ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಯಶಸ್ವಿ ಜೈಸ್ವಾಲ್ ನೆರಳಿಗೆ ಸರಿಯುತ್ತಿದ್ದಾರೆ ಎಂದು ಮಾಜಿ ಆಟಗಾರ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಜೈಸ್ವಾಲ್ ತಮ್ಮ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಲು ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್‌ನಂತಹ ತಂಡಕ್ಕೆ ಸೇರುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಬೆಂಗಳೂರು: ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ, ಸಹ ಓಪನರ್ ಯಶಸ್ವಿ ಜೈಸ್ವಾಲ್ ಸಂಪೂರ್ಣವಾಗಿ ನೆರಳಿಗೆ ಸರಿದಿದ್ದಾರೆ ಎಂದು ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿದ್ದಾರೆ. ಜೈಸ್ವಾಲ್ ತನ್ನ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ರಾಜಸ್ಥಾನ ರಾಯಲ್ಸ್ ಬಿಟ್ಟು ಮುಂಬೈ ಇಂಡಿಯನ್ಸ್‌ನಂತಹ ಬೇರೆ ಫ್ರಾಂಚೈಸಿಗೆ ಹೋಗಬೇಕು ಎಂದು ರಾಯುಡು ಸಲಹೆ ನೀಡಿದ್ದಾರೆ.
ಭಾರತದ ಪರ 55 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ, ಟೆಸ್ಟ್ ಕ್ರಿಕೆಟ್‌ನಲ್ಲೂ ಸಕ್ರಿಯರಾಗಿರುವ ಜೈಸ್ವಾಲ್‌ಗೆ ಇದು ಏಳನೇ ಐಪಿಎಲ್ ಸೀಸನ್. ಆದರೆ, ವೈಭವ್ ಸೂರ್ಯವಂಶಿ ಆಡುತ್ತಿರುವುದು ಕೇವಲ ಎರಡನೇ ಸೀಸನ್. ಆದರೂ ಈ ಬಾರಿ ರನ್ ಗಳಿಕೆ ಮತ್ತು ಜನಪ್ರಿಯತೆಯಲ್ಲಿ ವೈಭವ್, ಜೈಸ್ವಾಲ್‌ನನ್ನು ಬಹಳ ಹಿಂದೆ ಹಾಕಿದ್ದಾರೆ. ಈ ಸೀಸನ್‌ನಲ್ಲಿ ಜೈಸ್ವಾಲ್ 15 ಪಂದ್ಯಗಳಿಂದ 426 ರನ್ ಗಳಿಸಿದ್ದರೆ, ವೈಭವ್ ಬರೋಬ್ಬರಿ 680 ರನ್ ಸಿಡಿಸಿ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿ ಮಿಂಚುತ್ತಿದ್ದಾರೆ. ವೈಭವ್ ಅವರ ಈ ಅಬ್ಬರದ ಮುಂದೆ ಜೈಸ್ವಾಲ್ ಪ್ರದರ್ಶನ ಯಾರಿಗೂ ಕಾಣದಂತಾಗಿದೆ.
