IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?
IPL ಕ್ರಿಕೆಟ್ ಇತಿಹಾಸದಲ್ಲೇ ಕ್ರಾಂತಿಕಾರಕ ಹೆಜ್ಜೆಯಿಡಲು ಬಿಸಿಸಿಐ ಮುಂದಾಗುವ ಸಾಧ್ಯತೆಯಿದೆ. ಹೀಗಾದರೆ 11 ಆಟಗಾರರ ಬದಲಿಗೆ 15 ಆಟಗಾರರು ಕ್ರಿಕೆಟ್ ಆಡುವ ಸಾಧ್ಯತೆಯಿದೆ. ಅರೇ ಇದೇನಿದು ಹೊಸ ವಿಚಾರ ಅಂತೀರಾ... ಇಲ್ಲಿದೆ ನೋಡಿ ಪವರ್ ಪ್ಲೇಯರ್ ಬಗೆಗಿನ ಕಂಪ್ಲೀಟ್ ಮಾಹಿತಿ...
ನವದೆಹಲಿ(ನ.05): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಿಸುವ ಮೂಲಕ ಟಿ20 ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಲು ನಿರ್ಧರಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನ ಮುಂದಿನ ವರ್ಷದ ಆವೃತ್ತಿಯಲ್ಲಿ ‘ಪವರ್ ಪ್ಲೇಯರ್’ ಎನ್ನುವ ಹೊಸ ಪರಿಕಲ್ಪನೆಯನ್ನು ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಈ ನಿಯಮ ಕಾರ್ಯರೂಪಕ್ಕೆ ಬಂದರೆ, ತಂಡಗಳಿಗೆ ಪಂದ್ಯದ ಯಾವುದೇ ಹಂತದಲ್ಲಿ ವಿಕೆಟ್ ಪತನಗೊಂಡಾಗ ಇಲ್ಲವೇ ಓವರ್ ಮುಕ್ತಾಯಗೊಂಡಾಗ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಅವಕಾಶ ಸಿಗಲಿದೆ. ಪಂದ್ಯವೊಂದರಲ್ಲಿ ಪವರ್ ಪ್ಲೇಯರ್ ಬಳಕೆ ಎಷ್ಟು ಬಾರಿ ಮಾಡಬಹುದು ಎನ್ನುವ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿಲ್ಲ.
RCB ಸೇರಿಕೊಳ್ತಾರಾ ಬುಮ್ರಾ? ಅಭಿಮಾನಿ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಉತ್ತರ!
ಬುಧವಾರ ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಲಿದೆ ಎನ್ನಲಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ‘ಪವರ್ ಪ್ಲೇಯರ್’ ನಿಯಮವನ್ನು ಅಳವಡಿಕೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಅಧ್ಯಕ್ಷ ಸೌರವ್ ಗಂಗೂಲಿಯಿಂದ ಒಪ್ಪಿಗೆ ಬೇಕಿದೆಯಷ್ಟೆ. ಅಧ್ಯಕ್ಷರಾದ ಒಂದೇ ವಾರದಲ್ಲಿ ಹಗಲು-ರಾತ್ರಿ ಟೆಸ್ಟ್ ಆಯೋಜನೆಗೆ ವ್ಯವಸ್ಥೆ ಮಾಡಿದ ಗಂಗೂಲಿ, ಟಿ20 ಕ್ರಿಕೆಟ್ ಅನ್ನು ಮತ್ತಷ್ಟು ರೋಚಕಗೊಳಿಸಲು ಸಿದ್ಧಪಡಿಸಿರುವ ಈ ಯೋಜನೆಯನ್ನು ತಿರಸ್ಕರಿಸುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಭರವಸೆ ವ್ಯಕ್ತಪಡಿಸಿದ್ದಾರೆ.
"
ಏನಿದು ಪವರ್ ಪ್ಲೇಯರ್?
ಸದ್ಯ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಿದೆ. ಆದರೆ ಪವರ್ ಪ್ಲೇಯರ್ ಪರಿಕಲ್ಪನೆ ಪರಿಚಯಗೊಂಡರೆ 11 ಆಟಗಾರರ ಬದಲು 15 ಆಟಗಾರರನ್ನು ಹೆಸರಿಸಬೇಕಿದೆ. ಪಂದ್ಯದ ಯಾವುದೇ ಸಮಯದಲ್ಲಿ ವಿಕೆಟ್ ಪತನಗೊಂಡಾಗ ಇಲ್ಲವೇ ಓವರ್ ಮುಕ್ತಾಯಗೊಂಡಾಗ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು.
