ಐಪಿಎಲ್ 2026 ಫೈನಲ್ ತಲುಪಿರುವ ಆರ್‌ಸಿಬಿ ತಂಡದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ, ತಂಡದ ವೇಗಿ ಭುವನೇಶ್ವರ್ ಕುಮಾರ್, ಸಂದರ್ಶನವೊಂದರಲ್ಲಿ ತಮಾಷೆಯಾಗಿ ವಿರಾಟ್ ಕೊಹ್ಲಿಯನ್ನು 'ಮುದುಕ' ಎಂದು ಕರೆದಿರುವುದು ವೈರಲ್ ಆಗಿದೆ. 

ಬೆಂಗಳೂರು (ಮೇ.28): ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಫೈನಲ್ ತಲುಪಿ ಭರ್ಜರಿ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಈಗ ಸಂಭ್ರಮದ ವಾತಾವರಣವಿದೆ. ಈ ಯಶಸ್ಸಿನಲ್ಲಿ ತಂಡದ ಬೌಲಿಂಗ್ ವಿಭಾಗದ ಕೊಡುಗೆ ಅಪಾರವಾಗಿದೆ. ಹೀಗಿರುವಾಗ ಆರ್‌ಸಿಬಿ ತಂಡದ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು ‘ಮುದುಕ’ (Old Man) ಎಂದು ಕರೆದಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಭುವಿ ಹೀಗೆ ಹೇಳಿದ್ದೇಕೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಲ್ 2026ರ ಈ ಸೀಸನ್‌ನಲ್ಲಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಬೌಲಿಂಗ್ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ತಮ್ಮ ಅಪಾರ ಅನುಭವದ ಬಲದಿಂದ ಆರ್‌ಸಿಬಿ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಭುವಿ, ಟೂರ್ನಿಯಲ್ಲಿ ಇದುವರೆಗೆ ಆಡಿದ 15 ಪಂದ್ಯಗಳಿಂದ ಬರೋಬ್ಬರಿ 26 ವಿಕೆಟ್ ಕಲೆಹಾಕಿದ್ದಾರೆ. ಕೇವಲ 8 ರ ಎಕಾನಮಿ ರೇಟ್‌ನಲ್ಲಿ ರನ್ ನೀಡಿ ನಿಯಂತ್ರಣ ಸಾಧಿಸಿರುವ ಭುವಿ, ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ‘ಪರ್ಪಲ್ ಕ್ಯಾಪ್’ (Purple Cap) ತನ್ನದಾಗಿಸಿಕೊಂಡಿದ್ದಾರೆ. ಹೊಸ ಚೆಂಡು ಹಾಗೂ ಡೆತ್ ಓವರ್‌ಗಳಲ್ಲಿ ವಿಕೆಟ್ ಕೀಳುವ ಭುವಿಯ ಈ ಅಪ್ರತಿಮ ಪ್ರದರ್ಶನವೇ ಆರ್‌ಸಿಬಿ ಫೈನಲ್ ತಲುಪಲು ಪ್ರಮುಖ ಕಾರಣವಾಗಿದೆ.

ವಿರಾಟ್ ಕೊಹ್ಲಿಯನ್ನು ಮುದುಕ ಎಂದಿದ್ದೇಕೆ ಭುವಿ? ಇಲ್ಲಿದೆ ಕಂಪ್ಲೀಟ್ ಸ್ಟೋರಿ!

ಆರ್‌ಸಿಬಿ ತನ್ನ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಖಾತೆಯಲ್ಲಿ ಹಂಚಿಕೊಂಡಿರುವ ವಿಶೇಷ ಸಂದರ್ಶನದ ವಿಡಿಯೋದಲ್ಲಿ ಈ ತಮಾಷೆಯ ಪ್ರಸಂಗ ಜರುಗಿದೆ.

ಆರ್‌ಸಿಬಿ ಇನ್‌ಸೈಡರ್‌ ಕಾರ್ಯಕ್ರಮದ ನಿರೂಪಕ ಡ್ಯಾನಿಶ್‌ ಸೇಠ್‌, ಭುವನೇಶ್ವರ್ ಕುಮಾರ್ ಅವರಿಗೆ, 'ಎಲ್ಲರೂ ನೀವು ವಯಸ್ಸಿಗೆ ಮೀರಿ ಅತ್ಯಂತ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ನಿಮಗೇನಾದರೂ ನಿಮ್ಮ ವಯಸ್ಸಿನ ಲೆಕ್ಕಾಚಾರದಲ್ಲಿ ನೀವೀಗ ಮುದುಕನಾಗಿದ್ದೀರಿ ಎನಿಸುತ್ತಿದೆಯೇ?' ಎಂದು ಪ್ರಶ್ನಿಸುತ್ತಾರೆ.

ಇದಕ್ಕೆ ತಕ್ಷಣವೇ ಭುವಿ ನಗುತ್ತಾ, "ಇಲ್ಲ, ಖಂಡಿತಾ ಇಲ್ಲ" ಎಂದು ಉತ್ತರಿಸುತ್ತಾರೆ. ಆದರೆ ಡ್ಯಾನಿಶ್‌ ಬಿಡದೆ, "ಆದರೆ ನೀವು ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಒಂದೇ ವಯಸ್ಸಿನವರಲ್ವಾ? (ಸಮಕಾಲೀನರು)" ಎಂದು ಮತ್ತೊಂದು ಪ್ರಶ್ನೆ ಎಸೆಯುತ್ತಾರೆ. ಇದಕ್ಕೆ ಭುವನೇಶ್ವರ್ ಕುಮಾರ್ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡುತ್ತಾ, "ಹೌದು.. ವಿರಾಟ್ ಕೊಹ್ಲಿ ಬಹುಶಃ ಮುದುಕನಾಗಿರಬಹುದು, ಆದರೆ ನಾನಂತೂ ಅಲ್ಲ!" ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ಸದ್ಯ ಭುವಿಯ ಈ ಮಜಾವಾದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

Scroll to load tweet…

ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಕಿಂಗ್ ಕೊಹ್ಲಿ

ಒಂದೆಡೆ ಭುವಿ ಬೌಲಿಂಗ್‌ನಲ್ಲಿ ಕಮಾಲ್ ಮಾಡುತ್ತಿದ್ದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ಸೀಸನ್‌ನಲ್ಲೂ ಕಿಂಗ್ ಕೊಹ್ಲಿ 600 ರನ್‌ಗಳ ಗಡಿಯನ್ನು ದಾಟುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಭವ್ಯ ದಾಖಲೆ ಬರೆದಿದ್ದಾರೆ. ಐಪಿಎಲ್‌ನ ಒಟ್ಟು ನಾಲ್ಕು ಸೀಸನ್‌ಗಳಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಏಕೈಕ ಬ್ಯಾಟರ್ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಟೂರ್ನಿಯ 15 ಪಂದ್ಯಗಳಲ್ಲಿ 50 ರ ಸರಾಸರಿಯಲ್ಲಿ 600 ರನ್ ಬಾರಿಸಿರುವ ಕೊಹ್ಲಿ, 160 ಕ್ಕೂ ಹೆಚ್ಚು ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ 1 ಆಕರ್ಷಕ ಶತಕ ಮತ್ತು 4 ಅರ್ಧಶತಕಗಳು ಸೇರಿವೆ. ಇದೀಗ ಮುಂಬರುವ ಮಹಾ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಹಾಗೂ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಮತ್ತೊಮ್ಮೆ ಕ್ಲಿಕ್ ಆದಲ್ಲಿ ಆರ್‌ಸಿಬಿ ತಂಡ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.