- Home
- Sports
- Cricket
- IPL 1000 Matches: ಐಪಿಎಲ್ ಸಹಸ್ರಗಲ್ಲು, ದಾಖಲೆಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಟೇ ಮೈಲಿಗಲ್ಲು!
IPL 1000 Matches: ಐಪಿಎಲ್ ಸಹಸ್ರಗಲ್ಲು, ದಾಖಲೆಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಟೇ ಮೈಲಿಗಲ್ಲು!
ಬೆಂಗಳೂರು: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಲಿದೆ. ಮೇ 06ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಐಪಿಎಲ್ ಇತಿಹಾಸದ 1000ನೇ ಐಪಿಎಲ್ ಪಂದ್ಯವಾಗಲಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಪ್ರತಿವರ್ಷ ಹೊಸಹೊಸ ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ಮಾಣವಾಗಿರುವ ಈ 5 ದಾಖಲೆಗಳು ಐಪಿಎಲ್‌ನಲ್ಲಿ ಇದುವರೆಗೂ ಮುರಿಯಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

1. ಒಂದು ಓವರ್‌ನಲ್ಲಿ 6 ಸಿಕ್ಸರ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಬಾರಿ ಆಗಿದೆ
ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಯಾವೊಬ್ಬ ಬ್ಯಾಟರ್ ಕೂಡಾ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಲು ಯಶಸ್ವಿಯಾಗಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಬಾರಿ ಬ್ಯಾಟರ್‌ಗಳು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.
ಹೌದು, ಮೊದಲಿಗೆ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್‌ನಲ್ಲಿ, ಬಳಿಕ ಯುವರಾಜ್ ಸಿಂಗ್ ಹಾಗೂ ಕೀರನ್ ಪೊಲ್ಲಾರ್ಡ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹಾಗೂ ಕೆಲ ಸಮಯದ ಹಿಂದಷ್ಟೇ ಅಮೆರಿಕಾದ ಜಸ್‌ಕರಣ್ ಮಲ್ಹೋತ್ರ ಕೂಡಾ ಏಕದಿನ ಕ್ರಿಕೆಟ್‌ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದಾರೆ.
2. ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಹಿಂದಿಕ್ಕಲೂ ಐಪಿಎಲ್‌ಗೆ ಸಾಧ್ಯವಾಗಿಲ್ಲ:
ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ರನ್ ಮಳೆಯೇ ಸುರಿದಿದೆ. 2013ರ ಐಪಿಎಲ್ ಟೂರ್ನಿಯಲ್ಲಿ ಪುಣೆ ವಾರಿಯರ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿದ್ದು, ಇಲ್ಲಿವರೆಗಿನ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.
ಆದರೆ 2019ರಲ್ಲಿ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ನಡುವಿನ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು 3 ವಿಕೆಟ್ ಕಳೆದುಕೊಂಡು 278 ರನ್ ಬಾರಿಸಿ ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಈ ದಾಖಲೆ ಮುರಿಯಲು ಐಪಿಎಲ್‌ನಲ್ಲಿ ಯಾವ ತಂಡಕ್ಕೂ ಸಾಧ್ಯವಾಗಿಲ್ಲ.
3. ಐಪಿಎಲ್‌ನಲ್ಲಿ ಒಮ್ಮೆಯೂ ಸಾಧ್ಯವಾಗಿಲ್ಲ ಡಬಲ್ ಹ್ಯಾಟ್ರಿಕ್..!
ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದರೆ ಅದನ್ನು ಡಬಲ್ ಹ್ಯಾಟ್ರಿಕ್ ಎಂದು ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಬಾರಿ ಡಬಲ್ ಹ್ಯಾಟ್ರಿಕ್ ನಿರ್ಮಾಣವಾಗಿವೆ.
ಶ್ರೀಲಂಕಾದ ಲಸಿತ್ ಮಾಲಿಂಗ, ಆಫ್ಘಾನಿಸ್ತಾನದ ರಶೀದ್ ಖಾನ್ 2019ರಲ್ಲಿ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದರೆ, ಐರ್ಲೆಂಡ್‌ನ ಕುರ್ಟೀಸ್ ಕ್ಯಾಂಪರ್ 2021ರಲ್ಲಿ ಹಾಗೂ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ 2022ರಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಆದರೆ ಐಪಿಎಲ್‌ನಲ್ಲಿ ಒಮ್ಮೆಯೂ ಇದು ಸಾಧ್ಯವಾಗಿಲ್ಲ.
4. ಅತಿವೇಗದ ಅರ್ಧಶತಕ: 16 ವರ್ಷವೇ ಕಳೆದರೂ ದಾಖಲೆ ಇನ್ನೂ ಯುವಿ ಹೆಸರಲ್ಲೇ ಸೇಫ್
2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡ್ ಎದುರು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವುದರ ಜತೆಗೆ ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ್ದರು.
ಈ ದಾಖಲೆ ನಿರ್ಮಾಣವಾಗಿ 16 ವರ್ಷಗಳೇ ಕಳೆದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಾಗಲಿ ಅಥವಾ ಐಪಿಎಲ್‌ನಲ್ಲಾಗಲಿ ನಿರ್ಮಾಣವಾಗಿಲ್ಲ. ಐಪಿಎಲ್‌ನಲ್ಲಿ ಕೆ ಎಲ್ ರಾಹುಲ್ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದೇ ಇಲ್ಲಿಯವರೆಗಿನ ಐಪಿಎಲ್‌ನ ಅತಿವೇಗದ ಅರ್ಧಶತಕ ಎನಿಸಿದೆ
5. ಶಿಸ್ತುಬದ್ದ ದಾಳಿ: 10 ರನ್‌ನೊಳಗೆ 6 ವಿಕೆಟ್ ಕಬಳಿಸಲು ಐಪಿಎಲ್‌ನಲ್ಲಿ ಸಾಧ್ಯವಾಗಿಲ್ಲ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಡೆಸಿದಂತ ಮಾರಕ ದಾಳಿ ಐಪಿಎಲ್‌ನಲ್ಲಿ ಯಾವ ಬೌಲರ್‌ಗೂ ಸಾಧ್ಯವಾಗಿಲ್ಲ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಬಾರಿ 10 ರನ್‌ಗಳೊಳಗಾಗಿ 6 ವಿಕೆಟ್ ಕಬಳಿಸುವಲ್ಲಿ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ಇದು ಸಾಧ್ಯವಾಗಿಲ್ಲ.
ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಟೀಂ ಇಂಡಿಯಾದ ದೀಪಕ್ ಚಹರ್ ಕೇವಲ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಇದುವರೆಗೂ ಶಿಸ್ತುಬದ್ದ ದಾಳಿ ನಡೆಸಿದ ದಾಖಲೆ ಅಲ್ಜಾರಿ ಜೋಸೆಫ್ ಹೆಸರಿನಲ್ಲಿದೆ. 2019ರ ಐಪಿಎಲ್‌ನಲ್ಲಿ ಜೋಸೆಫ್, ಮುಂಬೈ ಇಂಡಿಯನ್ಸ್ ಪರ ಕೇವಲ 12 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.