ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಭರ್ಜರಿ ಸಿದ್ದತೆಮುಂಬರುವ ಸೆಪ್ಟೆಂಬರ್ 15ರಂದು ಭಾರತ ತಂಡ ಪ್ರಕಟ ಸಾಧ್ಯತೆಈಗಾಗಲೇ 80-90% ತಂಡ ರೆಡಿಯಾಗಿದೆ ಎಂದಿರುವ ನಾಯಕ ರೋಹಿತ್ ಶರ್ಮಾ
ನವದೆಹಲಿ(ಆ.21): ಅಕ್ಟೋಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಸೆಪ್ಟೆಂಬರ್ 15ಕ್ಕೆ ತಂಡ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಏಷ್ಯಾ ಕಪ್ ಟಿ20 ಟೂರ್ನಿ ಸೆಪ್ಟೆಂಬರ್ 11ಕ್ಕೆ ಮುಕ್ತಾಯಗೊಳ್ಳಲಿದ್ದು, ಬಳಿಕ ಮುಂಬೈನಲ್ಲಿ ಸಭೆ ಸೇರಲಿರುವ ಬಿಸಿಸಿಐ ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಲಿದೆ.
ಏಷ್ಯಾಕಪ್‌ನಲ್ಲಿ ತೋರುವ ಪ್ರದರ್ಶನ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ನಿರ್ಣಾಯಕವೆನಿಸಲಿದೆ. ಟಿ20 ವಿಶ್ವಕಪ್ ಅಕ್ಟೋಬರ್ 16ಕ್ಕೆ ಆರಂಭಗೊಳ್ಳಲಿದ್ದು, ಎಲ್ಲಾ ದೇಶಗಳು ಸೆಪ್ಟೆಂಬರ್ 16ರ ಒಳಗಾಗಿ 15 ಮಂದಿಯ ತಂಡ ಪ್ರಕಟಿಸಲು ಐಸಿಸಿ ಗಡುವು ನೀಡಿದೆ. ಇನ್ನು ಐಸಿಸಿ ವಿಶ್ವಕಪ್ ಟೂರ್ನಿಗೆ ಗರಿಷ್ಠ 30 ಮಂದಿಯನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ. ಈ ಪೈಕಿ 15 ಆಟಗಾರರು ಹಾಗೂ 8 ಮಂದಿ ಸಹಾಯಕ ಸಿಬ್ಬಂದಿಗಳನ್ನು ಆಧಿಕೃತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನುಳಿದ 7 ಮಂದಿಯ ಖರ್ಚು ವೆಚ್ಚವನ್ನು ಆಯಾ ದೇಶವೇ ಭರಿಸಬೇಕಾಗುತ್ತದೆ. ಇದರಲ್ಲಿ ಕೋವಿಡ್ 19 ಸೋಂಕನ್ನು ಗಮನದಲ್ಲಿಟ್ಟುಕೊಂಡು ಓರ್ವ ವೈದ್ಯರು ತಂಡದ ಜತೆಗೆ ಪ್ರಯಾಣಿಸಬೇಕು ಎಂದು ಐಸಿಸಿ ಕಡ್ಡಾಯವಾಗಿ ಸೂಚಿಸಿದೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಐಸಿಸಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಬಗ್ಗೆ ಪ್ರತಿಕ್ರಿಯಿಸಿದ್ದ ನಾಯಕ ರೋಹಿತ್ ಶರ್ಮಾ, ಈಗಾಗಲೇ 80-90% ತಂಡ ರೆಡಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಎರಡೂವರೆ ತಿಂಗಳುಗಳು ಬಾಕಿ ಇವೆ. ಇದಕ್ಕೂ ಮುಂಚೆ ನಾವು ಏಷ್ಯಾಕಪ್ ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎದುರು ಸರಣಿಯನ್ನಾಡಲಿದ್ದೇವೆ. ಹೀಗಾಗಿ, ಈಗಾಗಲೇ ವಿಶ್ವಕಪ್ ಟೂರ್ನಿಗೆ 80-90% ತಂಡ ರೆಡಿಯಾಗಿದೆ. ಪರಿಸ್ಥಿತಿಗನುಗುಣವಾಗಿ ತಂಡದಲ್ಲಿ ಮೂರರಿಂದ ನಾಲ್ಕು ಬದಲಾವಣೆಗಳು ಆದರೂ ಅಚ್ಚರಿಯಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದರು.
ಏಷ್ಯಾಕಪ್‌ನಿಂದ ಶಾಹೀನ್ ಅಫ್ರಿದಿ ಔಟ್; ಟೀಂ ಇಂಡಿಯಾ ಆಟಗಾರರಿಗೆ ಬಿಗ್ ರಿಲೀಫ್ ಎಂದ ಪಾಕ್ ಮಾಜಿ ವೇಗಿ..!
ಈಗಾಗಲೇ ಏಷ್ಯಾಕಪ್ ಟೂರ್ನಿಗೆ ಸಜ್ಜಾಗಿರುವ ಟೀಂ ಇಂಡಿಯಾದಿಂದ ಫಿಟ್ನೆಸ್ ಸಮಸ್ಯೆಯಿಂದಾಗಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಹೊರಗುಳಿದಿದ್ದಾರೆ. ಈ ಇಬ್ಬರು ಆಟಗಾರರು ಬಹುತೇಕ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
ಇನ್ನು ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಬಳಿಕ ವೇಗಿ ಮೊಹಮ್ಮದ್ ಶಮಿ, ಭಾರತ ಚುಟುಕು ತಂಡದಿಂದ ಬಹುತೇಕ ಸರಣಿಗಳಲ್ಲಿ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದ ವೇಗದ ಪಿಚ್ ಗಮನದಲ್ಲಿಟ್ಟುಕೊಂಡು ವೇಗಿ ಶಮಿಗೆ ಭಾರತ ತಂಡದಲ್ಲಿ ಮಣೆ ಹಾಕಿದರೂ ಅಚ್ಚರಿ ಪಡುವಂತಿಲ್ಲ.
ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಎದುರು ಮುಗ್ಗರಿಸಿದ್ದರಿಂದಾಗಿ ನಾಕೌಟ್ ಹಂತಕ್ಕೇರಲು ವಿಫಲವಾಗಿ ಮುಖಭಂಗ ಅನುಭವಿಸಿತ್ತು. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಚಾಂಪಿಯನ್ ಭಾರತ, ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ಚುಟುಕು ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿದೆ.
