ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಮೇಲೆ ಗಮನಹರಿಸಿದ್ದು, ನ್ಯೂಜಿಲೆಂಡ್ ಸರಣಿಯ ನಂತರ ಸುಮಾರು ಆರು ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.
ಬೆಂಗಳೂರು: ಭಾರತ ಕ್ರಿಕೆಟ್‌ನ ಇಬ್ಬರು ಸೂಪರ್ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಇಬ್ಬರು ಕ್ರಿಕೆಟಿಗರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದು, ಪ್ರತಿ ಸರಣಿಯಲ್ಲೂ ಅದ್ಭುತ ಪ್ರದರ್ಶನ ತೋರುತ್ತಾ ಮುನ್ನುಗ್ಗುತ್ತಿದ್ದಾರೆ.
ಇದೀಗ ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವನ್ನಾಡುತ್ತಿರುವ ರೋ-ಕೋ ಜೋಡಿ, ಇದಾದ ಬಳಿಕ ಬರೋಬ್ಬರಿ ಆರು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಆದರೆ ಈ ಸರಣಿಯ ಮೂಲಕ ಮತ್ತೆ ರೋ-ಕೋ ಜೋಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ.
ಈ ಸರಣಿಯಲ್ಲಿ ರೋಹಿತ್-ವಿರಾಟ್ ಜೋಡಿ ಕಮ್‌ಬ್ಯಾಕ್:
ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇದಾದ ನಂತರ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಲ್ಗೊಳ್ಳಲಿದೆ. ಈ ಮೆಗಾ ಟೂರ್ನಿ ಮುಕ್ತಾಯದ ಬಳಿಕ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಡೆಯಲಿದೆ.
ಇದಾದ ಬಳಿಕ ಜೂನ್‌ನಲ್ಲಿ ಭಾರತ ತಂಡವು ಏಕದಿನ ಸರಣಿಯನ್ನಾಡಲಿದೆ. ಜೂನ್‌ನಲ್ಲಿ ಭಾರತ ತಂಡವು ತವರಿನಲ್ಲಿ ಆಫ್ಘಾನಿಸ್ತಾನ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಯ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ. 2026ರ ಐಪಿಎಲ್ ಬಳಿಕ ಟೀಂ ಇಂಡಿಯಾ, 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಲಿದೆ. ಇದೇ ಕಾರಣಕ್ಕಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಲಿಷ್ಠ ತಂಡಗಳು ಮಾತ್ರವಲ್ಲದೇ ಕ್ರಿಕೆಟ್ ಶಿಶುಗಳ ಎದುರು ತಮ್ಮ ಬ್ಯಾಟಿಂಗ್ ಬಲ ಪ್ರದರ್ಶಿಸಲು ರೆಡಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಟೀಂ ಇಂಡಿಯಾ ಹಲವು ಮಹತ್ವದ ಏಕದಿನ ಸರಣಿಗಳನ್ನು ಆಡಲಿದೆ.
ಭರ್ಜರಿ ಫಾರ್ಮ್‌ನಲ್ಲಿರುವ ರೋ-ಕೋ ಜೋಡಿ
ಅಂದಹಾಗೆ ಭಾರತದ ದಿಗ್ಗಜ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ, ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 7 ರನ್ ಅಂತರದಲ್ಲಿ ಶತಕ ಚಚ್ಚುವ ಅವಕಾಶವನ್ನು ಕೈಚೆಲ್ಲಿದ್ದರು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಈ ಜೋಡಿ ದೊಡ್ಡ ಮೊತ್ತ ಬಾರಿಸುವ ವಿಶ್ವಾಸದಲ್ಲಿದೆ.


