ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬೃಹತ್‌ ಮೊತ್ತ ದಾಖಲಿಸಿದೆ. ಆರಂಭಿಕ ಆಟಗಾರ ಡೆವೋನ್‌ ಕಾನ್ವೆ ಹಾಗೂ ಶಿವಂ ದುಬೆ ಆರ್‌ಸಿಬಿ ಬೌಲರ್‌ಗಳಿಗೆ ಅಕ್ಷರಶಃ ಬೆವರಿಳಿಸಿದರು.

ಬೆಂಗಳೂರು (ಏ.17): ಚಿನ್ನಸ್ವಾಮಿ ಸ್ಟೇಡಿಯಂ ಇರೋದೇ ಹಾಗೋ.. ಇಲ್ಲ ಆರ್‌ಸಿಬಿ ಬೌಲಿಂಗ್‌ ಇರೋದೇ ಹೀಗೋ ಅನ್ನೋದು ಅರ್ಥವಾಗುತ್ತಿಲ್ಲ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬೌಲರ್‌ಗಳನ್ನು ಮನಸ್ಸು ಬಂದಂತೆ ಥಳಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟ್ಸ್‌ಮನ್‌ಗಳು ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದಾರೆ. ಇದಕ್ಕೆ ಪ್ರಮುಖವಾಗಿ ಕಾರಣರಾದವರು ಆರಂಭಿಕ ಆಟಗಾರ ಡಿವೋನ್‌ ಕಾನ್ವೆ ಹಾಗೂ ಆಲ್ರೌಂಡರ್‌ ಶಿವಂ ದುಬೆ. ಎದುರಿಸಿದ ಮೊದಲ ಎಸೆತದಿಂದಲೇ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆರ್‌ಸಿಬಿ ಬೌಲರ್‌ಗಳನ್ನು ಚಚ್ಚಬೇಕು ಎನ್ನುವ ಧೋರಣೆ ಇದ್ದಂತೆ ಆಟವಾಡಿದರು. ಇದರಿಂದಾಗಿ ಡಿವೋನ್‌ ಕಾನ್ವೆ ಬರೀ 45 ಎಸೆತಗಳಲ್ಲಿ 83 ರನ್‌ ಸಿಡಿಸಿದರೆ, ಶಿವಂ ದುಬೆ 27 ಎಸೆತಗಳಲ್ಲಿ 52 ರನ್‌ ಸಿಡಿಸಿದರು. 2022ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಬರೀ 46 ಎಸೆತಗಳಲ್ಲಿ ಅಜೇಯ 95 ರನ್‌ ಸಿಡಿಸಿದ್ದ ಶಿವಂ ದುಬೆ ಅದರ ಮುಂದುವರಿದ ಭಾಗದಂತೆ ಬ್ಯಾಟಿಂಗ್‌ ಮಾಡಿದರು. ಚೆನ್ನೈನ ಸೂಪರ್‌ ಸ್ಟಾರ್‌ ಬ್ಯಾಟ್ಸ್‌ಮನ್‌ಗಳ ಭರ್ಜರಿ ಸಾಹಸದಿಂದ ಎಂಎಸ್‌ ಧೋನಿ ಟೀಮ್‌ 6 ವಿಕೆಟ್‌ಗೆ 226 ರನ್‌ ಪೇರಿಸಿದೆ. ಆರ್‌ಸಿಬಿ ತಂಡದ ವೇಗಿ ವೈಶಾಕ್‌ ವಿಜಯ್‌ ಕುಮಾರ್‌ ತಮ್ಮ 4 ಓವರ್‌ಗಳ ಕೋಟಾದಲ್ಲಿ 62 ರನ್‌ ನೀಡಿದರು. ಐಪಿಎಲ್‌ನಲ್ಲಿ ಆರ್‌ಸಿಬಿಯ 2ನೇ ದುಬಾರಿ ಬೌಲರ್‌ ಇವರಾಗಿದ್ದಾರೆ. 2022ರಲ್ಲಿ ಜೋಸ್‌ ಹ್ಯಾಸಲ್‌ವುಡ್‌ 64 ರನ್‌ ನೀಡಿದ್ದು ಕುಖ್ಯಾತಿಯಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌, 200 ಪ್ಲಸ್‌ ರನ್‌ ಗಳಿಸುವುದೇ ಉಎದ್ದೇಶ ಎನ್ನುವಂತೆ ಬ್ಯಾಟಿಂಗ್‌ ಮಾಡಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ಚೆನ್ನೈ 16 ರನ್‌ ಬಾರಿಸುವ ವೇಳೆಗೆ ಮೊದಲ ವಿಕೆಟ್‌ ಕಳೆದುಕೊಂಡಿತು, 6 ಎಸೆತದಲ್ಲಿ 3 ರನ್‌ ಬಾರಿಸಿದ ರುತುರಾಜ್‌ ಗಾಯಕ್ವಾಡ್‌, ಮೊಹಮದ್‌ ಸಿರಾಜ್‌ ಎಸೆತದಲ್ಲಿ ವೇಯ್ನ್‌ ಪರ್ನೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಬಳಿಕ ಕ್ರೀಸ್‌ಗಿಳಿದ ಅಜಿಂಕ್ಯ ರಹಾನೆ (37ರನ್‌, 20 ಎಸೆತ, 3 ಬೌಂಡರಿ, 2 ಸಿಕ್ಸರ್‌) ಕಾನ್ವೆ ಜೊತೆ 2ನೇ ವಿಕೆಟ್‌ಗೆ ಬರೀ 43 ಎಸೆತಗಳಲ್ಲಿ 74 ರನ್‌ ಚಚ್ಚಿದರು. ಆ ವೇಳೆಗಾಗಲೇ ಚೆನ್ನೈ ಪಂದ್ಯದಲ್ಲ 200ಕ್ಕಿಂತ ಅಧಿಕ ಮೊತ್ತ ಬಾರಿಸುವುದು ಖಚಿತವಾಗಿತ್ತು.

