Asianet Suvarna News Asianet Suvarna News

ಕಿವೀಸ್ ಎದುರು ತವರಿನಲ್ಲಿ ಐತಿಹಾಸಿಕ ಟೆಸ್ಟ್ ಗೆಲುವು ದಾಖಲಿಸಿದ ಬಾಂಗ್ಲಾದೇಶ

ಗೆಲ್ಲಲು 332 ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ನಾಲ್ಕನೇ ದಿನದಾದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು ಕೇವಲ 113 ರನ್ ಬಾರಿಸಿತ್ತು. ಇನ್ನು ಕೊನೆಯ ದಿನ ಕಿವೀಸ್ ಪಡೆ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಾಕಷ್ಟು ಹೆಣಗಾಡಿತಾದರೂ ಯಶಸ್ಸು ಕಾಣಲಿಲ್ಲ.

Bangladesh thrash New Zealand By 150 Runs In First Test kvn
Author
First Published Dec 2, 2023, 12:42 PM IST

ಸೈಲೆಟ್‌(ಡಿ.02): ತೈಜುಲ್ ಇಸ್ಲಾಂ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 150 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ ತಂಡವು 1-0 ಮುನ್ನಡೆ ಸಾಧಿಸಿದೆ. ಇದು ಕಿವೀಸ್ ಎದುರು ತವರಿನಲ್ಲಿ ಬಾಂಗ್ಲಾದೇಶ ದಾಖಲಿಸಿದ ಮೊದಲ ಟೆಸ್ಟ್ ಗೆಲುವಾಗಿದೆ.

ಗೆಲ್ಲಲು 332 ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ನಾಲ್ಕನೇ ದಿನದಾದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು ಕೇವಲ 113 ರನ್ ಬಾರಿಸಿತ್ತು. ಇನ್ನು ಕೊನೆಯ ದಿನ ಕಿವೀಸ್ ಪಡೆ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಾಕಷ್ಟು ಹೆಣಗಾಡಿತಾದರೂ ಯಶಸ್ಸು ಕಾಣಲಿಲ್ಲ. ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಎರಡನೇ ಇನಿಂಗ್ಸ್‌ನಲ್ಲಿ 75 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ತಂಡವು ತವರಿನಲ್ಲಿ ಐತಿಹಾಸಿಕ ಗೆಲುವು ದಾಖಲಿಸಲು ಪ್ರಮುಖ ಪಾತ್ರವಹಿಸಿದರು. ತೈಜುಲ್ ಇಸ್ಲಾಂ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ್ದರು. ಇನ್ನು ಕೊನೆಯ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವು 68 ರನ್ ಕಲೆಹಾಕಿ ತನ್ನ ಹೋರಾಟವನ್ನು ಕೈಚೆಲ್ಲಿತು. ಡೇರಲ್ ಮಿಚೆಲ್, ಎರಡನೇ ಇನಿಂಗ್ಸ್‌ನಲ್ಲಿ ಕಿವೀಸ್ ಪರ 58 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

ಆಸೀಸ್ ಪ್ರವಾಸ ಕೈಗೊಂಡ ಪಾಕ್‌; ಪಾಪ ಲಗೇಜ್ ಇಳಿಸೋಕು ಜನರಿಲ್ಲ..! ವಿಡಿಯೋ ವೈರಲ್

ಹೇಗಿತ್ತು ಮೊದಲ ಟೆಸ್ಟ್..?:

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು ಮೊಹಮದುಲ್ಲಾ ಹಸನ್ ಜಾಯ್(86) ಬಾರಿಸಿದ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 310 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಕಿವೀಸ್ ಆರಂಭಿಕ ಆಘಾತದ ಹೊರತಾಗಿಯೂ ಕೇನ್ ವಿಲಿಯಮ್ಸನ್ ಬಾರಿಸಿದ ಆಕರ್ಷಕ ಶತಕ(104)ದ ನೆರವಿನಿಂದ 317 ರನ್ ಬಾರಿಸಿ 7 ರನ್ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು. 

ಸೌತ್ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ, ಕೆಎಲ್ ರಾಹುಲ್‌ಗೆ ಏಕದಿನ ನಾಯಕತ್ವ!

ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡವು ನಾಯಕ ನಜ್ಮುಲ್ ಹೊಸೈನ್ ಶಾಂಟೋ(105) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 338 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಕಿವೀಸ್ ಎರಡನೇ ಇನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು.

ಇದೀಗ ಬಾಂಗ್ಲಾದೇಶ ತಂಡವು ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು, ಮೊದಲ ಬಾರಿಗೆ ಕಿವೀಸ್ ಎದುದು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ. ಬಾಂಗ್ಲಾದೇಶ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಡಿಸೆಂಬರ್ 06ರಿಂದ ಆರಂಭವಾಗಲಿದೆ.

Follow Us:
Download App:
  • android
  • ios