ಟಿ20 ವಿಶ್ವಕಪ್ ಗೆದ್ದವರಿಗೆ 125 ಕೋಟಿ: ಕೊಹ್ಲಿ, ರೋಹಿತ್, ದ್ರಾವಿಡ್ ಯಾರಿಗೆ ಎಷ್ಟು ಸಿಕ್ತು?
ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರುಪಾಯಿ ಬಹುಮಾನ ಘೋಷಿಸಿತ್ತು. ಇದೀಗ ಆ ನಗದು ಬಹುಮಾನವನ್ನು ಟೀಂ ಇಂಡಿಯಾ, ಆಟಗಾರರು, ಸಹಾಯಕ ಸಿಬ್ಬಂದಿಗಳು ಸೇರಿದಂತೆ 42 ಮಂದಿಗೆ ಹಂಚಲಾಗಿದೆ. ಈ ಪೈಕಿ ಯಾರಿಗೆ ಎಷ್ಟು ನಗದು ಬಹುಮಾನ ಸಿಕ್ಕಿದೆ ನೋಡೋಣ ಬನ್ನಿ
ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡವು ದಶಕಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2013ರಲ್ಲಿ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಕಳೆದ 11 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ಭಾರತ ತಂಡವು ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ರೋಚಕವಾಗಿ ಮಣಿಸಿ ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ರೋಹಿತ್ ಶರ್ಮಾ ಪಡೆಗೆ ಬರೋಬ್ಬರಿ 125 ಕೋಟಿ ರುಪಾಯಿಗಳ ನಗದು ಬಹುಮಾನವನ್ನು ಘೋಷಿಸಿತ್ತು.
ಬಿಸಿಸಿಐ ಘೋಷಿಸಿದ್ದ 125 ಕೋಟಿ ರುಪಾಯಿ ನಗದು ಬಹುಮಾನವನ್ನು ಕೇವಲ ಆಟಗಾರರು ಮಾತ್ರವಲ್ಲದೇ, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸಹಾಯಕ ಸಿಬ್ಬಂದಿಗಳು ಹಾಗೂ ಇನ್ನಿತರ ಸಿಬ್ಬಂದಿಗಳನ್ನು ಒಳಗೊಂಡಂತೆ ಬಹುಮಾನವನ್ನು ಘೋಷಿಸಿತ್ತು. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದಿಂದ 42 ಮಂದಿ ಪಾಲ್ಗೊಂಡಿದ್ದರು.
ರೋಹಿತ್ ಶರ್ಮಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ..!
ಇದೀಗ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಭಾರತ ಕ್ರಿಕೆಟ್ ತಂಡದ 15 ಆಟಗಾರರರಿಗೆ ತಲಾ 5 ಕೋಟಿ ರುಪಾಯಿ ನಗದು ವಿತರಿಸಲಾಗಿದೆ. ಅಂದರೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಎಲ್ಲಾ 15 ಆಟಗಾರರಿಗೂ ತಲಾ 5 ಕೋಟಿ ರುಪಾಯಿ ನಗದು ಬಹುಮಾನ ಜೇಬಿಗಿಳಿಸಿಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೂ 5 ಕೋಟಿ ರುಪಾಯಿ ನಗದು ಬಹುಮಾನ ನೀಡಲಾಗಿದೆ.
ಇನ್ನು ರಾಹುಲ್ ದ್ರಾವಿಡ ಜತೆಗೆ ಸಹಾಯಕ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಹಾಗೂ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆಗೆ ತಲಾ 2.5 ಕೋಟಿ ರುಪಾಯಿ ಮತ್ತು ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಅಜಿತ್ ಅಗರ್ಕರ್ ಹಾಗೂ ಉಳಿದ ಸದಸ್ಯರಿಗೂ ತಲಾ ಒಂದು ಕೋಟಿ ರುಪಾಯಿ ನೀಡಲಾಗಿದೆ.
ಟೀಮ್ ಇಂಡಿಯಾ ಪ್ಲೇಯರ್ಸ್‌ಗೆ 125 ಕೋಟಿ ರೂಪಾಯಿ ಚೆಕ್ ನೀಡಿದ ಬಿಸಿಸಿಐ
ಇನ್ನು ಮೂವರು ಫಿಸಿಯೋ ಥೆರಪಿಸ್ಟ್. ಮೂವರು ಥ್ರೋಡೌನ್ ಸ್ಪೆಷಲಿಸ್ಟ್, ಸ್ಟ್ರೆಂಥ್ & ಕಂಡೀಷನಿಂಗ್ ಕೋಚ್‌ಗೆ ತಲಾ 2 ಕೋಟಿ ರುಪಾಯಿ ನಗದು ಬಹುಮಾನ ವಿತರಿಸಲಾಗಿದೆ. ಇದಷ್ಟೇ ಅಲ್ಲದೇ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್, ಆವೇಶ್ ಖಾನ್, ಶುಭ್‌ಮನ್ ಗಿಲ್ ಹಾಗೂ ಖಲೀಲ್ ಅಹಮದ್ ತಲಾ ಒಂದು ಕೋಟಿ ರುಪಾಯಿ ಜೇಬಿಗಿಳಿಸಿಕೊಂಡಿದ್ದಾರೆ.