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 19,410 ರನ್‌ ಬಾರಿಸಿದ್ದಾರೆ.

IPL, ಟೆಸ್ಟ್ ವಿಶ್ವಕಪ್‌ನಿಂದ ಹೊರಬಿದ್ದ ಕೆ ಎಲ್ ರಾಹುಲ್..! ಭಾವನಾತ್ಮಕ ಸಂದೇಶ ರವಾನಿಸಿದ ಕನ್ನಡಿಗ

ವರ್ಸೆಸ್ಟರ್‌ಶೈರ್ ನೀಡಿದ್ದ 264 ರನ್‌ಗಳಿಗೆ ಪ್ರತಿಯಾಗಿ ಸಸೆಕ್ಸ್ ತಂಡದ ನಾಯಕ ಚೇತೇಶ್ವರ್ ಪೂಜಾರ 189 ಎಸೆತಗಳನ್ನು ಎದುರಿಸಿ 136 ರನ್ ಬಾರಿಸಿದ್ದಾರೆ. ಚೇತೇಶ್ವರ್ ಪೂಜಾರ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಇದಕ್ಕಾಗಿ ಇಂಗ್ಲೆಂಡ್‌ನಲ್ಲಿಯೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯವು ಜೂನ್ 07ರಿಂದ ಆರಂಭವಾಗಲಿದ್ದು, ಈ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಲಂಡನ್‌ನ ದಿ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ.

Follow Us:
Download App:
  • android
  • ios