ಮುಂಬೈ(ಡಿ.03): ಮುಂದಿನ ವರ್ಷ ನಡೆಯಲಿರುವ ಅಂಡರ್‌ 19 ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ 15 ಆಟಗಾರರ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಕರ್ನಾಟಕದ ಶುಭಾಂಗ್‌ ಹೆಗ್ಡೆ ಹಾಗೂ ವಿದ್ಯಾಧರ್‌ ಪಾಟೀಲ್‌ ಭಾರತ ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜ. 17 ರಿಂದ ಫೆ. 9 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿ ನಡೆಯಲಿದೆ. ಆಲ್‌ ಇಂಡಿಯಾ ಕಿರಿಯರ ಆಯ್ಕೆ ಸಮಿತಿ ಭಾನುವಾರ ಸಭೆ ನಡೆಸಿದ್ದು, ಸೋಮವಾರ ತಂಡ ಪ್ರಕಟಿಸಿದೆ. ವಿಶ್ವಕಪ್‌ಗೂ ಮುನ್ನ ದ.ಆಫ್ರಿಕಾ ವಿರುದ್ಧ ಭಾರತ 3 ಪಂದ್ಯಗಳ ಸರಣಿಯೊಂದನ್ನು ಆಡಲಿದೆ. ಈ ಸರಣಿಗೂ ಭಾರತ ಕಿರಿಯರ ತಂಡಕ್ಕೆ ಪ್ರಿಯಂ ಗರ್ಗ್‌ ನಾಯಕರಾಗಿದ್ದಾರೆ. ವಿಶ್ವಕಪ್‌ನಲ್ಲಿ ಸ್ಥಾನ ಪಡೆದ ಬಹುತೇಕ ಆಟಗಾರರು ಈ ಸರಣಿಗೂ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಅಪ್ಪ ಕಾರ್ಗಿಲ್ ಯುದ್ಧ ಜಯಿಸಿದ ಸೈನಿಕ; ಮಗ ಟೀಂ ಇಂಡಿಯಾ ನಾಯಕ!.

ಶುಭಾಂಗ್‌ ಹೆಗ್ಡೆ ಪರಿಚಯ:
ಉದಯೋನ್ಮುಖ ಆಟಗಾರ ಶುಭಾಂಗ್‌ ಹೆಗ್ಡೆ, ಮೂಲತಃ ಮಂಗಳೂರಿನವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕರ್ನಾಟಕ ಇನ್ಸಿಟ್ಯೂಟ್ ಆಫ್‌ ಕ್ರಿಕೆಟ್‌ (ಕೆಐಒಸಿ) ಕ್ರಿಕೆಟ್‌ ಅಕಾಡೆಮಿಯಲ್ಲಿ ಕಳೆದ 6 ವರ್ಷಗಳಿಂದ ಆಡುತ್ತಿದ್ದಾರೆ. ಅಪ್ಪ ಸಮರ್ಥ್ ಹೆಗಡೆ ಕೋಚ್‌ ಆಗಿದ್ದು, ಅವರ ಗರಡಿಯಲ್ಲಿ ಕ್ರಿಕೆಟ್‌ ಆಟದ ಮಜಲುಗಳನ್ನು ಕಲಿತಿದ್ದಾರೆ. 2019ರಲ್ಲಿ ಬರೋಡಾ ವಿರುದ್ಧ ರಣಜಿ ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಇದೇ ವರ್ಷ ಅಂಡರ್‌ 19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್‌ ಪ್ರವಾಸ, ಆಷ್ಘಾನಿಸ್ತಾನ ವಿರುದ್ಧ ಸೇರಿದಂತೆ ಇತರೆ ತಂಡಗಳ ವಿರುದ್ಧ ಆಡಿದ್ದಾರೆ. ಅಂಡರ್‌ 23 ಭಾರತ ತಂಡದಲ್ಲಿಯೂ ಶುಭಾಂಗ್‌ ಆಡಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: ತೆಂಡೂಲ್ಕರ್ ಬ್ಯಾಟ್‌ನಿಂದ ಟೀಂ ಇಂಡಿಯಾ ಗೆಲ್ಲಿಸಿದ ಪಾನಿಪೂರಿ ಹುಡುಗ!

ವಿದ್ಯಾಧರ್‌ ಪಾಟೀಲ್‌ ಪರಿಚಯ:
ಮೂಲತಃ ರಾಯಚೂರು ಜಿಲ್ಲೆಯ ಚಿಕ್ಕಸಗೂರಿನವರಾದ ವಿದ್ಯಾಧರ್‌ ಪಾಟೀಲ್‌, ಅಂಡರ್‌ 19 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ 7 ವರ್ಷಗಳಿಂದ ರಾಯಚೂರು ವಲಯದಲ್ಲಿ ಕ್ರಿಕೆಟ್‌ ಆಡುತ್ತಿರುವ ವಿದ್ಯಾಧರ್‌, 2019ರಿಂದ ಅಂಡರ್‌ 19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೇ ವರ್ಷ ಜುಲೈ-ಆಗಸ್ಟ್‌ ವೇಳೆ ಇಂಗ್ಲೆಂಡ್‌ ಪ್ರವಾಸ, ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಕಿರಿಯರ ತಂಡದಲ್ಲಿ ವಿದ್ಯಾಧರ್‌ ಆಡಿದ್ದರು. 2018ರ ಕೆಪಿಎಲ್‌ನಲ್ಲಿ ಬೆಂಗಳೂರು ಬ್ಲಾಸ್ಟ್‌ರ್ಸ್‌ ತಂಡದಲ್ಲಿದ್ದರು. 2019ರ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದಲ್ಲಿ ವಿದ್ಯಾಧರ್‌ ಉತ್ತಮ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ: ಐಸಿಸಿ ಕನಸಿನ ತಂಡದಲ್ಲಿ ಐವರು ಭಾರತೀಯರು

