ಐಪಿಎಲ್ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರುಐಪಿಎಲ್ ಲೀಗ್ ಹಂತದಲ್ಲೇ ಹೊರಬಿದ್ದ ಫಾಫ್ ಡು ಪ್ಲೆಸಿಸ್ ಪಡೆತಂಡ ನಿರೀಕ್ಷಿತ ಆಟವಾಡಲಿಲ್ಲ ಎಂದ ಆರ್‌ಸಿಬಿ ನಾಯಕ 

ಬೆಂಗ​ಳೂ​ರು(ಮೇ.23): ಗುಜರಾತ್‌ ಟೈಟಾನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 6 ವಿಕೆಟ್‌ ಸೋಲು ಅನುಭವಿಸಿ ಐಪಿ​ಎ​ಲ್‌ನ ಪ್ಲೇ-ಆಫ್‌​ಗೇ​ರಲು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿಫ​ಲ​ವಾದ ಬಗ್ಗೆ ನಾಯಕ ಫಾಫ್‌ ಡು ಪ್ಲೆಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಪ್ಲೇ-ಆಫ್‌ಗೇರುವ ಅರ್ಹತೆ ಹೊಂದಿರಲಿಲ್ಲ ಎಂದು ಡು ಪ್ಲೆಸಿಸ್ ಪ್ರಾಮಾಣಿಕವಾಗಿ ನುಡಿದಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಬಳಿಕ ನಾಯಕ ಡು ಪ್ಲೆಸಿಸ್ ಮಾತನಾಡಿರುವ ವಿಡಿಯೋವನ್ನು ಆರ್‌​ಸಿಬಿ ತನ್ನ ಟ್ವೀಟರ್‌ ಖಾತೆ ಮೂಲಕ ಹಂಚಿಕೊಂಡಿದೆ. ಅದರಲ್ಲಿ ಡು ಪ್ಲೆಸಿಸ್, ‘ಟೂರ್ನಿ​ಯಲ್ಲಿ ನಮ್ಮದು ಶ್ರೇಷ್ಠ ತಂಡ​ವಾ​ಗಿ​ರ​ಲಿಲ್ಲ. ಹೀಗಾಗಿ ನಮಗೆ ಪ್ಲೇ-ಆಫ್‌ಗೇರುವ ಅರ್ಹತೆ ಇರಲಿಲ್ಲ’ ಎಂದು ಹೇಳಿ​ದ್ದಾರೆ.

‘ಎಲ್ಲಾ 14 ಪಂದ್ಯಗಳನ್ನು ಒಟ್ಟುಗೂಡಿಸಿ ನೋಡಿದಾಗ ತಂಡ ನಿರೀಕ್ಷಿತ ಆಟವಾಡಿಲ್ಲ. ಆದರೆ ತಂಡದ ಕೆಲ ಪ್ರದ​ರ್ಶ​ನ​ಗಳು ಅತ್ಯು​ತ್ತ​ಮ​ವಾ​ಗಿತ್ತು. ನಾವು ಕಠಿಣ ಪ್ರಯತ್ನ ಮಾಡಿ​ದ್ದರೂ ವಿಫ​ಲ​ವಾ​ಗಿ​ದ್ದೇವೆ. ನಮ್ಮ ಅಭಿ​ಯಾನ ಲೀಗ್‌ ಹಂತ​ದಲ್ಲೇ ಕೊನೆ​ಗೊಂಡಿ​ದ್ದಕ್ಕೆ ಬಹಳ ಬೇಸ​ರ​ವಿದೆ’ ಎಂದಿರುವ ಡು ಪ್ಲೆಸಿ, ಕೊಹ್ಲಿ, ಮ್ಯಾಕ್ಸ್‌​ವೆಲ್‌, ಸಿರಾಜ್‌ರ ಆಟ​ವನ್ನು ಕೊಂಡಾ​ಡಿ​ದ್ದಾರೆ. ಕಳೆದ 3 ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರಿದ್ದ ಆರ್‌ಸಿಬಿ ಈಗ ಬಾರಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟು​ಕೊಂಡಿದೆ.

ಈ ಸೋಲು ನಮಗೆ ತೀವ್ರ ನೋವುಂಟು ಮಾಡಿತು. ಭಾನುವಾರ ನಾವು ಗೆಲ್ಲಲು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ದುರಾದೃಷ್ಟವಶಾತ್ ಗೆಲುವಿನ ಗೆರೆ ದಾಟಲು ನಮಗೆ ಸಾಧ್ಯವಾಗಲಿಲ್ಲ. ಈ ವರ್ಷ ಗ್ಲೆನ್ ಮ್ಯಾಕ್ಸ್‌ವೆಲ್ ಚೆನ್ನಾಗಿ ಆಡಿದ್ದು ನಮ್ಮ ತಂಡದ ಪ್ಲಸ್ ಪಾಯಿಂಟ್. ನಾನು ಹಾಗೂ ವಿರಾಟ್ ಕೊಹ್ಲಿ ಬಹುತೇಕ ಎಲ್ಲಾ ಪಂದ್ಯಗಳಲ್ಲೂ 50+ ರನ್ ಜತೆಯಾಟವಾಡಿದ್ದು, ನಿಜಕ್ಕೂ ಸ್ಥಿರ ಪ್ರದರ್ಶನ ಅದ್ಭುತವಾಗಿತ್ತು ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.

