Asianet Suvarna News Asianet Suvarna News

ಐಪಿಎಲ್ ಪ್ರದರ್ಶನದ ಬಗ್ಗೆ ತುಟಿಬಿಚ್ಚಿದ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್..!

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಮೊಹಮ್ಮದ್ ಸಿರಾಜ್

* ಐಪಿಎಲ್ ಪ್ರದರ್ಶನದ ಬಗ್ಗೆ ತುಟಿಬಿಚ್ಚಿದ ಹೈದರಾಬಾದ್ ಮೂಲದ ಬಲಗೈ ವೇಗಿ

* ಬಲಿಷ್ಟವಾಗಿ ಕಮ್‌ಬ್ಯಾಕ್ ಮಾಡುಲು ಎದುರು ನೋಡುತ್ತಿದ್ದೇನೆ ಎಂದ ಸಿರಾಜ್

RCB Pacer Mohammed Siraj optimistic about strong comeback after dismal IPL 2022 journey kvn
Author
Bengaluru, First Published Jun 2, 2022, 9:38 AM IST

ಬೆಂಗಳೂರು(ಜೂ.02): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ವೇಗಿ ಮೊಹಮ್ಮದ್ ಸಿರಾಜ್, 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದೀಗ ಹೈದರಾಬಾದ್ ಮೂಲದ ವೇಗಿ, ಜುಲೈ 01ರಿಂದ ಇಂಗ್ಲೆಂಡ್ ವಿರುದ್ದ ನಡೆಯಲಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಆದರೆ ಮೊಹಮ್ಮದ್ ಸಿರಾಜ್ ಆರ್‌ಸಿಬಿ ಪರ 15 ಪಂದ್ಯಗಳನ್ನಾಡಿ 10.08ರ ಎಕಾನಮಿಯಲ್ಲಿ ರನ್‌ ನೀಡಿ ಕೇವಲ 9 ವಿಕೆಟ್ ಕಬಳಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಹೊಸ ಚೆಂಡಿನಲ್ಲಿ ದಾಳಿ ನಡೆಸಿ ಸಿರಾಜ್ ವಿಕೆಟ್‌ ಕಬಳಿಸದೇ ಹೋದದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿತು. ಈ ಕಾರಣಕ್ಕಾಗಿಯೇ ಆರ್‌ಸಿಬಿ ಎರಡನೇ ಕ್ವಾಲಿಫೈಯರ್ ಹಂತದಲ್ಲೇ ತಮ್ಮ ಅಭಿಯಾನವನ್ನು ಮುಗಿಸಿತು.

ಇದೀಗ ವೆಬ್‌ ಸೀರೀಸ್‌ವೊಂದರ ಟ್ರೇಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್ (Mohammed Siraj), ಬಲಿಷ್ಠವಾಗಿಯೇ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನನ್ನ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಕಳೆದೆರಡು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನನ್ನ ಪ್ರದರ್ಶನದ ಗ್ರಾಫ್ ಮೇಲಿತ್ತು. ಆದರೆ ಈ ಬಾರಿ ಆ ಗ್ರಾಫ್ ಕೆಳಗಿಳಿದಿದೆ. ಈ ಬಾರಿಯ ನನ್ನ ಪ್ರದರ್ಶನ ಕೆಟ್ಟದಾಗಿತ್ತು. ಇದು ಕೆಟ್ಟ ಹಂತ ಎಂದು ಭಾವಿಸುತ್ತೇನೆ ಹಾಗೂ ಕಠಿಣ ಪರಿಶ್ರಮ ಪಡುವ ಮೂಲಕ ಬಲಿಷ್ಟವಾಗಿಯೇ ಕಮ್‌ಬ್ಯಾಕ್ ಮಾಡುತ್ತೇನೆ. ನಾನು ನನ್ನ ಶಕ್ತಿ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದ್ದೇನೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

2022ರ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳಿವರು..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರದಿದ್ದರೂ ಸಹಾ, ಕಳೆದೆರಡು ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸಿರಾಜ್‌, ಆರ್‌ಸಿಬಿ (RCB Pacer Mohammed Siraj) ತಂಡದ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಕಳೆದೆರಡು ಐಪಿಎಲ್‌ ಆವೃತ್ತಿಯಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 24 ವಿಕೆಟ್ ಕಬಳಿಸಿದ್ದರು. ಈ ಕಾರಣಕ್ಕಾಗಿಯೇ ಮೊಹಮ್ಮದ್ ಸಿರಾಜ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು.

28 ವರ್ಷದ ಮೊಹಮ್ಮದ್ ಸಿರಾಜ್‌, ಭಾರತ ಟೆಸ್ಟ್ ತಂಡದ ಪರ 12 ಪಂದ್ಯಗಳನ್ನಾಡಿ 29.63ರ ಸರಾಸರಿಯಲ್ಲಿ 36 ವಿಕೆಟ್ ಕಬಳಿಸಿದ್ದಾರೆ. ಭಾರತ ತಂಡವು ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ 2020-21ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲುವಲ್ಲಿ ಮೊಹಮ್ಮದ್ ಸಿರಾಜ್ ಮಹತ್ವದ ಪಾತ್ರವಹಿಸಿದ್ದರು. ಇದರ ಜತೆಗೆ ಇದೀಗ ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್‌ಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಈ ಅವಕಾಶವನ್ನು ಬಾಚಿಕೊಳ್ಳಲು ಎದುರು ನೋಡುತ್ತಿದ್ದಾರೆ.

Follow Us:
Download App:
  • android
  • ios