Virat vs BCCI : ಕೊಹ್ಲಿ ಆಡಿದ ಅರ್ಧದಷ್ಟು ಪಂದ್ಯಗಳನ್ನು ಆಯ್ಕೆ ಸಮಿತಿಯಲ್ಲಿರುವ ಎಲ್ಲರೂ ಸೇರಿ ಆಡಿಲ್ಲ.!
ಬೆಂಗಳೂರು: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಬಿಸಿಸಿಐ (BCCI) ಆಯ್ಕೆ ಸಮಿತಿಯ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ (Kirti Azad) ಮಧ್ಯ ಪ್ರವೇಶಿಸಿದ್ದು, ಆಯ್ಕೆ ಸಮಿತಿಯ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ವೇಳೆ, ದಿಢೀರ್ ಎನ್ನುವಂತೆ ಬಿಸಿಸಿಐ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ, ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದೆ
ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದಕ್ಷಿಣ ಆಫ್ರಿಕಾಗೆ ಪ್ರವಾಸ ತೆರಳುವ ಮುನ್ನ ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕೊಹ್ಲಿ, ಟೆಸ್ಟ್ ತಂಡಕ್ಕೆ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯು ನನ್ನೊಂಗೆ 90 ನಿಮಿಷಗಳ ಕಾಲ ಚರ್ಚಿಸಿತು. ಕೊನೆಯಲ್ಲಿ ನೀವು ಇನ್ನು ಏಕದಿನ ತಂಡದ ನಾಯಕರಾಗಿ ಮುಂದುವರೆಯುವುದಿಲ್ಲ ಎಂದು ಹೇಳಿದರು ಎಂದು ಕೊಹ್ಲಿ ಹೇಳಿದ್ದರು.
ಆಯ್ಕೆ ಸಮಿತಿ ಈ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಇನ್ನು ಮುಂದೆ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಏಕದಿನ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವುದಷ್ಟೇ ನನ್ನ ಗುರಿಯಾಗಿದೆ ಎಂದಿದ್ದರು.
ಇದೀಗ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಕೀರ್ತಿ ಆಜಾದ್, ಬಿಸಿಸಿಐ ಆಯ್ಕೆ ಸಮಿತಿ ವಿರುದ್ದ ಕಿಡಿಕಾರಿದ್ದಾರೆ. ಬಿಸಿಸಿಐ ಕೊಹ್ಲಿಯನ್ನು ಕೆಳಗಿಳಿಸಿದ ರೀತಿ ನಿಜಕ್ಕೂ ವಿರಾಟ್‌ಗೆ ನೋವುಂಟು ಮಾಡಿರಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ತಂಡವನ್ನು ಆಯ್ಕೆ ಮಾಡಿದಾಗ, ಆ ಪತ್ರವನ್ನು ಬಿಸಿಸಿಐ ಅಧ್ಯಕ್ಷರಾದವರಿಗೆ ತೋರಿಸಿ, ಅವರು ಒಪ್ಪಿಗೆ ನೀಡಿದ ಬಳಿಕವಷ್ಟೇ ತಂಡವನ್ನು ಘೋಷಿಸಲಾಗುತ್ತದೆ. ನಾಯಕತ್ವ ಬದಲಾವಣೆಯನ್ನು ಬಿಸಿಸಿಐ ಅಧ್ಯಕ್ಷರಾದವರು ಘೋಷಿಸಬೇಕು, ಬದಲಾಗಿ ಆಯ್ಕೆ ಸಮಿತಿಯಲ್ಲ ಎಂದಿದ್ದಾರೆ.
ನೀವೇ ಅರ್ಥಮಾಡಿಕೊಳ್ಳಿ, ನಾನು ಹೀಗೆ ಹೇಳಬಾರದು, ಯಾಕೆಂದರೆ, ಆಯ್ಕೆ ಸಮಿತಿಯಲ್ಲಿ ಸಾಕಷ್ಟು ಒಳ್ಳೆಯವರಿದ್ದಾರೆ. ಆದರೆ ವಿರಾಟ್ ಕೊಹ್ಲಿ ಇದುವರೆಗೂ ಆಡಿದ ಪಂದ್ಯಗಳಷ್ಟು ಆಯ್ಕೆ ಸಮಿತಿಯಲ್ಲಿರುವ ಎಲ್ಲರೂ ಸೇರಿ ಆಡಿಲ್ಲ ಎಂದು ಕೀರ್ತಿ ಆಜಾದ್ ಮಾತು ಮುಗಿಸಿದ್ದಾರೆ.