19 ವರ್ಷ ವಯಸ್ಸಿನ ಉತ್ತರಪ್ರದೇಶ ಬ್ಯಾಟ್ಸ್‌ಮನ್‌ ಪ್ರಿಯಂ ಗರ್ಗ್‌ ತಂಡದ ನಾಯಕನಾಗಿ ನೇಮಕವಾಗಿದ್ದಾರೆ. ಇತ್ತೀಚೆಗಷ್ಟೇ ಗರ್ಗ್‌, ಲಿಸ್ಟ್‌ ‘ಎ’ ಕ್ರಿಕೆಟ್‌ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ್ದರು. ಅಲ್ಲದೇ ಕಳೆದ ತಿಂಗಳು ಮುಕ್ತಾಯವಾಗಿದ್ದ ದೇವಧರ್‌ ಟ್ರೋಫಿಯಲ್ಲಿ ಗರ್ಗ್‌ ಪ್ರತಿನಿಧಿಸಿದ್ದ ಭಾರತ ‘ಸಿ’ ತಂಡ ರನ್ನರ್‌ ಅಪ್‌ ಆಗಿತ್ತು. ಫೈನಲ್‌ ಪಂದ್ಯದಲ್ಲಿ ಭಾರತ ‘ಬಿ’ ವಿರುದ್ಧ ಗರ್ಗ್‌ 74 ರನ್‌ಗಳಿಸಿದ್ದರು. 2018-19ರ ರಣಜಿ ಟ್ರೋಫಿಯಲ್ಲಿ ಗರ್ಗ್‌ ಯುಪಿ ಪರ 2ನೇ ಅತ್ಯಧಿಕ (814) ರನ್‌ಗಳಿಸಿದ ಆಟಗಾರ ಎನಿಸಿದ್ದರು.

ಇತ್ತೀಚೆಗಷ್ಟೇ ದೇಶಿಯ ಕ್ರಿಕೆಟ್‌ ಲೀಗ್‌ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಮುಂಬೈ ತಂಡದ ಪರ ದ್ವಿಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್‌ ಕೂಡ ಅಂಡರ್‌ 19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್‌ ಹಜಾರೆ ಟೂರ್ನಿಯಲ್ಲಿ ಯಶಸ್ವಿ, 112.80 ಬ್ಯಾಟಿಂಗ್‌ ಸರಾಸರಿಯಲ್ಲಿ 3 ಶತಕ, 1 ಅರ್ಧಶತಕ ಗಳಿಸಿದ್ದರು.

ಸೂಪರ್‌ ಲೀಗ್‌ ಮಾದರಿ:
13ನೇ ಆವೃತ್ತಿಯ ಅಂಡರ್‌ 19 ವಿಶ್ವಕಪ್‌ ಪಂದ್ಯಾವಳಿ ಇದಾಗಿದ್ದು, 16 ತಂಡಗಳು ಭಾಗವಹಿಸಲಿವೆ. 4 ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಜಪಾನ್‌ ತಂಡ ಮೊದಲ ಬಾರಿಗೆ ಅರ್ಹತೆ ಪಡೆದಿದೆ. ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶ ಪಡೆಯಲಿವೆ. ಸೂಪರ್‌ ಲೀಗ್‌ನಲ್ಲಿ 2 ಗುಂಪುಗಳಿರಲಿದ್ದು ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೇರಲಿವೆ.

ಭಾರತಕ್ಕೆ 4 ಬಾರಿ ಪ್ರಶಸ್ತಿ:
ಭಾರತ ಕಿರಿಯರ ತಂಡ ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ನಲ್ಲಿ 4 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 2018ರ ಆವೃತ್ತಿಯ ಫೈನಲ್‌ನಲ್ಲಿ ಆಸ್ಪ್ರೇಲಿಯಾ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ್ದ ಭಾರತ ಟ್ರೋಫಿ ಎತ್ತಿ ಹಿಡಿದಿತ್ತು.

ತಂಡ: ಪ್ರಿಯಂ ಗರ್ಗ್‌ (ನಾಯಕ), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾ, ದಿವ್ಯಾನ್ಶ್ ಸಕ್ಸೇನಾ, ಧ್ರುವ್‌ ಚಾಂದ್‌, ಶಾಶ್ವತ್‌ ರಾವತ್‌, ದಿವ್ಯಾನ್ಶ್ ಜೋಶಿ, ಶುಭಾಂಗ್‌ ಹೆಗ್ಡೆ, ರವಿ ಬಿಷ್ಣೋಯಿ, ಆಕಾಶ್‌ ಸಿಂಗ್‌, ಕಾರ್ತಿಕ್‌ ತ್ಯಾಗಿ, ಅಥವ್‌ರ್‍ ಅಂಕೋಲೆಕರ್‌, ಕುಮಾರ್‌ ಕುಶಾಗ್ರ, ಸುಶಾಂತ್‌ ಮಿಶ್ರಾ, ವಿದ್ಯಾಧರ್‌ ಪಾಟೀಲ್‌.