ಐಪಿಎಲ್ 2022 ವೇಳಾ ಪಟ್ಟಿ ಪ್ರಕಟ ಮಾಡಿದ ಬಿಸಿಸಿಐ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಹಾಗೂ ಕೋಲ್ಕತಾ ಫೈಟ್  ಮುಂಬೈ ಹಾಗೂ ಪುಣೆಯಲ್ಲಿ ಪಂದ್ಯ  

ಮುಂಬೈ(ಮಾ.06): ಬಹುನಿರೀಕ್ಷಿತ ಐಪಿಎಲ್ 2022 ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 26 ರಿಂದ ಮುಂಬರುವ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಮೇ 22ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಸಂಪೂರ್ಣ ಟೂರ್ನಿ ಮುಂಬೈ ಹಾಗೂ ಪುಣೆಯಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

ಉದ್ಘಟಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ಮಾರ್ಚ್ 27 ರಿಂದ ಆರಂಭಗೊಳ್ಳಲಿದೆ. ಮಾ.27 ರಂದು ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ದ ಹೋರಾಟ ನಡೆಸಲಿದೆ.

IPL 2022: ಮಾರ್ಚ್‌ 14ರಿಂದ ಮುಂಬೈನಲ್ಲಿ ಐಪಿಎಲ್‌ ತಂಡಗಳಿಂದ ಅಭ್ಯಾಸ ಆರಂಭ..!

ಶನಿವಾರ ಮತ್ತು ಭಾನುವಾರ ಡಬಲ್ ಹೆಡರ್ ಪಂದ್ಯ ಆಯೋಜಿಸಲಾಗಿದೆ. ಒಟ್ಟು 70 ಲೀಗ್ ಪಂದ್ಯ ಹಾಗೂ 4 ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಒಟ್ಟು 65 ದಿನಗಳ ಕಾಲ ಟೂರ್ನಿ ನಡೆಯಲಿದೆ. ಈ ಬಾರಿ 10 ತಂಡಗಳು ಪಾಲ್ಗೊಳ್ಳುತ್ತಿರುವ ಕಾರಣ ಪಂದ್ಯಗಳ ಸಂಖ್ಯೆ ಹಾಗೂ ದಿನಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು 12 ಡಬಲ್ ಹೆಡರ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಡಬಲ್ ಹೆಡರ್ ಮೊದಲ ಪಂದ್ಯ 3.30ಕ್ಕೆ ಆರಂಭಗೊಳ್ಳಲಿದೆ. ಎರಡನೇ ಪಂದ್ಯ 7.30ಕ್ಕೆ ಆರಂಭಗೊಳ್ಳಲಿದೆ.

ಮೇ 22 ರಂದು ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದೊಂದಿಗೆ ಲೀಗ್ ಹಂತ ಅಂತ್ಯಗೊಳ್ಳಲಿದೆ. ಬಳಿಕ ಪ್ಲೇ ಆಫ್ ಸುತ್ತಿನ ಪಂದ್ಯಗಳು ನಡೆಯಲಿದೆ. ಪ್ಲೇ ಆಫ್ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಟೂರ್ನಿ ಮಧ್ಯಭಾಗದಲ್ಲಿ ಬಿಸಿಸಿಐ ಬಿಡುಗಡೆ ಮಾಡಲಿದೆ. ಮೇ.29ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ.

IPL 2022: ಸುರೇಶ್ ರೈನಾ ಖರೀದಿಸುವಂತೆ ಗುಜರಾತ್‌ ಟೈಟಾನ್ಸ್‌ಗೆ ಫ್ಯಾನ್ಸ್‌ ಆಗ್ರಹ..!

ಟೂರ್ನಿ ಮಾದರಿ ಹೇಗೆ?
ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್‌ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಆಯಾ ಗುಂಪಿನಲ್ಲಿರುವ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿವೆ. ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಬಾರಿ, ಉಳಿದ 4 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ತಂಡಗಳು ಗೆದ್ದಿರುವ ಒಟ್ಟು ಟ್ರೋಫಿ ಹಾಗೂ ಪ್ರವೇಶಿಸಿರುವ ಒಟ್ಟು ಫೈನಲ್‌ಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ. ಇದರ ಅನುಸಾರ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈಗೆ ಮೊದಲ ಸ್ಥಾನ ಸಿಕ್ಕಿದ್ದು, ‘ಎ’ ಗುಂಪಿನಲ್ಲಿದೆ. 4 ಟ್ರೋಫಿ ಗೆದ್ದಿರುವ ಚೆನ್ನೈ 2ನೇ ಸ್ಥಾನ ಸಿಕ್ಕಿದ್ದು, ‘ಬಿ’ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ.

ಐಪಿಎಲ್‌ ಆಡುವ ಭಾರತ ಆಟಗಾರಿಗೆ ವಿಶೇಷ ಶಿಬಿರ
ಐಪಿಎಲ್‌ ಆಡಲು ಸಿದ್ಧವಾಗಿರುವ ಭಾರತೀಯ ಆಟಗಾರರಿಗೆ ಬಿಸಿಸಿಐ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ 10 ದಿನಗಳ ವಿಶೇಷ ಫಿಟ್ನೆಸ್‌ ಪರೀಕ್ಷಾ ತರಬೇತಿ ಆಯೋಜಿಸಿದೆ. ಸದ್ಯ ಶ್ರೀಲಂಕಾ ವಿರುದ್ಧ ಟೆಸ್ಟ್‌ ಆಡುತ್ತಿರುವ ಆಟಗಾರರ ಹೊರತು ಉಳಿದವರು ಶನಿವಾರ ಎನ್‌ಸಿಎಗೆ ಹಾಜರಾಗಲು ಬಿಸಿಸಿಐ ಸೂಚಿಸಿತ್ತು. ಟೂರ್ನಿಯುದ್ದಕ್ಕೂ ಆಟಗಾರರು ಫಿಟ್ನೆಸ್‌ ಕಾಯ್ದುಕೊಳ್ಳಲು ಆಯ್ಕೆ ಸಮಿತಿಯ ನೀಡಿದ ಸಲಹೆ ಮೇರೆಗೆ ಬಿಸಿಸಿಐ ಈ ಶಿಬಿರ ಆಯೋಜಿಸಿದೆ ಎಂದು ತಿಳಿದುಬಂದಿದೆ.

ಐಪಿಎಲ್‌ ಟೈಂ ಔಟ್‌ 3 ನಿಮಿಷಕ್ಕೆ ಹೆಚ್ಚಳ ?
2022ರ ಐಪಿಎಲ್‌ನಲ್ಲಿ ಪಂದ್ಯಗಳ ನಡುವಿನ ಟೈಂ ಔಟ್‌ ಅವಧಿ ಬದಲಾವಣೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಈ ಬಾರಿ ಐಪಿಎಲ್‌ನಲ್ಲಿ ಪ್ರತಿ ಪಂದ್ಯದಲ್ಲಿ ಎರಡೂವರೆ ನಿಮಿಷದ ಬದಲು ಮೂರು ನಿಮಿಷಗಳ 4 ಟೈಂ ಔಟ್‌ಗಳು(ಪಂದ್ಯದಲ್ಲಿ ಒಟ್ಟು 12 ನಿಮಿಷ) ಇರಲಿವೆ ಎನ್ನಲಾಗಿದೆ. ಇದರಿಂದ ಪ್ರಸಾರಕರಿಗೆ ಹೆಚ್ಚು ಜಾಹೀರಾತುಗಳನ್ನು ಪ್ರಸಾರ ಮಾಡಲು ಅನುಕೂಲವಾಗಲಿದೆ.