ಭಾರತದ ವೇಗಿ ಅರ್ಶದೀಪ್ ಸಿಂಗ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಭುವನೇಶ್ವರ್ ಕುಮಾರ್‌ಗೆ ಅಗ್ರಸ್ಥಾನ ನೀಡಿರುವ ಅವರು, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್‌ರನ್ನು ಪಟ್ಟಿಯಲ್ಲಿ ಹೆಸರಿಸಿದ್ದಾರೆ.
ಬೆಂಗಳೂರು: ಭಾರತದ ಪ್ರತಿಭಾನ್ವಿತ ವೇಗದ ಬೌಲರ್ ಅರ್ಶದೀಪ್ ಸಿಂಗ್, ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಈ ಲಿಸ್ಟ್‌ನಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಅರ್ಶದೀಪ್ ಆಯ್ಕೆ ಮಾಡಿದ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭುವಿ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ ಅವರಂತಹ ತಾರಾ ಬೌಲರ್‌ಗಳನ್ನು ಹಿಂದಿಕ್ಕಿದ್ದಾರೆ.
ಅರ್ಶದೀಪ್ ಸಿಂಗ್, ಕ್ರಿಷ್ನಾಕ್ ಅಥ್ರೆ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಈ ಚಾನೆಲ್‌ನಲ್ಲಿ ಮಾತನಾಡಿರುವ ಅರ್ಶದೀಪ್, 'ಭುವಿ ನನ್ನ ಪಾಲಿನ ಫೇವರೇಟ್ ಆಟಗಾರನಾಗಿರುವುದರಿಂದ ಅವರಿಗೆ ನಾನು ಅಗ್ರಸ್ಥಾನ ಕೊಡುತ್ತೇನೆ. ಈ ವಿಚಾರದಲ್ಲಿ ನಾನೊಂಥರ ಪಕ್ಷಪಾತಿ. ಮೊದಲಿಗೆ ನಾನು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡುತ್ತೇನೆ. ಇನ್ನು ಎರಡನೇ ಸ್ಥಾನವನ್ನು ಮೊಹಮ್ಮದ್ ಶಮಿ ಅವರಿಗೆ ನೀಡುತ್ತೇನೆ. ನಿಮಗೆ ಗೊತ್ತು, ಶಮಿ ಅವರು ಯಾವುದೇ ವಿಕೆಟ್‌ನಲ್ಲೂ ವೇಗದ ದಾಳಿ ನಡೆಸುತ್ತಾರೆ. ಅವರ ಬೌಲಿಂಗ್ ಅದ್ಭುತವಾಗಿದೆ. ಅವರು ಅದ್ಭುತವಾಗಿ ವೇಗದ ಬೌಲಿಂಗ್ ಸಂಘಟಿಸುತ್ತಾರೆ ಎಂದು ಅರ್ಶದೀಪ್ ಸಿಂಗ್ ಹೇಳಿದ್ದಾರೆ.
ಕುಲ್ಚಾ ಜೋಡಿಗೆ ಮೂರು-ನಾಲ್ಕನೇ ಸ್ಥಾನ:
ಇನ್ನು ಭಾರತದ ಕುಲ್ಚಾ ಜೋಡಿಯೆಂದೇ ಪ್ರಸಿದ್ದಿ ಪಡೆದಿರುವ ಕುಲ್ದೀಪ್ ಯಾವದ್ ಹಾಗೂ ಯುಜುವೇಂದ್ರ ಚಹಲ್‌ಗೆ ಕ್ರಮವಾಗಿ ಅರ್ಶದೀಪ್ ಸಿಂಗ್ ಮೂರು ಹಾಗೂ ನಾಲ್ಕನೇ ಸ್ಥಾನ ನೀಡಿದ್ದಾರೆ. 'ಚೈನಾಮನ್ ಸ್ಪಿನ್ನರ್ ಖ್ಯಾತಿಯ ಎಡಗೈ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಬಳಿ ವಿಶೇಷವಾದ ಕೌಶಲ್ಯವಿದೆ. ಇನ್ನು ಪಂಜಾಬ್ ಕಿಂಗ್ಸ್‌ನ ಸಹ ಆಟಗಾರ ಯುಜುವೇಂದ್ರ ಚಹಲ್ ಅದ್ಭುತ ಬೌಲಿಂಗ್ ದಾಖಲೆ ಹೊಂದಿದ್ದಾರೆ. ಅವರು ಸಾಕಷ್ಟು ವಿಕೆಟ್ ಪಡೆದುಕೊಂಡಿದ್ದಾರೆ ಎಂದು ಅರ್ಶದೀಪ್ ಸಿಂಗ್ ಹೇಳಿದ್ದಾರೆ.
