ಟೀಮ್ ಇಂಡಿಯಾ ಪ್ಲೇಯರ್ಸ್‌ಗೆ 125 ಕೋಟಿ ರೂಪಾಯಿ ಚೆಕ್ ನೀಡಿದ ಬಿಸಿಸಿಐ
ಟಿ20 ವಿಶ್ವಕಪ್ ಗೆದ್ದು ತವರಿಗೆ ಆಗಮಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಅದ್ದೂರಿಯಾಗಿ ಸ್ವಾಗತ ನೀಡಿದೆ. ಪ್ರಧಾನಿ ಮೋದಿ ಭೇಟಿ, ಗೆಲುವಿನ ಪರೇಡ್ ಹಾಗೂ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ಮಾನ ಕಾರ್ಯಕ್ರಮದ ಬಳಿಕ 125 ಕೋಟಿಯ ಚೆಕ್‌ಅನ್ನು ಆಟಗಾರರಿಗೆ ವಿತರಿಸಿದೆ.
ಮುಂಬೈ (ಜು.4): ಅದ್ದೂರಿಯಾಗಿ ನಡೆದ ಗೆಲುವಿನ ಪರೇಡ್ ಬಳಿಕ, ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ವತಿಯಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದ್ದೂರಿ ಸ್ವಾಗತ ಕಾರ್ಯಕ್ರಮದ ಕೊನೆ ಎನ್ನುವಂತೆ ಬಿಸಿಸಿಐ ತಾನು ಘೋಷಣೆ ಮಾಡಿದ್ದ 125 ಕೋಟಿ ರೂಪಾಯಿಯ ಬಹುಮಾನ ಮೊತ್ತದ ಚೆಕ್‌ಅನ್ನು ವಿಶ್ವಕಪ್ ವಿಜೇತ ತಂಡಕ್ಕೆ ಹಸ್ತಾಂತರ ಮಾಡಿತು. ಬಿಸಿಸಿಐ ಅಧಿಕಾರಿಗಳು ಈ ಸಮಯದಲ್ಲಿ ಉಪಸ್ಥಿತರಿದ್ದರು. ಇದರ ಬಳಿಕ ಟ್ರೋಫಿ ಗೆದ್ದ ತಂಡದ ಆಟಗಾರರು ವಂದೇ ಮಾತರಂ ಹಾಡಿಗೆ ಇಡೀ ಮೈದಾನದ ಸುತ್ತ ವಿಕ್ಟರಿ ಲ್ಯಾಪ್ ಮಾಡಿತು. ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಜನಸ್ತೋಮ ವಿಜೇತ ತಂಡದ ಆಟಗಾರರ ಹೆಸರು ಕೂಗಿ ಸಂಭ್ರಮಿಸಿದರು. ಆಟಗಾರರು ವಿಕ್ಟರಿ ಲ್ಯಾಪ್ ಮಾಡುವಾಗ 2011ರ ಏಕದಿನ ವಿಶ್ವಕಪ್‌ನ ಟೀಮ್‌ನ ದಿನಗಳನ್ನು ನೆನಪಿಸಿತು. ಅಂದೂ ಕೂಡ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಬೇರೆಲ್ಲ ಗೀತೆಗಿಂತ ವಂದೇ ಮಾತರಂ ಹೆಚ್ಚಾಗಿ ಮೊಳಗಿತ್ತು.
ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ವಿಶೇಷವಾದ ನೆನಪಿನ ಬಗ್ಗೆ ಈ ವೇಳೆ ಮಾತನಾಡಿದರು. 2024 ರ T20 ವಿಶ್ವಕಪ್ ಗೆದ್ದ ನಂತರ ನಾನು ಮತ್ತು ರೋಹಿತ್ ಇಬ್ಬರೂ ಕಣ್ಣೀರು ಹಾಕಿದ್ದೆವು ಎಂದು ಹೇಳಿದರು. ಕೊಹ್ಲಿ ಅವರು ರೋಹಿತ್ ಅವರನ್ನು ತಬ್ಬಿಕೊಂಡಾಗ - ಆ ಕ್ಷಣವು ಅವರ ವೃತ್ತಿಜೀವನದಲ್ಲಿ ಅವರಿಗೆ ಅತ್ಯಂತ ವಿಶೇಷ ಸ್ಮರಣೆಯಾಗಿ ಉಳಿಯುತ್ತದೆ ಎಂದಿದ್ದಾರೆ.
