Asianet Suvarna News Asianet Suvarna News

IPL 2022: ಮಾರ್ಚ್‌ 14ರಿಂದ ಮುಂಬೈನಲ್ಲಿ ಐಪಿಎಲ್‌ ತಂಡಗಳಿಂದ ಅಭ್ಯಾಸ ಆರಂಭ..!

* 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಭರದಿಂದ ಸಾಗುತ್ತಿದೆ ಸಿದ್ದತೆಗಳು

* ತಂಡಗಳ ಅಭ್ಯಾಸಕ್ಕೆ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ)ಯ 5 ಮೈದಾನಗಳಲ್ಲಿ ವ್ಯವಸ್ಥೆ

* ಎಲ್ಲಾ ತಂಡಗಳು ಮಾರ್ಚ್‌ 14 ಅಥವಾ 15ರಿಂದ ಆರಂಭವಾಗುವ ಸಾಧ್ಯತೆ

IPL 2022 Mumbai 5 venues shortlisted for practice teams training likely to begin from March 14 kvn
Author
Bengaluru, First Published Mar 3, 2022, 10:18 AM IST

ಮುಂಬೈ(ಮಾ.03): ಮುಂಬರುವ 15ನೇ ಆವೃತ್ತಿಯ ಐಪಿಎಲ್‌ಗೆ ಎಲ್ಲಾ ತಂಡಗಳು ಮಾರ್ಚ್‌ 14 ಅಥವಾ 15ರಿಂದ ಮುಂಬೈನಲ್ಲಿ ಅಭ್ಯಾಸ ಆರಂಭಿಸಲಿವೆ. ತಂಡಗಳ ಅಭ್ಯಾಸಕ್ಕಾಗಿ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) 5 ಮೈದಾನಗಳಲ್ಲಿ ವ್ಯವಸ್ಥೆ ಮಾಡಲಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌, ಥಾಣೆಯಲ್ಲಿರುವ ಎಂಸಿಎ ಮೈದಾನ, ಡಿ.ವೈ.ಪಾಟೀಲ್‌ ವಿವಿ ಮೈದಾನ, ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ಹಾಗೂ ರಿಲಯನ್ಸ್‌ ಕಾರ್ಪೋರೇಟ್‌ ಮೈದಾನದಲ್ಲಿ ತಂಡಗಳು ಅಭ್ಯಾಸ ನಡೆಸಲಿವೆ.

2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್‌ 26ರಿಂದ ಪ್ರಾರಂಭವಾಗಲಿದ್ದು, ಲೀಗ್‌ ಹಂತದ ಎಲ್ಲಾ ಪಂದ್ಯಗಳಿಗೆ ಮುಂಬೈ ಹಾಗೂ ಪುಣೆ ಆತಿಥ್ಯ ವಹಿಸಲಿವೆ. 10 ತಂಡಗಳ ಆಟಗಾರರು ಮಾರ್ಚ್‌ 8ರಿಂದ ಮುಂಬೈಗೆ ಆಗಮಿಸಲಿದ್ದು, ವಿದೇಶದಿಂದ ಬರುವ ಆಟಗಾರರು 5 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಭಾರತೀಯರು ಕೂಡಾ 3 ದಿನ ಕ್ವಾರಂಟೈನ್‌ಲ್ಲಿ ಇರಬೇಕಿದೆ. ಆಟಗಾರರು ಉಳಿದುಕೊಳ್ಳಲು ಮುಂಬೈನಲ್ಲಿ 10 ಹಾಗೂ ಪುಣೆಯಲ್ಲಿ 2 ಹೋಟೆಲ್‌ಗಳನ್ನು ಬಿಸಿಸಿಐ ಗುರುತಿಸಿದೆ.

ಆಟಗಾರರು ಮುಂಬೈಗೆ ಆಗಮಿಸುವ 48 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಬಳಿಕ ಟೂರ್ನಿ ವೇಳೆ ಪ್ರತಿ 3ರಿಂದ 5 ದಿನಕ್ಕೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಲೀಗ್‌ ಹಂತದ ವೇಳೆ ಕ್ರೀಡಾಂಗಣಗಳಿಗೆ ಶೇಕಡ 25 ಅಥವಾ 50ರಷ್ಟು ಪ್ರೇಕ್ಷಕರಿಗೆ ಪ್ರವೇಶ ಸಿಗುವ ಸಾಧ್ಯತೆ ಇದೆ.

