ನಿತೀಶ್ ರೆಡ್ಡಿ ಶತಕಕ್ಕೆ ಕೈಮುಗಿದು ಆನಂದಭಾಷ್ಪ ಸುರಿಸಿದ ತಂದೆ! ಮಿಲಿಯನ್ ಡಾಲರ್ ಕ್ಷಣದ ವಿಡಿಯೋ ವೈರಲ್
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಹೈದರಾಬಾದ್ ಮೂಲದ ನಿತೀಶ್ ಕುಮಾರ್ ರೆಡ್ಡಿ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ತಮ್ಮ ಮಗನ ಚೊಚ್ಚಲ ಶತಕವನ್ನು ಕಣ್ತುಂಬಿಕೊಂಡ ತಂದೆಯ ರಿಯಾಕ್ಷನ್ ವೈರಲ್ ಆಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಅಂದಹಾಗೆ ಇದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಗಿದೆ.
ಈ ಟೆಸ್ಟ್ ಪಂದ್ಯದ ಮೂರನೇ ದಿನ ಹೈದರಾಬಾದ್ ಮೂಲದ 21 ವರ್ಷದ ಯುವ ಪ್ರತಿಭೆ ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಒಂದು ಹಂತದಲ್ಲಿ ಫಾಲೋ ಆನ್ ಭೀತಿಗೆ ಸಿಲುಕಿದ್ದ ಟೀಂ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ನಿತೀಶ್ ರೆಡ್ಡಿ, ಇದೀಗ ಮೂರನೇ ದಿನದಾಟದಂತ್ಯಕ್ಕೆ 176 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ ಅಜೇಯ 105 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಶತಕ ಸಿಡಿಸುವ ವೇಳೆ ಅವರ ತಂದೆ ಮುತ್ಯಾಲ ರೆಡ್ಡಿ ಕೂಡಾ ಎಂಸಿಜಿ ಮೈದಾನದಲ್ಲಿ ಹಾಜರಿದ್ದರು. ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸುತ್ತಿದ್ದಂತೆಯೇ ಅವರ ತಂದೆಯ ಆನಂದಭಾಷ್ಪ ಕಟ್ಟೆಯೊಡೆಯಿತು. ತಾವಿದ್ದಲ್ಲಿಂದಲೇ ದೇವರಿಗೆ ಕೈಮುಗಿದು ಧನ್ಯವಾದಗಳನ್ನು ಅರ್ಪಿಸಿದರು.
ಅಂದಹಾಗೆ ನಿತೀಶ್ ಕುಮಾರ್ ರೆಡ್ಡಿ ಅವರು ಒಂದು ಸಾಧಾರಣ ಕೌಟುಂಬಿಕ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕ್ರಿಕೆಟರ್ ಮಾಡುವುದಕ್ಕಾಗಿ ಅವರ ತಂದೆ ತಮ್ಮ ಕೆಲಸವನ್ನೇ ತ್ಯಜಿಸಿದ್ದರು. ನಿತೀಶ್ ಅವರು ಕ್ರಿಕೆಟರ್ ಆಗುವುದರಲ್ಲಿ ಅವರ ತಂದೆ ಮುತ್ಯಾಲ ರೆಡ್ಡಿ ಅವರ ತ್ಯಾಗ ಹಾಗೂ ಪರಿಶ್ರಮ ದೊಡ್ಡದಿದೆ.
ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಬೌಲಿಂಗ್ ಆಲ್ರೌಂಡರ್ ಆಗಿ ಪಾದಾರ್ಪಣೆ ಮಾಡಿದ ನಿತೀಶ್ ಕುಮಾರ್ ರೆಡ್ಡಿ, ಅಡಿಲೇಡ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ 42 ರನ್ ಸಿಡಿಸಿದ್ದರು. ಆದರೆ ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಹಾಗೂ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ.
ಇನ್ನು ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ವಿರುದ್ದ ಅವರದ್ದೇ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ದಾಖಲೆಯೂ ವಿಶಾಖಪಟ್ಟಣ ಮೂಲದ ನಿತೀಶ್ ರೆಡ್ಡಿ ಪಾಲಾಗಿದೆ.