ವಿರಾಟ್ ಕೊಹ್ಲಿಯ 13ನೇ ವಯಸ್ಸಿನ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ಕೊಹ್ಲಿಯ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಮನೋಧರ್ಮಕ್ಕೆ ನೀಡಿದ ಅಂಕಗಳು ಹಾಗೂ 'ಭರವಸೆಯ ಪ್ರತಿಭೆ' ಎಂದು ಬರೆದಿದ್ದ ಷರಾ ಎಲ್ಲರ ಗಮನ ಸೆಳೆದಿದೆ.
Virat Kohli Childhood Cricket Form Viral: ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್‌ಗೆ ಪರಿಚಯಿಸಿದ ದಿಗ್ಗಜ ಕ್ರಿಕೆಟಿಗರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಕ್ರಿಕೆಟ್ ಮೇಲಿನ ಅವರ ಬದ್ದತೆ ಪ್ರಶ್ನಾತೀತವಾದದ್ದು ಎಂದರೆ ಅತಿಶಯೋಕ್ತಿಯಲ್ಲ. ಸದ್ಯ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಕಳೆದ 19 ಸೀಸನ್‌ನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಬಾಲ್ಯದ ದಿನಗಳ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಹ್ಲಿಯ ಬ್ಯಾಟಿಂಗ್ ಸ್ಕಿಲ್‌ಗೆ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ನೀಡಿದ ರೇಟಿಂಗ್ ಕೂಡಾ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ವಿರಾಟ್ ಕೊಹ್ಲಿಯ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ವೈರಲ್
ಹೌದು, ವಿರಾಟ್ ಕೊಹ್ಲಿ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಆಟಗಾರನಾಗಿ ರಿಜಿಸ್ಟ್ರೇಷನ್ ಮಾಡಿಸಿದ ಶೀಟ್ ಎನ್ನಲಾದ ಒಂದು ಅಪ್ಲಿಕೇಷನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ವೈರಲ್ ಆಗುತ್ತಿದೆ. ಈ ಶೀಟ್ ಪ್ರಕಾರ ವಿರಾಟ್ ಕೊಹ್ಲಿ 2002ರಲ್ಲಿ ತಾವು 13 ವರ್ಷದವರಿದ್ದಾಗ ಈ ಪ್ಲೇಯರ್ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. ಇದರಲ್ಲಿ ಅವರ ಹೆಸರು, ಹುಟ್ಟಿದ ದಿನಾಂಕ, ತಮ್ಮ ವಯಸ್ಸು, ತಂದೆಯ ಹೆಸರು, ವ್ಯಾಸಂಗ ಮಾಡುತ್ತಿರುವ ಶಾಲೆ ಹಾಗೂ ತಮ್ಮ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ.
ಇನ್ನು ಕ್ರಿಕೆಟ್ ಕುರಿತಾದ ಮಾಹಿತಿಯನ್ನು ಈ ಶೀಟ್‌ನಲ್ಲಿ ನಮೂದಿಸಿದ್ದಾರೆ. ಅದರ ಪ್ರಕಾರ ಟಾಪ್ ಆರ್ಡರ್ ಬ್ಯಾಟರ್ ಹಾಗೂ ಬಲಗೈ ಬ್ಯಾಟ್ಸ್‌ಮನ್ ಎನ್ನುವುದನ್ನು ಉಲ್ಲೇಖಿಸಿದ್ದಾರೆ. ಇನ್ನು ಬೌಲಿಂಗ್ ವಿಚಾರವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇನ್ನು ತಾವು 1998ರಿಂದ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ ಸ್ಥಳೀಯಮಟ್ಟದ ಕ್ರಿಕೆಟ್ ಟೂರ್ನಿ ಆಡುತ್ತಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೊಹ್ಲಿ ಕ್ರಿಕೆಟ್ ಸ್ಕಿಲ್‌ಗೆ ಇಂಟ್ರೆಸ್ಟಿಂಗ್ ರೇಟಿಂಗ್ ಕೊಟ್ಟ ಕೋಚ್ ರಾಜ್‌ಕುಮಾರ್ ಶರ್ಮಾ!
