ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಡಕ್ ಔಟ್ ಆದಾಗ ಕೋಚ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ನೀಡಿದ ಬೆಂಬಲದಿಂದ ಫಾರ್ಮ್‌ಗೆ ಮರಳಿದ್ದೇನೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ ಅವರು, ತಂಡದ ಬೆಂಬಲವೇ ತನ್ನ ಆತ್ಮವಿಶ್ವಾಸಕ್ಕೆ ಕಾರಣ ಎಂದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಮ್ಯಾಚ್‌ಗಳಲ್ಲಿ 'ಡಕ್ ಔಟ್' ಆಗಿ ಮುಜುಗರ ಅನುಭವಿಸಿದ್ದಾಗ, ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನನ್ನ ಬೆಂಬಲಕ್ಕೆ ನಿಂತರು ಎಂದು ಯುವ ಆಟಗಾರ ಅಭಿಷೇಕ್ ಶರ್ಮಾ ಹೇಳಿಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧ 55 ರನ್ ಗಳಿಸಿ ಫಾರ್ಮ್‌ಗೆ ಮರಳಿದ ಬಳಿಕ, ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ತಂಡದ ಮ್ಯಾನೇಜ್‌ಮೆಂಟ್ ನೀಡಿದ ಆತ್ಮವಿಶ್ವಾಸದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿಷೇಕ್ ಬೆನ್ನಿಗೆ ನಿಂತ ಕೋಚ್-ಕ್ಯಾಪ್ಟನ್

"ನಾನು ಅಂದುಕೊಂಡಂತೆ ಟೂರ್ನಿಯ ಆರಂಭ ಸಿಗಲಿಲ್ಲ. ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ದೇಶಕ್ಕಾಗಿ ಮೊದಲ ಬಾರಿಗೆ ಆಡುವಾಗ ಉತ್ತಮ ಆರಂಭ ಬೇಕು ಅಂತ ಆಸೆ ಇತ್ತು. ಆದರೆ, ಎರಡು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದಿದ್ದು ನನಗೆ ದೊಡ್ಡ ಹಿನ್ನಡೆಯಾಯ್ತು. ಆ ಸಮಯದಲ್ಲೂ ಕೋಚ್ ಮತ್ತು ಕ್ಯಾಪ್ಟನ್ ನನಗೆ ನೀಡಿದ ಬೆಂಬಲ ಬಹಳ ದೊಡ್ಡದು," ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

'ನೀನು ಇನ್ನೊಂದು ಸಲ ಸೊನ್ನೆಗೆ ಔಟಾದರೂ ಪರವಾಗಿಲ್ಲ, ಈ ವಿಶ್ವಕಪ್‌ನ ಎಲ್ಲಾ ಮ್ಯಾಚ್‌ಗಳಲ್ಲೂ ನೀನೇ ಓಪನರ್ ಆಗಿ ಆಡುತ್ತೀಯ. ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ನಿನಗಿದೆ ಅಂತ ನಮಗೆ ನಂಬಿಕೆ ಇದೆ' - ಹೀಗಂತ ಸತತ ಮೂರು ಬಾರಿ ಡಕ್ ಔಟ್ ಆದಾಗ ಕ್ಯಾಪ್ಟನ್ ಮತ್ತು ಕೋಚ್ ನನಗೆ ಹೇಳಿದರು. ಇದು ಕೇವಲ ಒಂದು ತಂಡವಲ್ಲ, ಇದೊಂದು ಕುಟುಂಬ ಅನ್ನೋ ಭಾವನೆ ನನಗಾಯ್ತು. ಎಲ್ಲಾ ಆಟಗಾರರು, ಕೋಚ್‌ಗಳು ನಾನು ಚೆನ್ನಾಗಿ ಆಡಬೇಕೆಂದು ಬಯಸುತ್ತಿದ್ದರು. ನನಗೆ ಬೇಕಾಗಿದ್ದ ಬೆಂಬಲ ಅದೇ ಆಗಿತ್ತು' ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

View post on Instagram

ಇತ್ತೀಚಿನ ದಿನಗಳಲ್ಲಿ ಬೇರೆ ಯಾವ ಯುವ ಆಟಗಾರನಿಗೂ ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ನಿಂದ ಇಂತಹ ಬೆಂಬಲ ಸಿಕ್ಕಿರಲಿಕ್ಕಿಲ್ಲ. ಫಾರ್ಮ್‌ನಲ್ಲಿದ್ದರೆ, ಅಭಿಷೇಕ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲರು. ಇದೇ ಸಾಮರ್ಥ್ಯವೇ ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ಬೆಂಬಲಿಸಲು ಪ್ರೇರೇಪಿಸಿದ್ದು. ಜಿಂಬಾಬ್ವೆ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಕಳಪೆ ಫಾರ್ಮ್‌ನಿಂದ ಹೊರಬಂದಿರುವ ಅಭಿಷೇಕ್ ಶರ್ಮಾ, ಭಾರತದ ಮುಂದಿನ ಪಯಣದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಕ್ವಾರ್ಟರ್‌ ಫೈನಲ್ ರೀತಿಯ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಇದೀಗ ಸೂಪರ್-8 ಹಂತದ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಭಾರತ ತಂಡವು ಇದೀಗ ಮಾರ್ಚ್ 01ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಸೂಪರ್-8 ಹಂತದಲ್ಲಿ ಉಭಯ ತಂಡಗಳು ತಲಾ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದ್ದು, ಇದೀಗ ಸೂಪರ್ ಸಂಡೆಯಂದು ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡವು ಸೆಮಿಫೈನಲ್ ಪ್ರವೇಶಿಸಿಲಿದೆ. ಸೋತ ತಂಡವು ಅಧಿಕೃತವಾಗಿ ಟಿ20 ವಿಶ್ವಕಪ್ ಸೆಮೀಸ್ ರೇಸ್‌ನಿಂದ ಹೊರಬೀಳಲಿದೆ.

ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾದ ಎಲ್ಲಾ ಬ್ಯಾಟರ್‌ಗಳು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇನ್ನು ವೆಸ್ಟ್ ಇಂಡೀಸ್ ತಂಡವು ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದು, ಸೂಪರ್-8 ಹಂತದ ಈ ಪಂದ್ಯವು ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುವ ನಿರೀಕ್ಷೆಯಿದೆ.