"RCB ಕೊಟ್ಟಷ್ಟು ನೋವು ಅವಳು ಕೂಡ ಕೊಟ್ಟಿರಲಿಲ್ಲ, ಆದ್ರೆ": ಸೋಷಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿ ಟ್ರೆಂಡಿಂಗ್..!

ಬ್ಯಾಟಿಂಗ್ ವಿಭಾಗದಲ್ಲಿ ಹೇಳಬೇಕೆಂದರೆ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ನಿಜಕ್ಕೂ ಒಳ್ಳೆಯ ಕೊಡುಗೆಯನ್ನೇ ನೀಡಿದರು. ಆದರೆ ಟೂರ್ನಿಯುದ್ದಕ್ಕೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ತೋರಲು ವಿಫಲರಾದರು. ಅದೇ ರೀತಿ ಬೌಲಿಂಗ್ ವಿಭಾಗದಲ್ಲೂ ಮಧ್ಯದ ಓವರ್‌ಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೌಲರ್‌ಗಳು ವಿಕೆಟ್ ಕಬಳಿಸಲು ವಿಫಲರಾದರು. ಇನ್ನು ಟೂರ್ನಿಯುದ್ದಕ್ಕೂ ವಿರಾಟ್ ಕೊಹ್ಲಿ ಅದ್ಭುತವಾದ ಪ್ರದರ್ಶನ ತೋರಿದರು. ಕಳೆದ ವರ್ಷ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶಿಂಗ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಆದರೆ ಈ ವರ್ಷ ಅದು ಅವರಿಂದ ಸಾಧ್ಯವಾಗಲಿಲ್ಲ. ಈಗಿರುವ ಕೆಲವು ತಂಡಗಳನ್ನು ನೋಡಿದರೆ, 5-6-7 ನೇ ಕ್ರಮಾಂಕದಲ್ಲಿ ಒಳ್ಳೆಯ ಹಿಟ್ಟರ್‌ಗಳಿದ್ದಾರೆ ಎಂದು ಫಾಫ್ ಹೇಳಿದ್ದಾರೆ.

ನಮ್ಮ ತಂಡದ ವೇಗಿ ಮೊಹಮ್ಮದ್ ಸಿರಾಜ್‌ ಪಾಲಿಗೆ ಇದು ಒಳ್ಳೆಯ ಐಪಿಎಲ್ ಟೂರ್ನಿಯಾಗಿತ್ತು. ಕೆಲವೊಂದು ಭಾಗದಲ್ಲಿ ನಾವು ತುಂಬಾ ಚೆನ್ನಾಗಿಯೇ ಆಡಿದೆವು. ಆದರೆ ಮತ್ತೆ ಕೆಲವು ಭಾಗಗಳಲ್ಲಿ ನಮ್ಮ ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲವೆಂದೆನಿಸುತ್ತಿದೆ ಎಂದು ಫಾಫ್ ಡು ಪ್ಲೆಸಿಸ್‌ ಹೇಳಿದ್ದಾರೆ.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗೆಲುವು ದಾಖಲಿಸಿದ್ದರೆ, ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯುತ್ತಿತ್ತು. ಆದರೆ ಶುಭ್‌ಮನ್ ಗಿಲ್ ಬಾರಿಸಿದ ಸ್ಪೋಟಕ ಶತಕ ಹಾಗೂ ವಿಜಯ್ ಶಂಕರ್ ಬಾರಿಸಿದ ಮಿಂಚಿನ ಅರ್ಧಶತಕದ ನೆರವಿನಿಂದ ಆರ್‌ಸಿಬಿ ತಂಡವು ಇನ್ನೂ 5 ಎಸೆತ ಬಾಕಿ ಇರುವಂತೆಯೇ 198 ರನ್‌ಗಳ ಕಠಿಣ ಗುರಿಯನ್ನು ಅನಾಯಾಸವಾಗಿ ತಲುಪಿತ್ತು. ಈ ಸೋಲಿನೊಂದಿಗೆ ಆರ್‌ಸಿಬಿ, ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದರೆ, ಮುಂಬೈ ಇಂಡಿಯನ್ಸ್, ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.

2023ನೇ ಸಾಲಿನ ಐಪಿಎಲ್ ಟೂರ್ನಿಯು ಫಾಫ್ ಡು ಪ್ಲೆಸಿಸ್‌ ಪಾಲಿಗೆ ಕೂಡಾ ಬ್ಯಾಟಿಂಗ್ ವಿಭಾಗದಲ್ಲಿ ಸ್ಮರಣೀಯ ಎನಿಸಿಕೊಂಡಿತು. ಆರ್‌ಸಿಬಿ ಪರ ಫಾಫ್, 14 ಪಂದ್ಯಗಳನ್ನಾಡಿ 56.15ರ ಬ್ಯಾಟಿಂಗ್ ಸರಾಸರಿಯಲ್ಲಿ 730 ರನ್ ಸಿಡಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ.