ಭಾರತ ಕ್ರಿಕೆಟ್ ತಂಡದ ಜೆರ್ಸಿಗೆ ಆ್ಯಡಿಡಾಸ್ ಪ್ರಾಯೋಜಕತ್ವ4 ವರ್ಷಕ್ಕೆ 370 ಕೋಟಿ ರು.ಗೆ ಒಪ್ಪಂದ?ಆ್ಯಡಿಡಾಸ್ ಸಂಸ್ಥೆಯು ಪ್ರತಿ ಪಂದ್ಯಕ್ಕೆ 85 ಲಕ್ಷ ರುಪಾಯಿ ಬಿಸಿಸಿಐಗೆ
ನವದೆಹಲಿ(ಮೇ.23): ಭಾರತ ತಂಡದ ನೂತನ ಜೆರ್ಸಿ ಪ್ರಾಯೋಜಕರಾಗಿ ಪ್ರತಿಷ್ಠಿತ ಆ್ಯಡಿಡಾಸ್ ಸಂಸ್ಥೆ ಬಿಸಿಸಿಐ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದನ್ನು ಸೋಮವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಆದರೆ ಒಪ್ಪಂದದ ಅವಧಿ ಮತ್ತು ಮೌಲ್ಯವನ್ನು ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ ಜರ್ಮನ್ ಕ್ರೀಡಾ ಉತ್ಪನ್ನವಾದ ಆ್ಯಡಿಡಾಸ್ ಸಂಸ್ಥೆಯು ಪ್ರತಿ ಪಂದ್ಯಕ್ಕೆ 85 ಲಕ್ಷ ರುಪಾಯಿ ಹಾಗೂ ರಾಯಲ್ಟಿ ರೂಪದಲ್ಲಿ ಬಿಸಿಸಿಐಗೆ ವಾರ್ಷಿಕ 15 ಕೋಟಿ ರುಪಾಯಿ ಪಾವತಿಸಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನೈಕಿ ಸಂಸ್ಥೆಯು 4 ವರ್ಷಕ್ಕೆ 370 ಕೋಟಿ ರು. ಪಾವತಿಸಿತ್ತು. ಆ್ಯಡಿಡಾಸ್ ಜೊತೆಗೂ ಅಷ್ಟೇ ಮೌಲ್ಯದ ಒಪ್ಪಂದಕ್ಕೆ ಬಿಸಿಸಿಐ ಸಹಿ ಹಾಕಿದೆ ಎನ್ನಲಾಗುತ್ತಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, " ಕ್ರಿಕೆಟ್ ಬೆಳವಣಿಗೆಗೆ ನಾವು ಎಂದಿನಂತೆ ಕಠಿಬದ್ದವಾಗಿದ್ದು, ಇದೀಗ ಜಗತ್ತಿನ ಅತಿದೊಡ್ಡ ಕ್ರೀಡಾ ಜೆರ್ಸಿ ಉತ್ಪನ್ನ ತಯಾರಿಕಾ ಬ್ರ್ಯಾಂಡ್ ಆಗಿರುವ ಆ್ಯಡಿಡಾಸ್ ನಮ್ಮ ಜತೆ ಕೈಜೋಡಿಸಿದಕ್ಕೆ ನಾವೆಲ್ಲರೂ ಉತ್ಸುಕರಾಗಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ. ಆ್ಯಡಿಡಾಸ್ ಸಂಸ್ಥೆಯು ಈಗಾಗಲೇ ವಿಶ್ವದಾದ್ಯಂತ ಹಲವು ಪ್ರಖ್ಯಾತ ಕ್ರೀಡಾ ತಂಡಗಳಾದ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್‌ನಂತಹ ತಂಡಗಳಿಗೆ ಜೆರ್ಸಿ ಸ್ಪಾನ್ಸರ್ ನೀಡಿದೆ.
ಜೂನ್ 7ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಫೈನಲ್‌ನಲ್ಲಿ ಭಾರತ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಈ ಮೊದಲು 2016ರಿಂದ 2020ರ ವರೆಗೆ ನೈಕಿ ಸಂಸ್ಥೆಯು ಭಾರತದ ಜೆರ್ಸಿ ಪ್ರಾಯೋಜಕತ್ವ ಹೊಂದಿತ್ತು. 2020ರಲ್ಲಿ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆಯು 3 ವರ್ಷಗಳ ಅವಧಿಗೆ ಪ್ರಾಯೋಜಕತ್ವ ಪಡೆದಿತ್ತು. ಆದರೆ ಅವಧಿಗೂ ಮುನ್ನ ಒಪ್ಪಂದದಿಂದ ಹಿಂದೆ ಸರಿದ ಕಾರಣ 2023ರ ಜನವರಿಯಲ್ಲಿ ಕಿಲ್ಲರ್ ಜೀನ್ಸ್ ಸಂಸ್ಥೆಯು ಭಾರತದ ಜೆರ್ಸಿಗೆ ಹಂಗಾಮಿ ಪ್ರಾಯೋಜಕರಾಗಿತ್ತು. ಕಿಲ್ಲರ್ ಜೀನ್ಸ್ ಸಂಸ್ಥೆ ಜತೆಗಿನ ಒಪ್ಪಂದವು ಇದೇ ಮೇ 31ಕ್ಕೆ ಕೊನೆಯಾಗಲಿದೆ.
"ನಮಗೆ ಪ್ಲೇ-ಆಫ್ಗೇರುವ ಅರ್ಹತೆ ಇರಲಿಲ್ಲ": RCB ನಾಯಕ ಫಾಫ್ ಡು ಪ್ಲೆಸಿಸ್ ಅಚ್ಚರಿಯ ಹೇಳಿಕೆ
ಇನ್ನು ತುಂಬಾ ಅಚ್ಚರಿಯ ಸಂಗತಿಯೆಂದರೆ 2006ಕ್ಕಿಂತ ಮೊದಲು ಭಾರತ ತಂಡಕ್ಕೆ ಯಾವುದೇ ಕಿಟ್ ಸ್ಪಾನ್ಸರ್‌ಗಳಿರಲಿಲ್ಲ. ಆದರೆ 2006ರಲ್ಲಿ ಮೊದಲ ಬಾರಿಗೆ ನೈಕಿ ಸಂಸ್ಥೆಯು ಕಿಟ್ ಸ್ಪಾನ್ಸರ್ ಆಗಿ 7 ವರ್ಷಗಳ ಅವಧಿಗೆ ಬಿಸಿಸಿಐ ಜತೆ ಒಪ್ಪಂದಕ್ಕೆ ಸಹಿ ಮಾಡಿತ್ತು. ಇದಾದ ಬಳಿಕ ಬಿಸಿಸಿಐ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ.