ಈ ವೇಳೆ ಇಡೀ ಟೂರ್ನಿಯಲ್ಲಿ ಸ್ಮರಣೀಯ ಎನಿಸುವಂಥ ಬೌಲಿಂಗ್ ಮಾಡಿದ ಜಸ್‌ಪ್ರೀತ್ ಬುಮ್ರಾರನ್ನು ಪ್ರಶಂಸೆ ಮಾಡಿದ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಡೆತ್ ಓವರ್ ಬೌಲಿಂಗ್‌ಅನ್ನು ಅಪಾರವಾಗಿ ಶ್ಲಾಘಿಸಿದರು. ಅದಲ್ಲದೆ, ಜಸ್‌ಪ್ರೀತ್ ಬುಮ್ರಾನಂಥ ವೇಗಿ ಯುಗಕ್ಕೆ ಒಬ್ಬರು ಸಿಗುತ್ತಾರೆ. ಅವರು ನಿಜಕ್ಕೂ ವಿಶ್ವದ 8ನೇ ಅಚ್ಚರಿ ಎಂದರೂ ತಪ್ಪಲ್ಲ ಎಂದರು. ಹಾಗೇನಾದರೂ ನಾವು ಕಾಪಾಡಿಕೊಳ್ಳಬೇಕಾದ ವಿಚಾರವೇನಾದರೂ ಇದ್ದರೆ, ಅದು ಜಸ್‌ಪ್ರೀತ್ ಬುಮ್ರಾ ಮಾತ್ರ ಎಂದು ಹೇಳಿದ್ದಾರೆ.
ನಿರ್ಧಾರ ಬದಲಿಸಿದ ಪೋನ್ ಕಾಲ್: ಕಾರ್ಯಕ್ರಮದಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, 2023ರ ಏಕದಿನ ವಿಶ್ವಕಪ್ ಸೋಲಿನ ಬಳಿಕ ಕೋಚ್ ಸ್ಥಾನದಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದೆ. ಈ ಹಂತದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮ ಫೋನ್ ಮಾಡಿದ್ದರಿಂದ ನನ್ನ ನಿರ್ಧಾರ ಬದಲಾಯಿಸಿದೆ ಎಂದಿದ್ದಾರೆ. ಅಂದು ಕರೆ ಮಾಡಿದ ರೋಹಿತ್ ಶರ್ಮ, ಏಕದಿನ ವಿಶ್ವಕಪ್ ಸೋಲಿನಿಂದ ಬೇಸರವಾಗಿರುವುದು ನಿಜ. ಆದರೆ, ಇನ್ನೊಂದು 6-7 ತಿಂಗಳಲ್ಲಿ ಟಿ20 ವಿಶ್ವಕಪ್ ಇದೆ. ನಮ್ಮಿಬ್ಬರ ಕೊನೆಯ ಅವಕಾಶ ಎನ್ನುವಂತೆ ಒಟ್ಟಾಗಿ ಹೋರಾಟ ಮಾಡೋಣ ಎಂದಿದ್ದರು. ಆ ಬಳಿಕ ನನ್ನ ನಿರ್ಧಾರ ಬದಲಾಯಿಸಿದೆ. ರೋಹಿತ್ ಶರ್ಮಗೆ ಥ್ಯಾಂಕ್ಸ್. ಇದೀಗ ನನ್ನ ಸುದೀರ್ಘ ದಿನಗಳ ಕನಸು ನನಸಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ಅದರೊಂದಿಗೆ ವಿಶ್ವಕಪ್‌ನಲ್ಲಿ ಆಡಿದ ಟೀಮ್‌ನ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ಈ ಟೀಮ್‌ನಲ್ಲಿರುವ ಅಚಲವಾದ ಮನೋಭಾವಕ್ಕೆ ವಿಶ್ವಕಪ್ ಟ್ರೋಫಿ ಸಿಗಲೇಬೇಕಿತ್ತು. ಇದಕ್ಕೆ ಅರ್ಹ ತಂಡವಾಗಿತ್ತು ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಜೊತೆ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Leader-Dictator!
ಇದಕ್ಕೂ ಮುನ್ನ ಮಾತನಾಡಿದ್ದ ಟೀಮ್ ಕ್ಯಾಪ್ಟನ್ ರೋಹಿತ್ ಶರ್ಮ, ಫೈನಲ್ ಓವರ್‌ನ ಕ್ಷಣಗಳನ್ನು ಮಾತನಾಡಿದರು. ಸೂರ್ಯಕುಮಾರ್ ಯಾದವ್ ಪಡೆದುಕೊಂಡ ಡೇವಿಡ್ ಮಿಲ್ಲರ್ ಅವರ ಬ್ರಿಲಿಯಂಟ್ ಕ್ಯಾಚ್ ತಾವೆಂದೂ ಮರೆಯೋದಿಲ್ಲ ಎಂದು ಹೇಳಿದರು. ಅದರೊಂದಿಗೆ ಹಾರ್ದಿಕ್ ಪಾಂಡ್ಯ ಅವರ ಫೈನಲ್ ಓವರ್‌ನ ಬಗ್ಗೆ ಮಾತನಾಡಲು ಆರಂಭಿಸಿದಾಗ, ಇಡೀ ವಾಂಖೆಡೆ ಪ್ರೇಕ್ಷಕರು ವಾಂಖೆಡೆ, ವಾಂಖೆಡೆ.. ಎಂದು ಕರತಾಡನ ಮಾಡಲು ಆರಂಭಿಸಿದರು.
Watch: ಕಿಕ್ಕಿರಿದ ಜನಸಂದಣಿ ನಡುವೆಯೂ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಟೀಮ್ ಇಂಡಿಯಾ ಫ್ಯಾನ್ಸ್!