ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಆಪತ್ಬಾಂಧವರಾದ ನಿತೀಶ್‌-ವಾಷಿಂಗ್ಟನ್‌!

ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ನಿತೀಶ್ ರೆಡ್ಡಿ ಚೊಚ್ಚಲ ಶತಕ ಸಿಡಿಸಿ ಭಾರತವನ್ನು ಫಾಲೋ-ಆನ್‌ನಿಂದ ಪಾರು ಮಾಡಿದರು. ವಾಷಿಂಗ್ಟನ್ ಸುಂದರ್ ಜೊತೆಗೂಡಿ 8ನೇ ವಿಕೆಟ್‌ಗೆ ನಿತೀಶ್ 127 ರನ್‌ಗಳ ಜೊತೆಯಾಟವನ್ನು ದಾಖಲಿಸಿದರು.

Boxing Day Test Team India comeback strongly after Nitish KumarReddy Century kvn

ಮೆಲ್ಬರ್ನ್‌: ಟೀಂ ಇಂಡಿಯಾ ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಶೇಷವಾಗಿ ಏನನ್ನೂ ಸಾಧಿಸದಿದ್ದರೂ, ನಿತೀಶ್‌ ರೆಡ್ಡಿ ಎಂಬ ಪ್ರತಿಭಾವಂತ ಆಟಗಾರನನ್ನು ಕ್ರಿಕೆಟ್‌ ಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಸರಣಿಯ ಮೊದಲ ಪಂದ್ಯದಿಂದಲೂ ಕೆಚ್ಚೆದೆಯ ಹೋರಾಟ ಪ್ರದರ್ಶಿಸುತ್ತಿದ್ದ 21 ವರ್ಷದ ನಿತೀಶ್‌, ಶನಿವಾರವಂತೂ ಭಾರತದ ಪಾಲಿಗೆ ಆಪತ್ಬಾಂಧವರಾಗಿ ಮೂಡಿಬಂದರು. ಟೆಸ್ಟ್‌ ಕ್ರಿಕೆಟ್‌ನ ಚೊಚ್ಚಲ ಶತಕವನ್ನು ‘ಬಾಕ್ಸಿಂಗ್‌ ಡೇ’ ಎಂಬ ಐತಿಹಾಸಿಕ ಪಂದ್ಯದಲ್ಲೇ ದಾಖಲಿಸಿದ ನಿತೀಶ್‌, ಈ ಮೂಲಕ ಭಾರತವನ್ನು ಮುಖಭಂಗದಿಂದ ಪಾರು ಮಾಡಿದರು.

ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ 474 ರನ್‌ಗೆ ಉತ್ತರವಾಗಿ, ಭಾರತ 3ನೇ ದಿನದಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 358 ರನ್‌ ಕಲೆಹಾಕಿದೆ. ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡವನ್ನು ನಿತೀಶ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಮನಮೋಹಕ ಜೊತೆಯಾಟದ ಮೂಲಕ ಪಾರು ಮಾಡಿದರು. ಆದರೂ ತಂಡ 116 ರನ್‌ ಹಿನ್ನಡೆಯಲ್ಲಿದೆ. ಫಾಲೋ-ಆನ್‌ ತಪ್ಪಿಸಿರುವ ತಂಡ ಈಗ ಸೋಲು ತಪ್ಪಿಸಲು ಹೋರಾಟ ಮುಂದುವರಿಸಬೇಕಿದೆ.

ಕೈಕೊಟ್ಟ ಪಂತ್‌-ಜಡೇಜಾ: 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 164 ರನ್‌ ಗಳಿಸಿದ್ದ ಭಾರತಕ್ಕೆ ಶನಿವಾರ ದೊಡ್ಡ ಜೊತೆಯಾಟ ಅಗತ್ಯವಿತ್ತು. ರಿಷಭ್‌ ಪಂತ್‌ ಹಾಗೂ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರು. ಆದರೆ ದಿನದ ಮೊದಲ ಅವಧಿಯಲ್ಲೇ ಭಾರತ ಈ ಇಬ್ಬರನ್ನೂ ಕಳೆದುಕೊಂಡಿತು. ಬೋಲಂಡ್‌ ಎಸೆತದಲ್ಲಿ ಅಪಾಯಕಾರಿ ರೀತಿಯಲ್ಲಿ ಸ್ಕೂಪ್‌ ಮಾಡಲು ಹೋದ ರಿಷಭ್‌(28), ನೇಥನ್‌ ಲಯನ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಜಡೇಜಾ ಕೇವಲ 17 ರನ್‌ಗೆ ಔಟಾದರು.

ನಿತೀಶ್ ರೆಡ್ಡಿ ಶತಕಕ್ಕೆ ಕೈಮುಗಿದು ಆನಂದಭಾಷ್ಪ ಸುರಿಸಿದ ತಂದೆ! ಮಿಲಿಯನ್ ಡಾಲರ್ ಕ್ಷಣದ ವಿಡಿಯೋ ವೈರಲ್

ರೆಡ್ಡಿ-ಸುಂದರ್‌ ಮೋಡಿ: 7ನೇ ವಿಕೆಟ್‌ ರೂಪದಲ್ಲಿ ಜಡೇಜಾ ಔಟಾದಾಗ ತಂಡದ ಸ್ಕೋರ್‌ 221. ಫಾಲೋ-ಆನ್‌ ತಪ್ಪಿಸಲು ತಂಡಕ್ಕಿನ್ನೂ 54 ರನ್‌ ಅಗತ್ಯವಿತ್ತು. ಈ ವೇಳೆ ಜೊತೆಯಾದ ನಿತೀಶ್‌-ವಾಷಿಂಗ್ಟನ್‌ ಮನಮೋಹಕ ಆಟ ಪ್ರದರ್ಶಿಸಿದರು. ಪಿಚ್‌ ಬ್ಯಾಟಿಂಗ್‌ಗೆ ನೆರವಾಗುತ್ತಿದ್ದರೂ ಅಪಾಯಕಾರಿ ಹೊಡೆತಗಳಿಗೆ ಕೈ ಹಾಕದೆ ಜವಾಬ್ದಾರಿಯುತವಾಗಿ ಆಡಿದ, ಈ ಜೋಡಿ 8ನೇ ವಿಕೆಟ್‌ಗೆ 285 ಎಸೆತಗಳಳ್ಲಿ 127 ರನ್‌ ಸೇರಿಸಿತು. ವಾಷಿಂಗ್ಟನ್‌ 162 ಎಸೆತಗಳನ್ನು ಎದುರಿಸಿ ಕೇವಲ 1 ಬೌಂಡರಿಯೊಂದಿಗೆ 50 ರನ್‌ ಪೂರ್ಣಗೊಳಿಸಿದರು. ಆದರೆ ತಂಡದ ಸ್ಕೋರ್‌ 348 ಆಗಿದ್ದಾಗ ವಾಷಿಂಗ್ಟನ್‌ ಔಟಾದರು. ಬಳಿಕ ಬೂಮ್ರಾ ಸೊನ್ನೆಗೆ ನಿರ್ಗಮಿಸುವಾಗ, ನಿತೀಶ್‌ ಇನ್ನೂ 99 ರನ್‌ ಗಳಿಸಿ ಶತಕಕ್ಕೆ ಕಾಯುತ್ತಿದ್ದರು.

ಕಮಿನ್ಸ್‌ರ 3 ಎಸೆತಗಳನ್ನು ಸಮರ್ಥವಾಗಿ ಎದುರಿಸಿದ ಸಿರಾಜ್‌, ನಿತೀಶ್‌ಗೆ ಕ್ರೀಸ್‌ ಬಿಟ್ಟುಕೊಟ್ಟರು. ಬೋಲಂಡ್‌ರ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ನಿತೀಶ್‌ ಟೆಸ್ಟ್‌ನ ಚೊಚ್ಚಲ ಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು. ಸದ್ಯ ನಿತೀಶ್‌ 176 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 105 ರನ್‌ ಸಿಡಿಸಿದ್ದು, 4ನೇ ದಿನ ಮತ್ತಷ್ಟು ರನ್‌ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ. ಕಮಿನ್ಸ್‌, ಬೋಲಂಡ್‌ ತಲಾ 3 ವಿಕೆಟ್‌ ಪಡೆದರು.

ಸ್ಕೋರ್‌: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 474/10, ಭಾರತ ಮೊದಲ ಇನ್ನಿಂಗ್ಸ್‌ 358/9 (3ನೇ ದಿನದಂತ್ಯಕ್ಕೆ) (ನಿತೀಶ್‌ ಔಟಾಗದೆ 105, ವಾಷಿಂಗ್ಟನ್‌ 50, ಪಂತ್‌ 28, ಬೋಲಂಡ್‌ 3-57, ಕಮಿನ್ಸ್ 3-86)

ಫಿಫ್ಟಿಗೆ ಪುಷ್ಪ, ಶತಕಕ್ಕೆ ಬಾಹುಬಲಿ ಶೈಲಿಯಲ್ಲಿ ಸಂಭ್ರಮಿಸಿದ ನಿತೀಶ್‌

ಆಂಧ್ರ ಪ್ರದೇಶದ ನಿತೀಶ್‌ ಚೊಚ್ಚಲ ಅರ್ಧಶತಕ ಬಾರಿಸಿದ ಬಳಿಕ, ಅಲ್ಲು ಅರ್ಜುನ್‌ರ ಪುಷ್ಪ ಸಿನಿಮಾದ ಶೈಲಿಯಲ್ಲಿ ಸಂಭ್ರಮಿಸಿದರು. ಬಳಿಕ ಶತಕ ಸಿಡಿಸಿದ ಅವರು, ಪ್ರಭಾಸ್‌ ನಟನೆಯ ಬಾಹುಬಲಿ ಸಿನಿಮಾದ ದೃಶ್ಯದ ಶೈಲಿಯಲ್ಲಿ ವಿಶೇಷವಾಗಿ ಸಂಭ್ರಮಿಸಿದರು. ಇದರ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಗ್ಯಾಲರಿಯಲ್ಲಿ ನಿತೀಶ್‌ ತಂದೆ ಆನಂದಭಾಷ್ಪ