RCB ತಂಡಕ್ಕೆ ಸೂಪರ್ ಪವರ್ ಎಂಟ್ರಿ: ಈ ಸಲ ಕಪ್ ನಮ್ದೇ
ಉದಾಹರಣೆಗೆ ಕೊನೆ 6 ಎಸೆತಗಳಲ್ಲಿ ತಂಡವೊಂದಕ್ಕೆ ಗೆಲ್ಲಲು 20 ರನ್‌ಗಳ ಅವಶ್ಯಕತೆ ಇರಲಿದೆ. ಆರಂಭಿಕ ಹನ್ನೊಂದರಲ್ಲಿ ಆ್ಯಂಡ್ರೆ ರಸೆಲ್ ಸ್ಥಾನ ಪಡೆದಿರುವುದಿಲ್ಲ. ಆದರೆ ಕೊನೆ ಓವರ್ ಎದುರಿಸಲು ರಸೆಲ್ ಕ್ರೀಸ್‌ಗಿಳಿದು, ತಮ್ಮ ತಂಡವನ್ನು ಗೆಲ್ಲಿಸಬಹುದು. ಅದೇ ರೀತಿ ಕೊನೆ ಓವರಲ್ಲಿ 6 ರನ್‌ಗಳನ್ನು ರಕ್ಷಿಸಿಕೊಳ್ಳಬೇಕಿರುತ್ತದೆ. ಜಸ್‌ಪ್ರೀತ್ ಬುಮ್ರಾ ಡಕೌಟ್‌ನಲ್ಲಿ ಕೂತಿರುತ್ತಾರೆ. ಆಗ ನಾಯಕ ಬುಮ್ರಾರನ್ನು ಕೊನೆ ಓವರ್ ಬೌಲ್ ಮಾಡಲು ಕರೆಸಿಕೊಳ್ಳಬಹುದು. ಪವರ್ ಪ್ಲೇಯರ್ ಪರಿಕಲ್ಪನೆ ಪಂದ್ಯದ ಲೆಕ್ಕಾಚಾರವನ್ನು ಬದಲಿಸಲಿದೆ.
ಉಪಯೋಗವೇನು?
ಟಿ20 ಕ್ರಿಕೆಟ್‌ನಲ್ಲಿ ತಂಡಗಳು ರೂಪಿಸಿಕೊಂಡು ಬಂದ ರಣತಂತ್ರಗಳನ್ನು ಪಂದ್ಯದ ಪರಿಸ್ಥಿತಿಗೆ ಬದಲಿಸಲು ಹೆಚ್ಚಿಗೆ ಸಮಯ ಸಿಗುವುದಿಲ್ಲ. ಎದುರಾಳಿ ತಂಡ ಮೇಲುಗೈ ಸಾಧಿಸಿದಾಗ ಪುಟಿದೇಳಲು ಅವಕಾಶ ಕಡಿಮೆ. ಆದರೆ ಪವರ್ ಪ್ಲೇಯರ್ ನಿಯಮ ಅಳವಡಿಕೆಯಾದರೆ ಒಬ್ಬ ಆಟಗಾರ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದು ಪಂದ್ಯದ ಗತಿ ಬದಲಿಸಬಹುದು. ತಂಡಗಳ ನಡುವೆ ಗೆಲುವಿಗಾಗಿ ಪೈಪೋಟಿ ಹೆಚ್ಚಾಗಲಿದೆ. ಯಾವುದೇ ಹಂತದಲ್ಲಿ ಬೇಕಿದ್ದರೂ ಲೆಕ್ಕಾಚಾರ ಬದಲಾಗಬಹುದು. ನಾಯಕರ ಆಲೋಚನಾ ಶಕ್ತಿಗೆ ಹೊಸ ಹೊಸ ಸವಾಲು ಎದುರಾಗಲಿದೆ. ನೋಡುಗರಿಗೂ ವಿಭಿನ್ನ ಅನುಭವ ಸಿಗಲಿದೆ.
ಸವಾಲುಗಳೇನು?
ಪವರ್ ಪ್ಲೇಯರ್ ನಿಯಮ ಅಳವಡಿಕೆಗೆ ಐಪಿಎಲ್ ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಸದ್ಯ ತಂಡಗಳು ಪಂದ್ಯವೊಂದರಲ್ಲಿ ಕೇವಲ ನಾಲ್ವರು ವಿದೇಶಿ ಆಟಗಾರರನ್ನು ಆಡಿಸಬಹುದು. ಕೆಲ ತಂಡಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಬಲಿಷ್ಠ ವಿದೇಶಿ ಆಟಗಾರರಿರುತ್ತಾರೆ. ಹೀಗಾಗಿ ಪವರ್ ಪ್ಲೇಯರ್ ಜಾರಿಗೆ ಬಂದರೆ ಕೆಲ ತಂಡಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಬುಕ್ಕಿಗಳು ಹಾಗೂ ಮ್ಯಾಚ್ ಫಿಕ್ಸರ್‌ಗಳು ಮತ್ತಷ್ಟು ಚುರುಕಾಗಿ ಕೆಲಸ ಮಾಡುತ್ತಾರೆ. ಪವರ್ ಪ್ಲೇಯರ್ ಯಾರೆಂಬ ಹೆಸರಲ್ಲೂ ಬೆಟ್ಟಿಂಗ್ ನಡೆಸಬಹುದು. ಸದ್ಯ ಟಿ20 ಲೀಗ್‌ಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಹೊಸ ನಿಯಮ ಭ್ರಷ್ಟಾಚಾರ ನಿಗ್ರಹ ಪಡೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪ್ರಯೋಗ?
ನ.8ರಿಂದ ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿ ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ಪವರ್ ಪ್ಲೇಯರ್ ಪರಿಕಲ್ಪನೆಯನ್ನು ಪ್ರಯೋಗಿಸಲು ಬಿಸಿಸಿಐ ಅಧಿಕಾರಿಗಳು ಆಸಕ್ತಿ ತೋರಿದ್ದಾರೆ. ಈ ಪ್ರಯೋಗ ಸಫಲವಾದರೆ ಐಪಿಎಲ್ನಲ್ಲೂ ಅಳವಡಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: