ಪರ್ತ್‌ನಲ್ಲಿ ಗೆದ್ದ ಭಾರತ ತಂಡ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ರೋಹಿತ್‌ ಶರ್ಮಾ ವಾಪಸಾಗಿದ್ದು, ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆಗಳಾಗಲಿವೆ. ಹಗಲು-ರಾತ್ರಿ ಮಾದರಿಯ ಈ ಪಂದ್ಯದ ಫಲಿತಾಂಶ ಸರಣಿಯ ದಿಕ್ಕನ್ನು ನಿರ್ಧರಿಸಲಿದೆ.

ಅಡಿಲೇಡ್‌: ಪರ್ತ್‌ನಲ್ಲಿ 10 ದಿನಗಳ ಹಿಂದೆ ಹೊರಬಿದ್ದ ಫಲಿತಾಂಶ ಹಲವರಲ್ಲಿ ಅಚ್ಚರಿ ಮೂಡಿಸಿದ್ದು ನಿಜ. ಆದರೆ ಭಾರತ ತನ್ನ ಘನತೆಗೆ ತಕ್ಕ ಆಟವಾಡಿ ಅರ್ಹ ಗೆಲುವು ಸಂಪಾದಿಸಿ 1-0 ಮುನ್ನಡೆ ಪಡೆಯಿತು. ಇದೀಗ ಹಿಂದಿನ ಪ್ರವಾಸದಲ್ಲಿ ಕೇವಲ 36 ರನ್‌ಗೆ ಆಲೌಟ್‌ ಆಗಿದ್ದ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು 2ನೇ ಟೆಸ್ಟ್‌ನಲ್ಲಿ ಎದುರಿಸಲು ಸಜ್ಜಾಗಿದೆ. ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿರುವ ಪಂದ್ಯದ ಫಲಿತಾಂಶ 5 ಪಂದ್ಯಗಳ ಸರಣಿ ಸಾಗಲಿರುವ ದಿಕ್ಕನ್ನು ನಿರ್ಧರಿಸಲಿದೆ.

ಎರಡೂ ತಂಡಗಳು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿವೆಯಾದರೂ, ಭಾರತದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಗಲಿರುವ ಬದಲಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2ನೇ ಮಗು ನಿರೀಕ್ಷೆಯಲ್ಲಿದ್ದ ಕಾರಣ ಮೊದಲ ಟೆಸ್ಟ್‌ಗೆ ಗೈರಾಗಿದ್ದ ಕಾಯಂ ನಾಯಕ ರೋಹಿತ್‌ ಶರ್ಮಾ, ಈ ಪಂದ್ಯದಲ್ಲಿ ಆಡಲಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ‘ಜೈಸ್ವಾಲ್‌ ಜೊತೆ ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಎಲ್ಲೋ ಒಂದು ಕಡೆ ಆಡಲಿದ್ದೇನೆ’ ಎಂದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಭಾರತ ಸಂಭಾವ್ಯ ತಂಡ ಹೀಗಿದೆ

ಶುಭ್‌ಮನ್‌ ಗಿಲ್ ಸಹ ಫಿಟ್‌ ಆಗಿದ್ದು ತಂಡಕ್ಕೆ ವಾಪಸಾಗಲಿದ್ದಾರೆ. ಹೀಗಾಗಿ ದೇವದತ್‌ ಪಡಿಕ್ಕಲ್‌ಗೆ ಅವಕಾಶ ಕೈತಪ್ಪಲಿದೆ. ಧೃವ್‌ ಜುರೆಲ್‌ ತಮ್ಮ ಸ್ಥಾನವನ್ನು ರೋಹಿತ್‌ಗೆ ಬಿಟ್ಟುಕೊಡಲಿದ್ದಾರೆ. ಗಿಲ್‌ 3ನೇ ಕ್ರಮಾಂಕದಲ್ಲಿ ಆಡಲಿದ್ದು, ವಿರಾಟ್‌ ಕೊಹ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರೋಹಿತ್‌ ಶರ್ಮಾ 5ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ.

ರಿಷಭ್‌ ಪಂತ್‌ ವಿಕೆಟ್ ಕೀಪರ್‌ ಬ್ಯಾಟರ್‌ ಆಗಿ ಮುಂದುವರಿಯಲಿದ್ದು, ವಾಷಿಂಗ್ಟನ್‌ ಸುಂದರ್‌ರನ್ನೇ ಮುಂದುವರಿಸುತ್ತಾರಾ ಅಥವಾ ಅನುಭವಿ ಆರ್‌.ಅಶ್ವಿನ್‌ರನ್ನು ಆಡಿಸಲಾಗುತ್ತದೆಯೇ ಎನ್ನುವ ಕುತೂಹಲವಿದೆ. ಆಲ್ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ವೇಗದ ಬೌಲಿಂಗ್‌ ಪಡೆಯಲ್ಲಿ ಬದಲಾವಣೆ ಸಾಧ್ಯತೆ ಇಲ್ಲ. ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌ ಹಾಗೂ ಹರ್ಷಿತ್‌ ರಾಣಾ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗೆ ನನ್ನ ಹೆಸರೂ ಇಡಿ: ಕೆ ಎಲ್ ರಾಹುಲ್ ಇಂಗಿತ

ಆಸೀಸ್‌ಗಿಲ್ಲ ‘ಜೋಶ್‌’!: ಗಾಯಾಳು ವೇಗಿ ಜೋಶ್‌ ಹೇಜಲ್‌ವುಡ್‌ ಈ ಪಂದ್ಯಕ್ಕೆ ಗೈರಾಗಲಿದ್ದಾರೆ. ಹೀಗಾಗಿ ಸ್ಕಾಟ್‌ ಬೋಲೆಂಡ್‌ 2 ವರ್ಷಗಳಲ್ಲಿ ತವರಿನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಉಳಿದಂತೆ ತಂಡದಲ್ಲಿ ಇನ್ಯಾವುದೇ ಬದಲಾವಣೆ ಸಾಧ್ಯತೆ ಇಲ್ಲವಾದರೂ, ಲಯ ಕಳೆದುಕೊಂಡಿರುವ ಬ್ಯಾಟರ್‌ಗಳು ತೀವ್ರ ಒತ್ತಡದಲ್ಲಿದ್ದಾರೆ. ಪ್ರಮುಖವಾಗಿ ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ಹಿರಿಯ ಸ್ಪಿನ್ನರ್‌ ನೇಥನ್‌ ಲಯನ್‌ ವಿಕೆಟ್‌ ಪಡೆಯಲು ವಿಫಲರಾಗುತ್ತಿದ್ದು, ತಮ್ಮ ತವರು ಮೈದಾನದಲ್ಲಿ ಲಯಕ್ಕೆ ಮರಳಲು ಕಾತರಿಸುತ್ತಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಯಶಸ್ವಿ ಜೈಸ್ವಾಲ್‌, ಕೆ.ಎಲ್‌.ರಾಹುಲ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ(ನಾಯಕ), ರಿಷಭ್‌ ಪಂತ್‌, ವಾಷಿಂಗ್ಟನ್‌/ಅಶ್ವಿನ್‌, ನಿತೀಶ್‌ ರೆಡ್ಡಿ, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌, ಹರ್ಷಿತ್‌ ರಾಣಾ.

ಆಸ್ಟ್ರೇಲಿಯಾ: ಉಸ್ಮಾನ್‌ ಖವಾಜ, ಮೆಕ್‌ಸ್ವೀನಿ, ಮಾರ್ನಸ್‌ ಲಬುಶೇನ್, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕೇರಿ, ಪ್ಯಾಟ್‌ ಕಮಿನ್ಸ್‌(ನಾಯಕ), ಮಿಚೆಲ್‌ ಸ್ಟಾರ್ಕ್‌, ನೇಥನ್‌ ಲಯನ್‌, ಸ್ಕಾಟ್‌ ಬೋಲೆಂಡ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಕ್ಯುರೇಟರ್‌ ಪ್ರಕಾರ ಪಿಚ್‌ ಬ್ಯಾಟ್‌ ಹಾಗೂ ಬಾಲ್‌ಗೆ ಸಮಾನ ನೆರವು ಒದಗಿಸಲಿದೆ. ಆರಂಭಿಕ ಹಂತದಲ್ಲಿ ವೇಗಿಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೂ ನೆರವು ಸಿಗುವ ನಿರೀಕ್ಷೆ ಇದೆ. ಮುಸ್ಸಂಜೆ ವೇಳೆ ಬ್ಯಾಟ್‌ ಮಾಡುವುದು ಸ್ವಲ್ಪ ಕಷ್ಟವಾಗಬಹುದು.