ಟೀಂ ಇಂಡಿಯಾ ಕ್ರಿಕೆಟ್ಗೆ Dream11 ಸಾಥ್; 3 ವರ್ಷಗಳ ಒಪ್ಪಂದ..!
ಬಿಸಿಸಿಐ ಜೆರ್ಸಿ ಸ್ಪಾನ್ಸರ್ ಆಗಿ ಬಿಸಿಸಿಐ ಜತೆ ಡ್ರೀಮ್ 11 ಒಪ್ಪಂದ
3 ವರ್ಷಗಳ ಅವಧಿಗೆ ಟೀಂ ಇಂಡಿಯಾಗೆ ಜೆರ್ಸಿ ಸ್ಪಾನ್ಸರ್ ಮಾಡಲಿದೆ ಡ್ರೀಮ್ 11
ಈ ಮೊದಲು ಬೈಜುಸ್ ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ 5.5 ಕೋಟಿ ರು. ಶುಲ್ಕ ಪಾವತಿಸುತ್ತಿತ್ತು
ಮುಂಬೈ(ಜು.01): ಭಾರತ ಕ್ರಿಕೆಟ್ ತಂಡದ ನೂತನ ಜೆರ್ಸಿ ಪ್ರಾಯೋಜಕರಾಗಿ ಡ್ರೀಮ್ 11 ಸಂಸ್ಥೆ ಬಿಸಿಸಿಐ ಜೊತೆ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. 2019ರಿಂದ 2023ರ ಮಾರ್ಚ್‌ವರೆಗೂ ಬೈಜುಸ್ ಸಂಸ್ಥೆಯು ಜೆರ್ಸಿ ಪ್ರಾಯೋಜಕತ್ವ ಹೊಂದಿತ್ತು. ಆ ಸಂಸ್ಥೆಯು ಪ್ರಾಯೋಜಕತ್ವ ಮುಂದುವರಿಸದಿರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕಾಟದಲ್ಲಿತ್ತು. ಬೈಜುಸ್ ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ 5.5 ಕೋಟಿ ರು. ಶುಲ್ಕ ಪಾವತಿಸುತ್ತಿತ್ತು. ಇದೀಗ ಡ್ರೀಮ್ 11, ಬೈಜುಸ್‌ಗಿಂತ ಕಡಿಮೆ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.
ನೂತನ ಜೆರ್ಸಿ ಪ್ರಾಯೋಜಕರಾಗಿ ಡ್ರೀಮ್ 11 ಜತೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿರುವುದರಿಂದ, ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಡ್ರೀಮ್ 11 ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಮೂರನೇ ಆವತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಟೀಂ ಇಂಡಿಯಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಜುಲೈ ತಿಂಗಳ ಮೊದಲ ವಾರ ಕೆರಿಬಿಯನ್ ಪ್ರವಾಸ ಕೈಗೊಳ್ಳಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯು ಜುಲೈ 12ರಿಂದ ಆರಂಭವಾಗಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ICC ODI World Cup 2023: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೊಸ ಸ್ಪರ್ಶ..!
"ನಮ್ಮ ಜತೆ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ನಾನು ಡ್ರೀಮ್ 11 ಅನ್ನು ಅಭಿನಂದಿಸುತ್ತೇನೆ ಹಾಗೂ ನಮ್ಮ ಜತೆಗಿನ ಪಯಣಕ್ಕೆ ಸ್ವಾಗತಿಸುತ್ತೇನೆ. ಬಿಸಿಸಿಐನ ಅಫಿಶಿಯಲ್ ಸ್ಪಾನ್ಸರ್‌ನಿಂದ ಆರಂಭವಾಗಿ ಇದೀಗ ಲೀಡ್ ಸ್ಪಾನ್ಸರ್ ಹಂತಕ್ಕೆ ಬಂದಿದೆ. ಬಿಸಿಸಿಐ ಹಾಗೂ ಡ್ರೀಮ್ 11 ನಡುವಿನ ಬಾಂಧವ್ಯ ಇದೀಗ ಮತ್ತಷ್ಟು ಗಟ್ಟಿಯಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ನಾವೀಗ ಈ ವರ್ಷದ ಕೊನೆಯಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದ್ದೇವೆ. ಹೀಗಾಗಿ ಅಭಿಮಾನಿಗಳಿಗೆ ವಿಭಿನ್ನ ಅನುಭವ ನೀಡುವುದು ನಮ್ಮ ಬಹುಮುಖ್ಯ ಆದ್ಯತೆಯಾಗಿದೆ. ಈ ಒಪ್ಪಂದದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಮತ್ತಷ್ಟು ಒಳ್ಳೆಯ ಅನುಭವ ಗಳಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದ್ದಾರೆ.
ಏಕದಿನ ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ..!
"ಸಾಕಷ್ಟು ಸಮಯದಿಂದ ಬಿಸಿಸಿಐ ಹಾಗೂ ಟೀಂ ಇಂಡಿಯಾ ಜತೆಗೆ ಹಂಗಾಮಿ ಸ್ಪಾನ್ಸರ್ ಆಗಿದ್ದ ಡ್ರೀಮ್ 11 ಇದೀಗ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಭಾರತ ರಾಷ್ಟ್ರೀಯ ತಂಡದ ಪ್ರಮುಖ ಸ್ಪಾನ್ಸರ್ ಆಗಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಭಾರತದ ಕ್ರೀಡಾ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಹೀಗೇ ಮುಂದುವರೆಯಲಿದೆ ಎಂದು ಡ್ರೀಮ್ 11 ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಸಿಇಒ ಹರ್ಷ್ ಜೈನ್ ತಿಳಿಸಿದ್ದಾರೆ.
ಒಪ್ಪೋ ಜತೆಗಿನ ಒಪ್ಪಂದ ಮುಕ್ತಾಯದ ಬಳಿಕ 2019ರಿಂದ ಟೀಂ ಇಂಡಿಯಾಗೆ ಬೈಜೂಸ್ ಜೆರ್ಸಿ ಸ್ಪಾನ್ಸರ್ ನೀಡಿತ್ತು. ಬೈಜೂಸ್ 3 ವರ್ಷಗಳ ಅವಧಿಗೆ ಅಂದರೆ 2022ರ ವರೆಗೆ ಬಿಸಿಸಿಐ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಇದಾದ ಬಳಿಕ ಈ ಒಪ್ಪಂದವನ್ನು 2023ರವರೆಗೆ ಮುಂದುವರೆಸಲು ತೀರ್ಮಾನಿಸಿತ್ತು. ಇದೀಗ ಡ್ರೀಮ್ 11 ಟೀಂ ಇಂಡಿಯಾ ನೂತನ ಜೆರ್ಸಿ ಸ್ಪಾನ್ಸರ್ ಆಗಿ ಸೇರ್ಪಡೆಯಾಗಿದೆ.