ಏಟಿಗೆ ಎದಿರೇಟು, ಕೊಹ್ಲಿ ಎದುರಿನಿಂದಲೇ ಮುಖ ತಿರುಗಿಸಿ ಹೋದ ಸೌರವ್ ಗಂಗೂಲಿ, ವಿಡಿಯೋ ವೈರಲ್!

ಸ್ಪೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಅಜಿಂಕ್ಯ ರಹಾನೆ, ಹಸರಂಗ ಎಸೆತದಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ಆ ನಂತರ ಕಾನ್ವೆಗೆ ಜೊತೆಯಾದ ಶಿವಂ ದುಬೆ, ಅಕ್ಷರಶಃ ಆರ್‌ಸಿಬಿ ಬೌಲರ್‌ಗಳ ಚೆಂಡಾಡಿದರು. ಈ ಜೋಡಿ ಕೇವಲ 37 ಎಸೆತಗಳಲ್ಲಿ 80 ರನ್‌ ಪೇರಿಸಿತು. ಇದರಲ್ಲಿ ಕಾನ್ವೆ ಬರೀ 14 ಎಸೆತದಲ್ಲಿ 34 ರನ್‌ ಚಚ್ಚಿದರೆ, ಶಿವಂ ದುಬೇ 23 ಎಸೆತಗಳಲ್ಲಿ 45 ರನ್‌ ಸಿಡಿಸಿದರು. ಈ ಅವಧಿಯಲ್ಲಿಯೇ ಚೆನ್ನೈ ತಂಡ ದೊಡ್ಡ ಮೊತ್ತದ ನಿರೀಕ್ಷೆಯನ್ನು ಬಲಪಡಿಸಿಕೊಂಡಿತು. ಶತಕ ಬಾರಿಸುವ ವಿಶ್ವಾಸದಲ್ಲಿದ್ದ ಕಾನ್ವೆ 16ನೇ ಓವರ್‌ನಲ್ಲಿ ನಿರ್ಗಮಿಸುವ ವೇಳೆಗೆ ತಂಡ 170 ರನ್‌ ಬಾರಿಸಿತ್ತು.

IPL 1000 Matches: ಐಪಿಎಲ್‌ ಸಹಸ್ರಗಲ್ಲು, ದಾಖಲೆಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಟೇ ಮೈಲಿಗಲ್ಲು!

ಈ ಮೊತ್ತಕ್ಕೆ 8 ರನ್‌ ಬಾರಿಸುವ ವೇಳೆಗೆ ಅರ್ಧಶತಕ ಬಾರಿಸಿದ ಶಿವಂ ದುಬೆ ಕೂಡ ವಿಕೆಟ್ ಒಪ್ಪಿಸಿದಾಗ ಆರ್‌ಸಿಬಿ, ಚೆನ್ನೈ ಬ್ಯಾಟಿಂಗ್‌ಗೆ ನಿಯಂತ್ರಣ ಹೇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಅಂಬಟಿ ರಾಯುಡು (6 ಎಸೆತದಲ್ಲಿ 14 ರನ್‌), ಮೊಯಿನ್‌ ಅಲಿ (9 ಎಸೆತಗಳಲ್ಲಿ 19 ರನ್‌) ಹಾಗೂ ರವೀಂದ್ರ ಜಡೇಜಾ (10) ಬಾರಿಸಿದ ಉಪಯುಕ್ತ ರನ್‌ಗಳಿಂದ 6 ವಿಕೆಟ್‌ಗೆ 226 ರನ್‌ಗಳ ದೊಡ್ಡ ಮೊತ್ತ ಪೇರಿಸಲು ಯಶಸ್ವಿಯಾಯಿತು. ಇನ್ನಿಂಗ್ಸ್‌ ಮುಗಿಯಲು ಬರೀ 2 ಎಸೆತಗಳಿರುವಾಗ ಎಂಎಸ್‌ ಧೋನಿ ಕ್ರೀಸ್‌ಗೆ ಬಂದಾಗ ಇಡೀ ಸ್ಟೇಡಿಯಂನಲ್ಲಿ ದೊಡ್ಡ ಕರತಾಡನ ವ್ಯಕ್ತವಾಯಿತು.

3ನೇ ಗರಿಷ್ಠ ಮೊತ್ತ: ಚೆನ್ನೈ ಬಾರಿಸಿದ 226 ರನ್‌ ಐಪಿಎಲ್‌ನಲ್ಲಿ ತಂಡದ ಮೂರನೇ ಗರಿಷ್ಠ ಮೊತ್ತವಾಗಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಚೆನ್ನೈನಲ್ಲಿ ಬಾರಿಸಿದ 246 ರನ್‌ ಗರಿಷ್ಠ ಮೊತ್ತವಾಗಿದ್ದರೆ, 2008ರಲ್ಲಿ ಮೊಹಾಲಿಯಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗೆ 240 ರನ್‌ ಪೇರಿಸಿದ್ದು 2ನೇ ಗರಿಷ್ಠ ಮೊತ್ತವಾಗಿದೆ.