ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬೆನ್ನಲ್ಲೇ, ಟೀಂ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಬಿಸಿಸಿಐ ಶಾಕ್ ನೀಡಲು ಮುಂದಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಇಬ್ಬರು ಆಟಗಾರ ಹಿಂಬಡ್ತಿ ನೀಡಲು ಸಲಹೆ ನೀಡಿದೆ.

ಮುಂಬೈ: ಭಾರತ-ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 1-2 ಅಂತರದಲ್ಲಿ ಸೋಲು ಅನುಭವಿಸಿದೆ. ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದ ಟೀಂ ಇಂಡಿಯಾ, ಆ ಬಳಿಕ ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿದೆ. ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ದಿಗ್ಗಜ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬಿಗ್ ಶಾಕ್ ನೀಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಕೇವಲ 7 ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದರು. ಹೀಗಿದ್ದರೂ ಭಾರತ ತಂಡವು ಸುಲಭ ಗೆಲುವು ದಾಖಲಿಸಿತ್ತು. ಇನ್ನು ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇನ್ನು ಮತ್ತೊಂದು ತುದಿಯಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಕಿವೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ಯಶಸ್ವಿಯಾಗಲಿಲ್ಲ. ಕಿವೀಸ್ ಎದುರು ರೋಹಿತ್ ಶರ್ಮಾ ಕ್ರಮವಾಗಿ 29 ಎಸೆತಗಳಲ್ಲಿ 26, 38 ಎಸೆತಗಳಲ್ಲಿ 24 ಹಾಗೂ 13 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದರು. ಇದೀಗ ಈ ಇಬ್ಬರು ಕ್ರಿಕೆಟಿಗರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.

ರೋ-ಕೋ ಜೋಡಿಗೆ ಶಾಕ್ ನೀಡಲು ರೆಡಿಯಾದ ಬಿಸಿಸಿಐ!

ಹೌದು, ಇದೀಗ ಬಿಸಿಸಿಐ ಭಾರತದ ಈ ಇಬ್ಬರು ಹಿರಿಯ ಆಟಗಾರರಿಗೆ ಬಿಗ್ ಶಾಕ್ ನೀಡಲು ರೆಡಿಯಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಸೆಲೆಕ್ಷನ್ ಕಮಿಟಿಯು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹಿಂಬಡ್ತಿ ನೀಡಲು ಸಲಹೆ ನೀಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದಷ್ಟೇ ಅಲ್ಲದೇ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ ಗ್ರೇಡ್‌ ಅನ್ನು ಪರಿಷ್ಕರಿಸಲು ಸಲಹೆ ನೀಡಿದೆ ಎಂದು ವರದಿಯಾಗಿದೆ.

Scroll to load tweet…

ಸದ್ಯ ಬಿಸಿಸಿಐನಲ್ಲಿ ನಾಲ್ಕು ಹಂತದ ಗ್ರೇಡ್ ವ್ಯವಸ್ಥೆ

ಸದ್ಯ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಎ+, ಎ, ಬಿ ಹಾಗೂ ಸಿ ಎನ್ನುವ ನಾಲ್ಕು ಹಂತದ ಗ್ರೇಡ್‌ಗಳಿವೆ. ಎ+ ಗ್ರೇಡ್ ಹೊಂದಿರುವ ಆಟಗಾರರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದರು. ಇನ್ನು ಎ ಗ್ರೇಡ್ ಹೊಂದಿವರು 5 ಕೋಟಿ, ಬಿ ಗ್ರೇಡ್ ಹೊಂದಿದವರು 3 ಕೋಟಿ ಹಾಗೂ ಸಿ ಗ್ರೇಡ್ ಹೊಂದಿದ ಆಟಗಾರರು ತಲಾ ಒಂದು ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಎ+ ಗ್ರೇಡ್ ತೆಗೆದು ಹಾಕಿ ಕೇವಲ ಎ, ಬಿ ಮತ್ತು ಸಿ ಗ್ರೇಡ್ ಮಾತ್ರ ನೀಡುವಂತೆ ಬಿಸಿಸಿಐಗೆ ಸಲಹೆ ನೀಡಿದೆ. ಇದಕ್ಕೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಮ್ಮತಿ ನೀಡಿದರಷ್ಟೇ ಜಾರಿಗೆ ಬರಲಿದೆ.

ರೋ-ಕೋಗೆ ಬಿ ಗ್ರೇಡ್‌ಗೆ ಹಿಂಬಡ್ತಿ?

ಇನ್ನು ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಎ+ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸಲಹೆ ನೀಡಿದೆ ಎಂದು ವರದಿಯಾಗಿದೆ.

ಸದ್ಯ ಎ+ ಗ್ರೇಡ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದು, ಈ ನಾಲ್ವರು ಕ್ರಿಕೆಟಿಗರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆಯನ್ನು ಬಿಸಿಸಿಐನಿಂದ ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ರಿಷಭ್ ಪಂತ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ 'ಎ' ಗ್ರೇಡ್ ಸ್ಥಾನ ಪಡೆದಿದ್ದು ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ಯಶಸ್ವಿ ಜೈಸ್ವಾಲ್ 'ಬಿ' ಗ್ರೇಡ್ ಸ್ಥಾನ ಪಡೆದಿದ್ದು ವಾರ್ಷಿಕ 3 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾರೆ.

ಇನ್ನು 'ಸಿ' ಗ್ರೇಡ್‌ನಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ, ರಜತ್ ಪಾಟೀದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ ಹಾಗೂ ಹರ್ಷಿತ್ ರಾಣಾ ಸದ್ಯ ತಲಾ ಒಂದು ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.