ವೈಭವ್ ಜೊತೆಗಿನ ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಜೈಸ್ವಾಲ್ ತಮ್ಮ ಸಹಜ ಆಟವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಹೇಳಿದ್ದರು. ಇದೇ ಮಾತನ್ನು ಈಗ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಜೊತೆ ಮಾತನಾಡಿದ ಅಂಬಟಿ ರಾಯುಡು ಪುನರುಚ್ಚರಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ರಾಜಸ್ಥಾನ ರಾಯಲ್ಸ್ ತಂಡ ತೊರೆಯಲಿ
"ಯಶಸ್ವಿ ಜೈಸ್ವಾಲ್ ತನ್ನ ತಂಡವನ್ನು ಬದಲಿಸಬೇಕು. ಯಾಕಂದ್ರೆ ವೈಭವ್ ಜೊತೆ ಬ್ಯಾಟಿಂಗ್ ಮಾಡುವಾಗ ಪ್ರತಿ ಬಾರಿಯೂ ಅವನು ನೆರಳಿನಲ್ಲಿ ಮುಳುಗಿ ಹೋಗುತ್ತಿದ್ದಾನೆ. ಜೈಸ್ವಾಲ್ ಸ್ವತಃ ಒಬ್ಬ ದೊಡ್ಡ ಸೂಪರ್‌ಸ್ಟಾರ್. ಬೇರೆ ತಂಡಕ್ಕೆ ಹೋದರೆ, ಒಬ್ಬನೇ ಪಂದ್ಯಗಳನ್ನು ಗೆಲ್ಲಿಸಬಲ್ಲ. ಅವನಿಗೆ ತನ್ನದೇ ಆದ ಸ್ಪೇಸ್ ಮತ್ತು ವೇದಿಕೆ ಬೇಕು. ಯಾಕಂದ್ರೆ ವೈಭವ್ ತನ್ನ ಜೊತೆಗಾರರನ್ನು ಹೀಗೆಯೇ ನೆರಳಿಗೆ ತಳ್ಳುತ್ತಲೇ ಇರುತ್ತಾನೆ. ವೈಭವ್‌ನ ಈ ಬೆಳವಣಿಗೆಯನ್ನು ಒಪ್ಪಿಕೊಂಡು, ನಾನ್-ಸ್ಟ್ರೈಕರ್ ಜೊತೆ ಸ್ಪರ್ಧಿಸದ ಒಬ್ಬ ಹಿರಿಯ ಆಟಗಾರ ಈಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬೇಕು" ಎಂದು ರಾಯುಡು ಹೇಳಿದ್ದಾರೆ.
ಒಂದು ವೇಳೆ ರಾಜಸ್ಥಾನ ತಂಡವನ್ನು ತೊರೆದರೆ, ಯಶಸ್ವಿ ಜೈಸ್ವಾಲ್‌ಗೆ ಮುಂಬೈ ಇಂಡಿಯನ್ಸ್ ಅತ್ಯಂತ ಸೂಕ್ತವಾದ ತಂಡ ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ. "ರೋಹಿತ್ ಶರ್ಮಾ ಮುಂಬೈ ತಂಡದಲ್ಲಿ ಇನ್ನು ಎಷ್ಟು ಕಾಲ ಇರುತ್ತಾರೆ ಎಂಬುದು ಚರ್ಚೆಯಲ್ಲಿದೆ. ಭಾರತದ ಏಕದಿನ ತಂಡದಲ್ಲಿ ರೋಹಿತ್‌ಗೆ ನೇರ ಬದಲಿ ಆಟಗಾರನಾಗುವ ಎಲ್ಲ ಅರ್ಹತೆ ಜೈಸ್ವಾಲ್‌ಗಿದೆ. ಅಷ್ಟೇ ಅಲ್ಲ, ಜೈಸ್ವಾಲ್ ಬೆಳೆದಿದ್ದು ಮತ್ತು ದೇಶೀಯ ಕ್ರಿಕೆಟ್ (ರಣಜಿ ಟ್ರೋಫಿ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಆಡಿದ್ದೂ ಮುಂಬೈ ಪರವಾಗಿಯೇ. ಹಾಗಾಗಿ, ಜೈಸ್ವಾಲ್ ತನ್ನ ತವರು ತಂಡವಾದ ಮುಂಬೈ ಇಂಡಿಯನ್ಸ್‌ಗೆ ಮರಳುವುದು ಇಬ್ಬರಿಗೂ ಲಾಭದಾಯಕ" ಎಂದು ರಾಯುಡು ವಿಶ್ಲೇಷಿಸಿದ್ದಾರೆ.
ಕ್ವಾಲಿಫೈಯರ್-2ಗೆ ಅರ್ಹತೆ ಪಡೆದ ರಾಜಸ್ಥಾನ ರಾಯಲ್ಸ್:
19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡವು ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅನಾಯಾಸವಾಗಿ ಬಗ್ಗುಬಡಿದು ಇದೀಗ ಕ್ವಾಲಿಫೈಯರ್-2ಗೆ ಅರ್ಹತೆ ಪಡೆದಿದೆ. ಇದೀಗ ಮೇ 29ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿದೆ.