ತಂಡಗಳು ಅಭ್ಯಾಸಕ್ಕೆ, ಪಂದ್ಯಗಳಿಗೆ ತೆರಳಲು ಮಹಾರಾಷ್ಟ್ರ ಸರ್ಕಾರ ವಿಶೇಷ ಮಾರ್ಗ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ, ಮುಂಬೈ ಹಾಗೂ ಪುಣೆ ನಗರಗಳನ್ನು ಸುಂದರಗೊಳಿಸುವಂತೆ ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದ್ದಾರೆ.

ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಲೀಗ್ ಹಂತದಲ್ಲೇ 70 ಪಂದ್ಯಗಳು ನಡೆಯಲಿವೆ. ಈ ಬಾರಿಯ ಐಪಿಎಲ್‌ ಟೂರ್ನಿಯು ಮಹಾರಾಷ್ಟ್ರದಲ್ಲಿನ 4 ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂಬೈನಲ್ಲಿರುವ ವಾಂಖೆಡೆ ಮೈದಾನ, ಡಿ.ವೈ. ಪಾಟೀಲ್ ಮೈದಾನ ಹಾಗೂ ಬ್ರಬೋರ್ನ್‌ ಮೈದಾನದಲ್ಲಿ ಒಟ್ಟು 55 ಐಪಿಎಲ್ ಲೀಗ್ ಪಂದ್ಯಗಳು ನಡೆದರೆ, ಇನ್ನುಳಿದ 15 ಲೀಗ್ ಪಂದ್ಯಗಳಿಗೆ ಪುಣೆ ಮೈದಾನ ಆತಿಥ್ಯವನ್ನು ವಹಿಸಲಿದೆ. ಇನ್ನು ಪ್ಲೇ ಆಫ್‌ ಪಂದ್ಯಗಳು ಎಲ್ಲಿ ನಡೆಯಲಿದೆ ಎನ್ನುವುದರ ಬಗ್ಗೆ ಬಿಸಿಸಿಐ ಇನ್ನೂ ತನ್ನ ಅಧಿಕೃತ ತೀರ್ಮಾನವನ್ನು ಪ್ರಕಟಿಸಿಲ್ಲ.

ಹೊಸ ರೂಪದಲ್ಲಿ ಈ ಬಾರಿಗೆ ಐಪಿಎಲ್ ಟೂರ್ನಿ:

15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.  ಆಯಾ ಗುಂಪಿನಲ್ಲಿರುವ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿವೆ. ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಬಾರಿ, ಉಳಿದ 4 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ತಂಡಗಳು ಗೆದ್ದಿರುವ ಒಟ್ಟು ಟ್ರೋಫಿ ಹಾಗೂ ಪ್ರವೇಶಿಸಿರುವ ಒಟ್ಟು ಫೈನಲ್‌ಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ. ಇದರ ಅನುಸಾರ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈಗೆ ಮೊದಲ ಸ್ಥಾನ ಸಿಕ್ಕಿದ್ದು, ‘ಎ’ ಗುಂಪಿನಲ್ಲಿದೆ. 4 ಟ್ರೋಫಿ ಗೆದ್ದಿರುವ ಚೆನ್ನೈ 2ನೇ ಸ್ಥಾನ ಸಿಕ್ಕಿದ್ದು, ‘ಬಿ’ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ.

ಆರ್‌ಸಿಬಿ ತಂಡವು ಸನ್‌ರೈಸ​ರ್ಸ್‌ , ಪಂಜಾಬ್‌ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ವಿರುದ್ಧ ತಲಾ 2 ಪಂದ್ಯವನ್ನಾಡಲಿದ್ದು, ‘ಎ’ ಗುಂಪಿನಲ್ಲಿರುವ ರಾಜಸ್ಥಾನ ವಿರುದ್ಧ 2 ಪಂದ್ಯವನ್ನಾಡಲಿದೆ. ಇನ್ನುಳಿದ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ.

Latest Videos
Follow Us:
Download App:
  • android
  • ios