ಪಂದ್ಯವನ್ನು ವೀಕ್ಷಿಸಲು ನಿತೀಶ್‌ರ ತಂದೆ ಮುತ್ಯಾಲ ರೆಡ್ಡಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ನಿತೀಶ್‌ ಶತಕದ ಅಂಚಿನಲ್ಲಿದ್ದಾಗ ಉದ್ವೇಗಕ್ಕೊಳಗಾಗಿದ್ದ ಅವರು, ಸೆಂಚುರಿ ಬಾರಿಸಿದ ಬಳಿಕ ಆನಂದಭಾಷ್ಪ ಸುರಿಸಿದರು. ಗ್ಯಾಲರಿಯಲ್ಲೇ ಖುಷಿಯಲ್ಲಿ ಕಣ್ಣೀರಿಡುತ್ತಿರುವ ಮುತ್ಯಾಲ ರೆಡ್ಡಿ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಬಳಿಕ ಡ್ರೆಸ್ಸಿಂಗ್‌ ಕೋಣೆ ಬಳಿಕ ನಿತೀಶ್‌ರನ್ನು ಕಂಡ ಪೋಷಕರು, ಆಲಿಂಗಿಸಿ ಸಂಭ್ರಮಿಸಿದರು.

ಆಸ್ಟ್ರೇಲಿಯಾದಲ್ಲಿ ಶತಕ: ಭಾರತದ 3ನೇ ಅತಿ ಕಿರಿಯ

ನಿತೀಶ್‌ ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ಭಾರತದ 3ನೇ ಕಿರಿಯ ಆಟಗಾರ. ಅವರಿಗೆ ಈಗ 21 ವರ್ಷ, 214 ದಿನ ವಯಸ್ಸು. ಸಚಿನ್‌ 18 ವರ್ಷ 253 ದಿನ, ರಿಷಭ್‌ ಪಂತ್‌ 21 ವರ್ಷ 91 ದಿನಗಳಾಗಿದ್ದಾಗ ಆಸೀಸ್‌ ನೆಲದಲ್ಲಿ ಶತಕ ದಾಖಲಿಸಿದ್ದರು.

ಜೊತೆಯಾಟ: ನಿತೀಶ್‌, ವಾಷಿಂಗ್ಟನ್‌ ದಾಖಲೆ

8ನೇ ವಿಕೆಟ್‌ಗೆ ವಾಷಿಂಗ್ಟನ್‌-ನಿತೀಶ್‌ 127 ರನ್‌ ಜೊತೆಯಾಟವಾಡಿದರು. ಇದು ಆಸ್ಟ್ರೇಲಿಯಾ ವಿರುದ್ಧ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಭಾರತದ 3ನೇ ಗರಿಷ್ಠ. 2013ರಲ್ಲಿ ಚೆನ್ನೈನಲ್ಲಿ ಧೋನಿ-ಭುವನೇಶ್ವರ್‌ 9ನೇ ವಿಕೆಟ್‌ಗೆ 140, 2008ರಲ್ಲಿ ಸಿಡ್ನಿಯಲ್ಲಿ ಸಚಿನ್‌-ಹರ್ಭಜನ್‌ 8ನೇ ವಿಕೆಟ್‌ಗೆ 129 ರನ್‌ ಜೊತೆಯಾಟವಾಡಿದ್ದರು.

01ನೇ ಬ್ಯಾಟರ್‌: ನಿತೀಶ್‌ ಆಸ್ಟ್ರೇಲಿಯಾದಲ್ಲಿ 8ನೇ ಕ್ರಮಾಂಕದಲ್ಲಿ ಆಡಿ ಶತಕ ಬಾರಿಸಿದ ಭಾರತದ ಮೊದಲಿಗ ಹಾಗೂ ವಿಶ್ವದ 5ನೇ ಬ್ಯಾಟರ್‌.

02ನೇ ಶತಕ: ಆಸ್ಟ್ರೇಲಿಯಾ ವಿರುದ್ಧ 8ನೇ ಕ್ರಮಾಂದಲ್ಲಿ ಶತಕ ಬಾರಿಸಿದ ಭಾರತದ 2ನೇ ಆಟಗಾರ ನಿತೀಶ್‌. ವೃದ್ಧಿಮಾನ್‌ ಸಾಹ ಮೊದಲಿಗರು.

105 ರನ್‌: ನಿತೀಶ್‌ 105 ರನ್‌ ಗಳಿಸಿದ್ದು, ಮೆಲ್ಬರ್ನ್‌ನಲ್ಲಿ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ಮೊತ್ತ.

Latest Videos
Follow Us:
Download App:
  • android
  • ios