Asianet Suvarna News Asianet Suvarna News

IPL ಪಂದ್ಯಗಳ ಸಂಖ್ಯೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ..!

* ಮುಂಬರುವ ವರ್ಷಗಳಲ್ಲಿ ಐಪಿಎಲ್‌ ಪಂದ್ಯಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ

* ಸದ್ಯ ಲೀಗ್ ಹಂತದಲ್ಲಿ 74 ಪಂದ್ಯಗಳು ಸಾಗುತ್ತಿವೆ

* ಒಟ್ಟು 5 ವರ್ಷಗಳ ಅವಧಿಯಲ್ಲಿ 370 ಪಂದ್ಯಗಳ ಬದಲು 410 ಪಂದ್ಯಗಳು ನಡೆಯುವ ಸಾಧ್ಯತೆ

BCCI hints at increasing IPL games per season in 2023 to 2027 cycle kvn
Author
Bengaluru, First Published Jun 10, 2022, 11:46 AM IST

ನವದೆಹಲಿ(ಜೂ.10): ಕೋವಿಡ್‌ ನಡುವೆಯೂ 15ನೇ ಆವೃತ್ತಿ ಐಪಿಎಲ್‌ (IPL 2022) ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಹುಮ್ಮಸ್ಸಿನಲ್ಲಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಿನ ಆವೃತ್ತಿಗಳಲ್ಲಿ ಪಂದ್ಯಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿವೆ. ಈ ಬಾರಿ ಗುಜರಾತ್‌ ಮತ್ತು ಲಖನೌ ತಂಡಗಳ ಸೇರ್ಪಡೆಯಿಂದಾಗಿ ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆಯಾಗಿತ್ತು. ಇನ್ನು 2023-27ರ ಅವಧಿಯಲ್ಲಿ ಪಂದ್ಯಗಳ ಮೌಲ್ಯವೂ ಜಾಸ್ತಿಯಾಗಲಿರುವುದರಿಂದ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

2023 ಮತ್ತು 2024ರಲ್ಲಿ ಈಗಿರುವಂತೆ 74 ಪಂದ್ಯಗಳು ನಡೆದರೆ, ನಂತರದ 2 ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆ ತಲಾ 84ಕ್ಕೆ ಏರಿಕೆಯಾಗಬಹುದು. ಬಳಿಕ 2027ರಲ್ಲಿ 94 ಪಂದ್ಯಗಳನ್ನು ನಡೆಸಲು ಮಂಡಳಿ ಚಿಂತನೆ ನಡೆಸುತ್ತಿದೆ. ಒಟ್ಟು 5 ವರ್ಷಗಳ ಅವಧಿಯಲ್ಲಿ 370 ಪಂದ್ಯಗಳ ಬದಲು 410 ಪಂದ್ಯಗಳು ನಡೆಯುವ ನಿರೀಕ್ಷೆಯಿದೆ. ಇದರ ರೂಪುರೇಷೆಯನ್ನು ಬಿಸಿಸಿಐ (BCCI) ಈಗಾಗಲೇ ತಯಾರಿಸಿದ್ದು, 2023-27ರ ಐಪಿಎಲ್‌ ಪ್ರಾಯೋಜತ್ವ ಪಡೆಯಲಿರುವ ಸಂಸ್ಥೆಗಳಿಗೂ ಅದನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದುಬಂದಿದೆ.

2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು (IPL Media Rights) ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಟೂರ್ನಿಯು ವಿಶ್ವದ 2ನೇ ಅತಿ ದುಬಾರಿ ಕ್ರೀಡಾ ಲೀಗ್‌ ಆಗುವತ್ತ ಸಾಗಿದೆ. ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರು. ದಾಟುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ.

2018-2022ರ ಅವಧಿಗೆ 16,348 ಕೋಟಿ ರು.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ (Star India), ಪ್ರತಿ ಪಂದ್ಯಕ್ಕೆ 54.5 ಕೋಟಿ ರು. ಪಾವತಿಸಿತ್ತು. ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿದ್ದು, ಇದರ ಪ್ರಕಾರ ಪ್ರತಿ ಪಂದ್ಯದ ಟೀವಿ ಹಕ್ಕು 49 ಕೋಟಿ ರು., ಮತ್ತು ಪ್ರತಿ ಪಂದ್ಯದ ಡಿಜಿಟೆಲ್‌ ಹಕ್ಕು 33 ಕೋಟಿ ರು. ಇದೆ. ಟೀವಿ ಹಕ್ಕು ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟುಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ರು. ಆಗಬಹುದು ಎನ್ನಲಾಗುತ್ತಿದೆ.

ಐಪಿಎಲ್ ಪ್ರದರ್ಶನದ ಬಗ್ಗೆ ತುಟಿಬಿಚ್ಚಿದ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್..!

ಈ ಮೊದಲು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೋಚ್ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರರಾಗಿರುವ ರವಿಶಾಸ್ತ್ರಿ (Ravi Shastri), ಮುಂಬರುವ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಐಪಿಎಲ್ ಟೂರ್ನಿಯನ್ನು ಆಯೋಜನೆಯಾಗುವ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ದ್ವಿಪಕ್ಷೀಯ ಟಿ20 ಸರಣಿಗಳಿಗೆ ಮಹತ್ವವಿಲ್ಲ. ಟಿ20 ಮಾದರಿಯನ್ನು ಕೇವಲ ವಿಶ್ವಕಪ್‌ಗೆ ಸೀಮಿತಗೊಳಿಸಬೇಕು ಎಂದಿರುವ ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ ‘ಅತಿಶೀಘ್ರದಲ್ಲಿ ವರ್ಷಕ್ಕೆ 2 ಬಾರಿ ಐಪಿಎಲ್‌ ನಡೆಯಬಹುದು. ಭವಿಷ್ಯದಲ್ಲಿ ಅದೇ ಸೂಕ್ತ’ ಎಂದು ಹೇಳಿದ್ದರು. 

ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದಕ್ಕೆ ಮಾತನಾಡಿರುವ ಅವರು, ‘ಈಗ ತುಂಬಾ ದ್ವಿಪಕ್ಷೀಯ ಟಿ20 ಸರಣಿಗಳು ನಡೆಯುತ್ತಿವೆ. ಆದರೆ ಈ ಪಂದ್ಯಗಳನ್ನು ಯಾರೂ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾನು 6-7 ವರ್ಷ ಕೋಚ್‌ ಆಗಿದ್ದಾಗ ನಡೆದ ಟಿ20 ಪಂದ್ಯಗಳೂ ನನಗೆ ನೆನಪಿಲ್ಲ. ಕೇವಲ ವಿಶ್ವಕಪ್‌ ಮಾತ್ರ ನೆನೆಪಿದೆ. ಜಾಗತಿಕ ಮಟ್ಟದಲ್ಲಿ ಫ್ರಾಂಚೈಸಿ ಲೀಗ್‌ಗಳು ನಡೆಯುತ್ತಿವೆ. ಬಳಿಕ 2 ವರ್ಷಕ್ಕೊಮ್ಮೆ ವಿಶ್ವಕಪ್‌ ಮಾತ್ರ ನಡೆಯಲಿ’ ಎಂದು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios