ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್, ಮುಂಬೈ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ನೀಡಿ, ಪ್ರತಿಯಾಗಿ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ಮುಂಬೈಗೆ ಸೇರಿಸಿಕೊಳ್ಳುವ ಮೆಗಾ ಟ್ರೇಡ್ ಸಲಹೆಯನ್ನು ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹಾರ್ದಿಕ್ CSKಗೆ ಬಂದರೆ ಅವರನ್ನೇ ನಾಯಕನನ್ನಾಗಿ ಮಾಡಬೇಕು ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ: 19ನೇ ಸೀಸನ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಪ್ಲೇಆಫ್‌ನಿಂದ ಹೊರಬಿದ್ದಿವೆ. ಇದರ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್‌ ಮಾಜಿ ಆಟಗಾರ ಸುಬ್ರಮಣ್ಯಂ ಬದ್ರಿನಾಥ್ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸುವಂತಹ ಒಂದು ಮೆಗಾ ಟ್ರೇಡ್ ಐಡಿಯಾ ಮುಂದಿಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ನೀಡಿ, ಪ್ರತಿಯಾಗಿ ಚೆನ್ನೈನಿಂದ ಶಿವಂ ದುಬೆ ಮತ್ತು ಯುವ ಓಪನರ್ ಆಯುಷ್ ಮಾತ್ರೆಯನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನೋದು ಬದ್ರಿನಾಥ್ ಸಲಹೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಮುಂಬೈ ಬಿಟ್ಟು ಚೆನ್ನೈಗೆ ಬಂದರೆ, ಅವರನ್ನೇ CSK ಕ್ಯಾಪ್ಟನ್ ಮಾಡಬೇಕು ಅಂತಾನೂ ಬದ್ರಿನಾಥ್ ಹೇಳಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಈ ಸೀಸನ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ ಮುಂಬೈ ಗೆದ್ದಿದ್ದು ಕೇವಲ 4ರಲ್ಲಿ ಮಾತ್ರ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬದ್ರಿನಾಥ್ ಈ ಮೆಗಾ ಟ್ರೇಡ್ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ.

ಮೆಗಾ ಟ್ರೇಡ್‌ ಪ್ಲಾನ್ ಬಿಚ್ಚಿಟ್ಟ ಎಸ್ ಬದ್ರಿನಾಥ್

"ನಾನೇನಾದ್ರೂ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನಲ್ಲಿದ್ರೆ, ಹಾರ್ದಿಕ್ ಪಾಂಡ್ಯರನ್ನು ಚೆನ್ನೈಗೆ ಕೊಟ್ಟು, ಬದಲಿಗೆ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ತಂಡಕ್ಕೆ ತರುತ್ತಿದ್ದೆ' ಎಂದು ಹೇಳಿದ್ದಾರೆ. ಆಯುಷ್ ಮಾತ್ರೆ ಹಾಗೂ ಶಿವಂ ದುಬೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು.

'ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಆಟಗಾರರು ಒಂದಾದರೆ, CSK ಬ್ರ್ಯಾಂಡ್ ಮೌಲ್ಯ ಬೇರೆಯೇ ಮಟ್ಟಕ್ಕೆ ಹೋಗುತ್ತೆ. ಹಾರ್ದಿಕ್ ಚೆನ್ನೈ ಕ್ಯಾಪ್ಟನ್ಸಿ ಕೇಳಿದರೆ, ನಾನೇ ಅವನನ್ನು CSK ನಾಯಕನನ್ನಾಗಿ ಮಾಡುತ್ತೇನೆ. ಎಂ.ಎಸ್. ಧೋನಿ ಜೊತೆ ಹಾರ್ದಿಕ್‌ಗೆ ಒಳ್ಳೆ ಸಂಬಂಧ ಇರೋದು ಇದಕ್ಕೆ ಸಹಾಯ ಮಾಡುತ್ತೆ," ಎಂದು ಬದ್ರಿನಾಥ್ ವಿವರಿಸಿದ್ದಾರೆ.

