ಪಾಕ್‌ಗೆ ಸವಾಲು: ಏಷ್ಯಾಕಪ್ ಬದಲು ತವರಲ್ಲಿ ಏಕದಿನ ಸರಣಿಗೆ ಬಿಸಿಸಿಐ ಯೋಜನೆ?
2023ರ ಏಷ್ಯಾಕಪ್ ಟೂರ್ನಿ ನಡೆಯೋದು ಡೌಟ್
ಪಿಸಿಬಿಗೆ ಸಡ್ಡು ಹೊಡೆದು ಏಕದಿನ ಸರಣಿ ನಡೆಸಲು ಬಿಸಿಸಿಐ ಚಿಂತನೆ
ಭಾರತ ತಂಡಕ್ಕೆ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ನೆರವಾಗಲಿದೆ ಎನ್ನುವ ಅಭಿಪ್ರಾಯ
ಕರಾಚಿ/ನವದೆಹಲಿ(ಜೂ.07): ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನ ಬಹಿಷ್ಕರಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಹೈಬ್ರಿಡ್ ಮಾದರಿ ಅಂದರೆ 3-4 ಪಂದ್ಯಗಳು ಪಾಕಿಸ್ತಾನದಲ್ಲಿ ಇನ್ನುಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಪ್ರಸ್ತಾಪವನ್ನು ನಿರಾಕರಿಸಿ ಬಿಸಿಸಿಐ ಹೇಗೆ ಹೇಳುತ್ತದೆಯೋ ಹಾಗೆ ಕೇಳುವುದಾಗಿ ತಿಳಿಸಿರುವ ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗಳ ಮೇಲೆ ಪಿಸಿಬಿ ಸಿಟ್ಟಾಗಿದೆ ಎಂದು ವರದಿಯಾಗಿದೆ.
ಒಂದು ವೇಳೆ ಪಾಕಿಸ್ತಾನ, ಬಿಸಿಸಿಐ ಷರತ್ತಿಗೆ ಒಪ್ಪದಿದ್ದರೆ ಆಗ ಏಷ್ಯಾಕಪ್ ಟೂರ್ನಿಯನ್ನೇ ರದ್ದುಗೊಳಿಸಿ ತವರಿನಲ್ಲಿ ಭಾರತ, ಲಂಕಾ, ಬಾಂಗ್ಲಾ, ಆಫ್ಘನ್ ತಂಡಗಳ ನಡುವೆ 50 ಓವರ್ ಸರಣಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಟೂರ್ನಿಯು ಭಾರತ ತಂಡಕ್ಕೆ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ನೆರವಾಗಲಿದೆ ಎನ್ನುವ ಅಭಿಪ್ರಾಯ ಬಿಸಿಸಿಐ ಅಧಿಕಾರಿಗಳಿಂದ ವ್ಯಕ್ತವಾದೆ ಎನ್ನಲಾಗಿದೆ.
ಏಷ್ಯಾ ಕಪ್ ಕ್ರಿಕೆಟ್ಗೆ ಪಾಕ್ ಬಹಿಷ್ಕಾರ ಸಾಧ್ಯತೆ!