ಅಶ್ವಿನ್ ಕ್ಷಮೆ ಕೇಳಿ ಐದನೇ ಸ್ಥಾನ ನೀಡಿದ ಅರ್ಶದೀಪ್ ಸಿಂಗ್:
ಇನ್ನು ಅರ್ಶದೀಪ್ ಸಿಂಗ್ ಭಾರತದ ಎರಡನೇ ಗರಿಷ್ಠ ಟೆಸ್ಟ್ ವಿಕೆಟ್ ಸರದಾರ ರವಿಚಂದ್ರನ್ ಅಶ್ವಿನ್‌ಗೆ ಐದನೇ ಸ್ಥಾನ ನೀಡಿ ಕ್ಷಮೆಯಾಚಿಸಿದ್ದಾರೆ. 'ನಾನು ಅಶ್ವಿನ್‌ಗೆ ಈ ಪಟ್ಟಿಯಲ್ಲಿ ಕೊನೆಯ ಸ್ಥಾನ ನೀಡಬೇಕು ಅಂದುಕೊಂಡಿರಲಿಲ್ಲ. ಆದರೆ ಬೇರೆ ಸ್ಥಾನ ಇಲ್ಲದಿರುವ ಹಿನ್ನೆಲೆಯಲ್ಲಿ ಅವರಿಗೆ ಐದನೇ ಸ್ಥಾನ ನೀಡಿದ್ದೇನೆ. ಅವರೊಬ್ಬ ದಿಗ್ಗಜ ಆಟಗಾರ. ಆದರೆ ಅಶ್ವಿನ್ ಅಣ್ಣ ಪಂಜಾಬ್ ಕಿಂಗ್ಸ್‌ನಲ್ಲಿ ನನ್ನ ಪಾಲಿನ ಐಪಿಎಲ್‌ನ ಮೊದಲ ಕ್ಯಾಪ್ಟನ್ ಆಗಿದ್ದರು. ಕ್ಷಮಿಸಿ ಅಶ್ವಿನ್ ಅಣ್ಣ. ನಾನು ಪರ್ಸನಲ್ ಆಗಿ ನಿಮಗೆ ಮೆಸೇಜ್ ಮಾಡ್ತೇನೆ' ಎಂದು ಪಂಜಾಬ್ ಕಿಂಗ್ಸ್ ತಂಡದ ಎಡಗೈ ವೇಗಿ ಹೇಳಿದ್ದಾರೆ.
ಎಲ್ಲಾ ಮಾದರಿಯನ್ನು ಒಳಗೊಂಡ ಸಾರ್ವಕಾಲಿಕ ಶ್ರೇಷ್ಠ ಭಾರತ ತಂಡ ಆಯ್ಕೆ ಮಾಡಿದ ಅರ್ಶದೀಪ್ ಸಿಂಗ್:
ಇನ್ನು ಇದೇ ವೇಳೆ ಅರ್ಶದೀಪ್ ಸಿಂಗ್, ಎಲ್ಲಾ ಮಾದರಿಯನ್ನು ಒಳಗೊಂಡ ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ್ದಾರೆ. ಅದರಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಜತೆ ಭಾರತ ತಂಡದ ಹಾಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಮಣೆ ಹಾಕಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಆರನೇ ಕ್ರಮಾಂಕದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾಗೆ ಸ್ಥಾನ ನೀಡಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ಏಳನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿರುವ ಅರ್ಶದೀಪ್ ಸಿಂಗ್, ಎಂಟನೇ ಕ್ರಮಾಂಕಕ್ಕೆ ಹರ್ಭಜನ್ ಸಿಂಗ್ ಅವರನ್ನು ಅರ್ಶದೀಪ್ ಸಿಂಗ್ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ತ್ರಿವಳಿ ವೇಗಿಗಳಾಗಿ ಜಹೀರ್ ಖಾನ್, ಜಸ್ಪ್ರೀತ್ ಬುಮ್ರಾ ಜತೆಗೆ ಸ್ವತಃ ತಮ್ಮನ್ನೇ ಅರ್ಶದೀಪ್ ಸಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.