"ಹಾರ್ದಿಕ್ ಐಪಿಎಲ್ ಕೆರಿಯರ್‌ನಲ್ಲಿ ಇನ್ನೂ ಮೂರು ಒಳ್ಳೆ ಸೀಸನ್‌ಗಳು ಬಾಕಿ ಇವೆ. ಅವರು ಬಂದರೆ ಚೆನ್ನೈ ತಂಡಕ್ಕೆ ಅದ್ಭುತ ಬ್ಯಾಲೆನ್ಸ್ ಸಿಗುತ್ತೆ. ಹಾರ್ದಿಕ್‌ನನ್ನು ಮುಂದಿಟ್ಟುಕೊಂಡು CSK ಒಂದು ಹೊಸ ತಂಡವನ್ನೇ ಕಟ್ಟಬಹುದು. ಬೇರೆ ಫ್ರಾಂಚೈಸಿಗೆ ಹೋಗೋದಕ್ಕಿಂತ, ಚೆನ್ನೈಗೆ ಬರೋದೇ ಹಾರ್ದಿಕ್‌ಗೆ ಹೆಚ್ಚು ಲಾಭ. ಯಾಕಂದ್ರೆ, ಒಬ್ಬ ಆಟಗಾರನ ಇಮೇಜ್ ಬದಲಾಯಿಸಲು CSKಗಿಂತ ಉತ್ತಮ ತಂಡ ಮತ್ತೊಂದಿಲ್ಲ," ಎಂದು ಬದ್ರಿನಾಥ್ ಸ್ಪಷ್ಟಪಡಿಸಿದ್ದಾರೆ. ಈ ಸೀಸನ್‌ನಲ್ಲಿ ಹಾರ್ದಿಕ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಕೆರಿಯರ್‌ನಲ್ಲೇ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು.

ಗುಜರಾತ್ ಟೈಟಾನ್ಸ್‌ನಿಂದ ಪಾಂಡ್ಯ ಕರೆತಂದಿದ್ದು ಮುಂಬೈನ ತಪ್ಪು ನಿರ್ಧಾರ

ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಮುಂಬೈಗೆ ವಾಪಸ್ ಬಂದಿದ್ದು ಮತ್ತು ರೋಹಿತ್ ಶರ್ಮಾರನ್ನು ಬದಿಗೊತ್ತಿ ಕ್ಯಾಪ್ಟನ್ ಆಗಿದ್ದೇ ಮುಂಬೈ ಇಂಡಿಯನ್ಸ್ ಪತನಕ್ಕೆ ಕಾರಣ ಅಂತ ಬದ್ರಿನಾಥ್ ಬೆಟ್ಟು ಮಾಡಿದ್ದಾರೆ. "ರೋಹಿತ್ ಶರ್ಮಾ ಮುಂಬೈ ಪರ 15 ವರ್ಷ ಆಡಿ, 5 ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಮುಂಬೈನ ಸ್ವಂತ ನಾಯಕ. ರೋಹಿತ್‌ರನ್ನು ಬದಲಿಸಿ ಹಾರ್ದಿಕ್ ಬಂದಾಗಿನಿಂದ ಮುಂಬೈನಲ್ಲಿ ಯಾವುದೂ ಸರಿಯಾಗಿ ನಡೀತಿಲ್ಲ. ಅದಕ್ಕೆ, ಹಾರ್ದಿಕ್‌ನನ್ನು ಕೈಬಿಟ್ಟರೂ ಮುಂಬೈ ಈಗಲೂ ಒಂದು ಬಲಿಷ್ಠ ತಂಡವೇ. ಹಾರ್ದಿಕ್‌ನನ್ನು ರಿಲೀಸ್ ಮಾಡಿ ತಿಲಕ್ ವರ್ಮಾ, ಜಸ್ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್‌ರನ್ನ ಮುಂಬೈ ಕ್ಯಾಪ್ಟನ್ ಮಾಡಬೇಕು. ಇದು ಹಾರ್ದಿಕ್ ತಪ್ಪಲ್ಲ, ಆದರೆ ಅವರ ಕ್ಯಾಪ್ಟನ್ಸಿ ಆಸೆ ತಂಡದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಿತು," ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ, ಇಂತಹದೊಂದು ದೊಡ್ಡ ಟ್ರೇಡ್‌ಗೆ ಚೆನ್ನೈ ಮತ್ತು ಮುಂಬೈ ತಂಡಗಳು ಸಿದ್ಧವಾಗುತ್ತವೆಯೇ ಎಂದು ಕ್ರಿಕೆಟ್ ಜಗತ್ತು ಈಗ ಕುತೂಹಲದಿಂದ ನೋಡುತ್ತಿದೆ.