Border-Gavaskar Trophy: ಮೊದಲ ಟೆಸ್ಟ್‌ನಿಂದ ಆಸೀಸ್ ಮಾರಕ ವೇಗಿ ಔಟ್..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ
ಫೆಬ್ರವರಿ 09ರಿಂದ ಇಂಡೋ-ಆಸೀಸ್ ಟೆಸ್ಟ್ ಸರಣಿ ಆರಂಭ
ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಔಟ್
ಬೆಂಗಳೂರು(ಜ.31): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೆ ದಿನಗಣನೆ ಶುರುವಾಗಲಿದೆ. ಫೆಬ್ರವರಿ 09ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ವೇಗಿ ಮಿಚೆಲ್ ಸ್ಟಾರ್ಕ್, ಕೈ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಎಡಗೈ ವೇಗಿ ಮಿಚೆಲ್ ಸ್ಟಾರ್ಕ್, ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೊಳಗಾಗಿದ್ದರು. ಹೀಗಾಗಿ ಹರಿಣಗಳೆದುರಿನ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು. ಹೀಗಿದ್ದೂ ಮಿಚೆಲ್ ಸ್ಟಾರ್ಕ್ ಅವರನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಸೀಸ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದೀಗ ಸ್ವತಃ ಮಿಚೆಲ್ ಸ್ಟಾರ್ಕ್, ಭಾರತ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ವಿಚಾರವನ್ನು ಖಚಿತಪಡಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ 33 ವರ್ಷದ ಮಿಚೆಲ್ ಸ್ಟಾರ್ಕ್ ಬಳಿ ಗಾಯದ ಬಗ್ಗೆ ಪ್ರಶ್ನಿಸಿದಾಗ, " ನಾನು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದ್ದೇನೆ. ಹೀಗಿದ್ದೂ ಕೆಲ ವಾರಗಳು ಬೇಕಾಗಬಹುದು. ಡೆಲ್ಲಿಯಲ್ಲಿ ನಾವು ಭೇಟಿಯಾಗಬಹುದು. ಮೊದಲ ಪಂದ್ಯವನ್ನು ನಾವು ಗೆಲ್ಲುವ ವಿಶ್ವಾಸವಿದೆ. ನಾನಲ್ಲಿ ಅಭ್ಯಾಸ ನಡೆಸುತ್ತೇನೆ ಎಂದು ಸ್ಟಾರ್ಕ್ ಹೇಳಿದ್ದಾರೆ.
ಫೆಬ್ರವರಿ 1ಕ್ಕೆ ಭಾರತಕ್ಕೆ ಬಂದಿಳಿಯಲಿದೆ ಆಸೀಸ್, ಬೆಂಗಳೂರಲ್ಲಿ ಅಭ್ಯಾಸ
" ನನ್ನ ಪ್ರಕಾರ, ಭಾರತದ ವಾತಾವರಣ ಹೇಗಿರಲಿದೆ ಎನ್ನುವ ಮಾಹಿತಿ ನಿಮಗಿಲ್ಲದೇ ಇರಬಹುದು. ಆದರೆ ನಮಗೆ ಇದರ ಬಗ್ಗೆ ಮಾಹಿತಿಯಿದೆ. ಇದು ನಮಗೆ ಅನುಕೂಲವಾಗಲಿದೆ. ಯಾವ ಪಿಚ್ ಹೇಗೆ ವರ್ತಿಸಲಿದೆ ಎಂದು ಕಣಕ್ಕಿಳಿದಾಗಲೇ ಅರಿವಾಗುವುದು. ಹೀಗಾಗಿ ಭಾರತ ಎದುರಿನ ಸರಣಿಗೆ ನಮಗೆ ಸವಾಲಾಗಲಿದೆ" ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಫೆಬ್ರವರಿ 9ರಿಂದ ಆರಂಭಗೊಳ್ಳಲಿರುವ ನಾಲ್ಕು ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಪ್ರೇಲಿಯಾ ತಂಡ ಫೆಬ್ರವರಿ 1ಕ್ಕೆ ಭಾರತಕ್ಕೆ ಆಗಮಿಸಲಿದೆ. ಮೊದಲ ಟೆಸ್ಟ್ ಆಡಲು ನಾಗ್ಪುರಕ್ಕೆ ತೆರಳುವ ಮೊದಲು ಆಸೀಸ್ ತಂಡ ಬೆಂಗಳೂರಲ್ಲಿ 2-3 ದಿನಗಳ ಅಭ್ಯಾಸ ನಡೆಸಲಿದೆ ಎಂದು ವರದಿಯಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:
ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್
ಆಸೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಪ್ಯಾಟ್ ಕಮಿನ್ಸ್(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.