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿರಾಟ್ ಕೊಹ್ಲಿಯ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ, ಪೋಷಿಸಿದ್ದು ಅವರ ಕೋಚ್ ರಾಜ್‌ಕುಮಾರ್ ಶರ್ಮಾ. ಪ್ಲೇಯರ್ ರಿಜಿಸ್ಟ್ರೇಷನ್ ಬಳಿಕ ಅಭ್ಯಾಸ ಶಿಬಿರದಲ್ಲಿ ಕೊಹ್ಲಿಯ ಪ್ರತಿಭೆಯನ್ನು ಅವರ ಕೋಚ್ ರಾಜ್‌ಕುಮಾರ್ ಶರ್ಮಾ ಮೌಲ್ಯಮಾಪನ ಮಾಡಿದರು. ಅದರಂತೆ ಅವರ ಕೋಚ್ ಕೊಹ್ಲಿಯ ಬ್ಯಾಟಿಂಗ್‌ಗೆ 5ಕ್ಕೆ 4 ರೇಟಿಂಗ್ ಅಂಕ ನೀಡಿದರು. ಇದರ ಜತೆಗೆ ಒಳ್ಳೆಯ ಬ್ಯಾಟಿಂಗ್ ಟೆಕ್ನಿಕ್ ಇದ್ದು, ಆಫ್‌ಸೈಡ್‌ನಲ್ಲಿ ತುಂಬಾ ಚೆನ್ನಾಗಿ ಆಡುತ್ತಾರೆ ಎನ್ನುವ ಷರಾ ಬರೆದಿದ್ದರು. ಇನ್ನು ಕೊಹ್ಲಿಯ ಬೌಲಿಂಗ್‌ಗೆ 5ಕ್ಕೆ ಎರಡು ಅಂಕ ನೀಡಿದ್ದು, ವಿರಾಟ್ ಕೊಹ್ಲಿ ಬೌಲಿಂಗ್ ಸಾಧಾರಣವಾಗಿದೆ ಎಂದು ರಿಮಾರ್ಕ್ ಬರೆದಿದ್ದರು.
ಇನ್ನು ವಿರಾಟ್ ಕೊಹ್ಲಿಯ ಫೀಲ್ಡಿಂಗ್‌ಗೆ 4, ಫಿಟ್ನೆಸ್‌ಗೆ 3 ಅಂಕ ನೀಡಿದ್ದರು. ಇನ್ನು ಟೆಂಪರ್‌ಮೆಂಟ್ ವಿಚಾರವಾಗಿ 4 ಅಂಕ ನೀಡಿದ್ದು, ಅಗ್ರೆಸ್ಸಿವ್ ಹಾಗೂ ಬದ್ದತೆಯಿದೆ ಎಂದು ಷರಾ ಬರೆದಿದ್ದರು. ಇದಷ್ಟೇ ಅಲ್ಲದೇ ಕೊಹ್ಲಿಗೆ ಒಟ್ಟಾರೆ 5ಕ್ಕೆ 4 ಅಂಕ ನೀಡಿದ್ದು, ಭರವಸೆ ಮೂಡಿಸಿರುವ ಪ್ರತಿಭೆಯಾಗಿದ್ದು, ಸ್ಥಿರತೆಯ ಅಗತ್ಯವಿದೆ ಎಂದು ರಿಮಾರ್ಕ್ ನೀಡಿದ್ದರು. ಜತೆಗೆ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೆಲೆಕ್ಟ್ ಮಾಡಿದ್ದರು. ಈ ಶೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ವೈರಲ್ ಆಗಿದೆ.

ಇನ್ನು ಸದ್ಯ ಕ್ರಿಕೆಟ್ ವಿಚಾರಕ್ಕೆ ಬಂದರೆ, ವಿರಾಟ್ ಕೊಹ್ಲಿ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು, ಹಾಲಿ ಚಾಂಪಿಯನ್ ಆರ್‌ಸಿಬಿ ಪ್ಲೇ ಆಫ್‌ಗೇರಿದೆ. ಮೇ 26ರಂದು ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು, ಈ ಹೈವೋಲ್ಟೇಜ್ ಮ್ಯಾಚ್ ಧರ್ಮಶಾಲಾದಲ್ಲಿ ನಡೆಯಲಿದೆ.


