Asianet Suvarna News Asianet Suvarna News

IPL Media Rights: ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು 40,000 ಕೋಟಿಗೆ ಹರಾಜು?

* ಐಪಿಎಲ್ 2022 ಟೂರ್ನಿಗೆ ಭರದಿಂದ ಸಿದ್ದತೆ ಆರಂಭಿಸಿರುವ ಬಿಸಿಸಿಐ

* ಮಾಧ್ಯಮ ಹಕ್ಕು ಮಾರಾಟದಿಂದ 40 ಸಾವಿರ ಕೋಟಿ ರುಪಾಯಿ ಗಳಿಸುವ ಲೆಕ್ಕಾಚಾರದಲ್ಲಿದೆ ಬಿಸಿಸಿಐ

* ಸದ್ಯದಲ್ಲೇ ಟೆಂಡರ್ ಕರೆಯುವುದಾಗಿ ಘೋಷಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

BCCI should fetch above 40000 Crore Rupees from IPL rights Says Sourav Ganguly kvn
Author
Bengaluru, First Published Dec 18, 2021, 1:52 PM IST

ನವದೆಹಲಿ(ಡಿ.18): 2023ರಿಂದ 2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು (IPL Media Rights) ಬರೋಬ್ಬರಿ 40,000 ಕೋಟಿ ರುಪಾಯಿಗೆ ಹರಾಜಾಗುವ ನಿರೀಕ್ಷೆ ಇದೆ ಎಂದು ಬಿಸಿಸಿಐ (BCCI) ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. 2018-22ರ ವರೆಗಿನ ಅವಧಿಗೆ ಸ್ಟಾರ್‌ ಸಂಸ್ಥೆ 16,347.50 ಕೋಟಿ ರುಪಾಯಿಗೆ ಪ್ರಸಾರ ಹಕ್ಕು ಖರೀದಿಸಿತ್ತು. ಆ ಮೊತ್ತದ ಮೂರರಷ್ಟು ಹಣ ಗಳಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 4-5 ಸಂಸ್ಥೆಗಳ ನಡುವೆ ಬಿಡ್ಡಿಂಗ್‌ಗೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಡಿಜಿಟೆಲ್‌ ಮಾಧ್ಯಮ ಹಕ್ಕು ಖರೀದಿಗೆ ಭಾರೀ ಪೈಪೋಟಿ ಏರ್ಪಡಬಹುದು ಎಂದಿದ್ದಾರೆ.

15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿವೆ. ಕಳೆದ ಅಕ್ಟೋಬರ್‌ನಲ್ಲಿ ಹೊಸ ತಂಡಗಳಿಗಾಗಿ ನಡೆದ ಬಿಡ್ಡಿಂಗ್‌ನಲ್ಲಿ ಬಿಸಿಸಿಐ ಈಗಾಗಲೇ 12,725 ಕೋಟಿ ರುಪಾಯಿಗಳನ್ನು ಗಳಿಸಿದೆ. ಇದೀಗ ಇನ್ನೊಂದು ತಿಂಗಳಿನಲ್ಲಿ ಮತ್ತೆ 40,000 ಕೋಟಿ ರುಪಾಯಿಗಳನ್ನು ಬಿಸಿಸಿಐ ಜೇಬಿಗಿಳಿಸಲು ಎದುರು ನೋಡುತ್ತಿದೆ.

ಹೊಸ ಎರಡು ಫ್ರಾಂಚೈಸಿಗಳಿಂದ ನಮಗೆ 12 ಸಾವಿರ ಕೋಟಿಗೂ ಅಧಿಕ ಹಣ ಹರಿದು ಬಂದಿದ್ದು, ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ. ಇದೀಗ ನಾವು ಮಾಧ್ಯಮ ಹಕ್ಕುಗಳಿಂದ ಇನ್ನೂ 40 ಸಾವಿರ ಕೋಟಿ ರುಪಾಯಿ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಸದ್ಯದಲ್ಲೇ ಈ ಕುರಿತಂತೆ ಟೆಂಡರ್ ಕರೆಯಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

Virat vs BCCI : ಕೊಹ್ಲಿ ಆಡಿದ ಅರ್ಧದಷ್ಟು ಪಂದ್ಯಗಳನ್ನು ಆಯ್ಕೆ ಸಮಿತಿಯಲ್ಲಿರುವ ಎಲ್ಲರೂ ಸೇರಿ ಆಡಿಲ್ಲ.!

ಒಂದು ವೇಳೆ ಮಾಧ್ಯಮದ ಹಕ್ಕು 38 ಸಾವಿರ ಕೋಟಿ ರುಪಾಯಿಗೆ ಹರಾಜಾದರೂ ಸಹಾ ಬಿಸಿಸಿಐ ಖಾತೆಗೆ ಸುಮಾರು 50 ಸಾವಿರ ಕೋಟಿ ರುಪಾಯಿಗೂ ಅಧಿಕ ಆದಾಯ ಹರಿದು ಬರಲಿದೆ. ಇದರಿಂದ ಕ್ರೀಡೆ ಮತ್ತೊಂದು ಸ್ಥರಕ್ಕೆ ತಲುಪಲಿದೆ. ಐಪಿಎಲ್‌ನಿಂದ ಈಗಾಗಲೇ ಭಾರತೀಯ ಕ್ರಿಕೆಟ್‌ಗೆ (Indian Cricket) ಸಾಕಷ್ಟು ಅನುಕೂಲವಾಗಿದೆ. ಇನ್ನು ಈ ಮಟ್ಟಿಗಿನ ಹಣದಿಂದ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

ಕಳೆದ ಬಾರಿಯ ಮಾಧ್ಯಮ ಹಕ್ಕು ಹರಾಜು ಸ್ಟಾರ್ ಇಂಡಿಯಾ (Star India) ಸಂಸ್ಥೆಯ ಪಾಲಾಗಿತ್ತು. 2018ರಿಂದ 2022ರ ಅವಧಿಗೆ ಸ್ಟಾರ್ ಇಂಡಿಯಾ ಸಂಸ್ಥೆ 16,347.50 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿರುವುದರಿಂದ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗುವುದರಿಂದ ಮಾಧ್ಯಮ ಹಕ್ಕಿನ ಬೆಲೆಯೂ ಹೆಚ್ಚಾಗುವ ನಿರೀಕ್ಷೆಯಿದೆ.

IPL Auction 2021: ಸ್ಪಿನ್ ಅಸ್ತ್ರ ರಶೀದ್ ಖಾನ್ ಖರೀದಿಸಲು RCB ಸೇರಿ 3 ತಂಡಗಳ ನಡುವೆ ಪೈಪೋಟಿ..?

ಈ ಮೊದಲು ಐಪಿಎಲ್ ಮಾಧ್ಯಮ ಹಕ್ಕು ಪಡೆಯಲು ಸ್ಟಾರ್ ಇಂಡಿಯಾ ಹಾಗೂ ಸೋನಿ (Sony) ಸಂಸ್ಥೆಯ ನಡುವೆ ಮಾತ್ರ ಪೈಪೋಟಿಯಿತ್ತು. ಆದರೆ ಈ ಬಾರಿ ಸ್ಟಾರ್ ಇಂಡಿಯಾ ಸಂಸ್ಥೆಗೆ ರಿಲಯನ್ಸ್ ಸಂಸ್ಥೆ ಸೇರಿದಂತೆ ಮತ್ತೆ ಕೆಲವು ಸಂಸ್ಥೆಗಳಿಂದ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಸೋನಿ, ಸ್ಟಾರ್ ಇಂಡಿಯಾ, ರಿಲಯನ್ಸ್‌ನ ವೈಕಾಮ್‌ ಹಾಗೂ ಅಮೇಜಾನ್‌ ನಂತಹ ಸಂಸ್ಥೆಗಳು ಮುಂದಿನ ಐದು ವರ್ಷಗಳ ಅವಧಿಗೆ ಮಾಧ್ಯಮ ಹಕ್ಕು ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ

Follow Us:
Download App:
  • android
  • ios