ಕರಾಚಿ: ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ವಿರೋಧ ವ್ಯಕ್ತಪಡಿಸಿದ್ದು, ಶ್ರೀಲಂಕಾದಲ್ಲಿ ನಡೆಸಿದರೆ ಟೂರ್ನಿಯನ್ನೇ ಬಹಿಷ್ಕರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ಪಿಸಿಬಿ ಇದಕ್ಕೆ ಪರಿಹಾರವಾಗಿ ಟೂರ್ನಿಯನ್ನು ತನ್ನ ದೇಶದಲ್ಲೇ ಆಯೋಜಿಸಿ, ಭಾರತದ ಪಂದ್ಯವನ್ನು ಬೇರೆಡೆ ನಡೆಸುವ ಪ್ರಸ್ತಾಪವಿರಿಸಿತ್ತು. ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಇದನ್ನು ತಿರಸ್ಕರಿಸಿ, ಟೂರ್ನಿಯನ್ನೇ ಸ್ಥಳಾಂತರಿಸಲು ನಿರ್ಧರಿಸಿದೆ. ಹೀಗಾಗಿ ಪಿಸಿಬಿ ಟೂರ್ನಿಯನ್ನು ಯುಎಇಯಲ್ಲಿ ನಡೆಸಿ ಎಂದು ಮನವಿ ಮಾಡಿದ್ದು, ಲಂಕಾದಲ್ಲಿ ಆಯೋಜಿಸಿದರೆ ಬಹಿಷ್ಕರಿಸುವುದಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
ರಿಂಕು ಸಿಂಗ್ ಕಟ್ಟುಮಸ್ತಾದ ಫಿಗರ್‌ಗೆ ಶುಭ್‌ಮನ್ ಗಿಲ್ ಸಹೋದರಿ ಫಿದಾ..! ಕಮೆಂಟ್ ವೈರಲ್
ಏಷ್ಯಾಕಪ್: ಲಂಕಾಕ್ಕೆ ಪಾಕಿಸ್ತಾನ ಬೆದರಿಕೆ!
ಕರಾಚಿ: ಶತಾಯಗತಾಯ ಏಷ್ಯಾ ಕಪ್ ಏಕದಿನ ಟೂರ್ನಿಯ ಆತಿಥ್ಯ ಉಳಿಸಿಕೊಳ್ಳಲು ಹೋರಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಜೊತೆ ಕಿತ್ತಾಟಕ್ಕಿಳಿದಿದೆ. ಏಷ್ಯಾಕಪ್ ಹೈಬ್ರೀಡ್ ಮಾದರಿ ಅಂದರೆ ಭಾರತದ ಪಂದ್ಯಗಳು ಯುಎಇನಲ್ಲಿ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಸಲು ಒಪ್ಪದ ಶ್ರೀಲಂಕಾ ಮೇಲೆ ಪಿಸಿಬಿ ಸಿಟ್ಟಾಗಿದ್ದು, ತನ್ನ ಬೆಂಬಲಕ್ಕೆ ನಿಲ್ಲದಿದ್ದರೆ ಲಂಕಾದಲ್ಲಿ ಜುಲೈನಲ್ಲಿ ನಡೆಯಬೇಕಿರುವ ಟೆಸ್ಟ್ ಸರಣಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜು.12-ಆ.13ರ ತನಕ ಭಾರತ-ವಿಂಡೀಸ್ ಸರಣಿ?
ನವದೆಹಲಿ: ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಬಳಿಕ ಭಾರತ ತಂಡಕ್ಕೆ ಕೆಲ ವಾರಗಳ ವಿಶ್ರಾಂತಿ ಸಿಗಲಿದ್ದು, ಜುಲೈನಲ್ಲಿ ತಂಡವು ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತೆರಳಲಿದೆ. ವಿಂಡೀಸ್ ಕ್ರಿಕೆಟ್ ಮಂಡಳಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದ್ದು, ಜು.12ರಿಂದ ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ನಿಗದಿಯಾಗಿದ್ದು, ಜು.20ರಿಂದ ಟ್ರಿನಿಡಾಡ್‌ನಲ್ಲಿ 2ನೇ ಟೆಸ್ಟ್ ನಡೆಸಲು ಉದ್ದೇಶಿಸಲಾಗಿದೆ. ಜು.27, 29, ಆ.1ರಂದು ಏಕದಿನ, ಆ.4, 6, 8, 12, 13ರಂದು ಟಿ20 ಪಂದ್ಯಗಳನ್ನು ಆಯೋಜಿಸಲು ವಿಂಡೀಸ್ ಕ್ರಿಕೆಟ್ ಮಂಡಳಿ ತೀರ್ಮಾನಿಸಿದೆ. ಬಿಸಿಸಿಐ ಒಪ್ಪಿಗೆ ಸಿಗುತ್ತಿದ್ದಂತೆ ಅಧಿಕೃತ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಪಂದ್ಯಗಳು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೇರ ಪ್ರಸಾರಗೊಳ್ಳಲಿದೆ ಎಂದು ತಿಳಿದುಬಂದಿದೆ.