Asianet Suvarna News Asianet Suvarna News

ರೋಹಿತ್ ಶರ್ಮಾ ಹೆಗಲಿಗೆ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಹೊಣೆ..?

* ರೋಹಿತ್ ಶರ್ಮಾ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತ

* ಈಗಾಗಲೇ ಸೀಮಿತ ಓವರ್‌ಗಳ ಭಾರತ ತಂಡದ ನಾಯಕರಾಗಿರುವ ರೋಹಿತ್

* ಸ್ಟ್‌ಇಂಡೀಸ್‌ ವಿರುದ್ಧ ನಡೆಯಲಿರುವ ಸರಣಿಗೂ ಮುನ್ನ ಬಿಸಿಸಿಐ ಅಧಿಕೃತ ಘೋಷಣೆ?

BCCI Set to officially name Rohit Sharma as new test captain Says Report kvn
Author
Bengaluru, First Published Jan 24, 2022, 4:15 PM IST

ಮುಂಬೈ(ಜ.24): ಭಾರತ ಸೀಮಿತ ಓವರ್‌ ನಾಯಕ ರೋಹಿತ್‌ ಶರ್ಮಾ (Rohit Sharma) ಅವರು ಟೆಸ್ಟ್‌ ತಂಡಕ್ಕೂ ಪೂರ್ಣಾವಧಿ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮುಂದಿನ ತಿಂಗಳು ವೆಸ್ಟ್‌ಇಂಡೀಸ್‌ ವಿರುದ್ಧ ನಡೆಯಲಿರುವ ಸರಣಿಗೂ ಮುನ್ನ ಬಿಸಿಸಿಐ ಈ ಕುರಿತು ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.  ‘ರೋಹಿತ್‌ ಶರ್ಮಾ ಭಾರತ ಟೆಸ್ಟ್‌ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಲಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ರೋಹಿತ್ ಶರ್ಮಾ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ನೇಮಿಸಲಾಗಿತ್ತು. ಮುಂದೆ ಅವರಿಗೆ ನಾಯಕತ್ವ ಹೊಣೆ ನೀಡಲಾಗುತ್ತದೆ. ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ನಾಯಕರಾಗುವುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ಸದ್ಯದಲ್ಲೇ ಬಿಸಿಸಿಐನಿಂದ (BCCI) ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ. ಬಿಸಿಸಿಐ ಆಯ್ಕೆ ಸಮಿತಿಯು ಸಭೆ ಸೇರಿದ ಬಳಿಕ ಅಂತಿಮವಾಗಿ ರೋಹಿತ್ ಶರ್ಮಾ ಅವರ ಹೆಸರನ್ನು ಟೆಸ್ಟ್ ನಾಯಕ ಎಂದು ಘೋಷಿಸಲಿದೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ವಿರಾಟ್‌ ಕೊಹ್ಲಿ (Virat Kohli) ಟೆಸ್ಟ್‌ ತಂಡದ ನಾಯಕತ್ವಕ್ಕೂ ವಿದಾಯ ಹೇಳಿದ್ದರು. ಇದರ ಬೆನ್ನಲ್ಲೇ ನಾಯಕತ್ವದ ಕುರಿತು ಪ್ರಶ್ನೆಗಳು ಉದ್ಭವಿಸಿದ್ದವು. ನಾಯಕತ್ವ ಸ್ಥಾನಕ್ಕೆ ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ ಮತ್ತು ಜಸ್ಟ್ರೀತ್‌ ಬುಮ್ರಾ ಹೆಸರು ಮುನ್ನೆಲೆಯಲ್ಲಿದ್ದವು. ಇದೀಗ ಉಪನಾಯಕ ಸ್ಥಾನಕ್ಕೆ ಭವಿಷ್ಯದ ನಾಯಕರನ್ನು ಗಮನದಲ್ಲಿಟ್ಟುಕೊಂಡು ಕೆ.ಎಲ್‌. ರಾಹುಲ್(KL Rahul), ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ರಿಷಭ್ ಪಂತ್ (Rishabh Pant) ಅವರ ಹೆಸರುಗಳು ಚಾಲ್ತಿಯಲ್ಲಿದ್ದು, ಆಯ್ಕೆ ಸಮಿತಿಯು ಸಾಕಷ್ಟು ಅಳೆದು ತೂಗಿ ಈ ಆಟಗಾರರ ಪೈಕಿ ಒಬ್ಬರನ್ನು ಉಪನಾಯಕರನ್ನಾಗಿ ನೇಮಕ ಮಾಡಲಿದೆ ಎಂದು ವರದಿಯಾಗಿದೆ.

ರೋಹಿತ್ ಶರ್ಮಾ ಸಂಪೂರ್ಣ ಫಿಟ್‌: ಟೀಂ ಇಂಡಿಯಾ(Team India) ಸೀಮಿತ ಓವರ್‌ಗಳ ತಂಡದ ನಾಯಕ ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದರು. ಹೀಗಾಗಿ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಸಾಕಷ್ಟು ಕಠಿಣ ಪರಿಶ್ರಮದ ಮೂಲಕ ಫಿಟ್ನೆಸ್ ಸಾಧಿಸಿದ್ದಾರೆ. ಇದೀಗ ಹಿಟ್‌ಮ್ಯಾನ್ ಸಾಕಷ್ಟು ಫಿಟ್ ಆದಂತೆ ಕಂಡು ಬಂದಿದ್ದು, ವರದಿಗಳ ಪ್ರಕಾರ ರೋಹಿತ್ ಶರ್ಮಾ ಸರಿಸುಮಾರು 6 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

West Indies Tour Of India : ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದ ಬಿಸಿಸಿಐ!

ಕೆಲ ತಿಂಗಳುಗಳ ಹಿಂದಷ್ಟೇ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಕೌಟ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ಇದೀಗ ಸೀಮಿತ ಓವರ್‌ಗಳ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮುಂದೆ ಬೆಟ್ಟದಷ್ಟು ಸವಾಲುಗಳಿದ್ದು, ಮುಂಬರುವ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಹಾಗೂ 2023ರಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬೇಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ರೋಹಿತ್ ಶರ್ಮಾ ನಾಯಕರಾದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಟಿ20 ಸರಣಿಯನ್ನು ಭಾರತ ತಂಡ ಗೆದ್ದು ಬೀಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಾವ ರೀತಿಯ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios