2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಲಿದ್ದು, ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಸಲಿವೆ. ಮುಲ್ಲಾನಪುರದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆಯೇ ಎಂಬ ಆತಂಕ ಮನೆಮಾಡಿದೆ.
ಚಂಡಿಗಢ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಕ್ವಾಲಿಫೈಯರ್ 1 ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಇಂದು ಮುಲ್ಲಾನಪುರ ಸ್ಟೇಡಿಯಂನಲ್ಲಿ ನಡೆಯಲಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಬರೋಬ್ಬರಿ 11 ವರ್ಷಗಳ ಬಳಿಕ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದ್ದು, ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಶ್ರೇಯಸ್ ಅಯ್ಯರ್ ಪಡೆ ಟೂರ್ನಿಯ ಆರಂಭದ ದಿನದಿಂದಲೂ ದಿಟ್ಟ ಪ್ರದರ್ಶನ ತೋರುತ್ತಾ ಬಂದಿದೆ. ಇನ್ನೊಂದೆಡೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ತಂಡಗಳು ಲೀಗ್ ಹಂತದ ಅಂತ್ಯದ ವೇಳೆಗೆ ತಲಾ 19 ಅಂಕ ಕಲೆಹಾಕಿವೆ. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸ್ಥಾನದಲ್ಲಿದ್ದರೇ, ಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ. ಇದೀಗ ಕ್ವಾಲಿಫೈಯರ್ 1 ಪಂದ್ಯದಲ್ಲಿ ಉಭಯ ತಂಡಗಳು ಫೈನಲ್ ಸ್ಥಾನಕ್ಕಾಗಿ ಕಾದಾಡಲಿವೆ. ಹೀಗಿರುವಾಗಲೇ ಇಂದಿನ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುತ್ತಾನಾ ಎನ್ನುವ ಆತಂಕ ಶುರುವಾಗಿದೆ.
2025ರ ಐಪಿಎಲ್‌ನ 4 ಪಂದ್ಯಗಳಿಗೆ ಮುಲ್ಲಾನ್‌ಪುರ ಆತಿಥ್ಯ ವಹಿಸಿದೆ. ಆರಂಭಿಕ 2 ಪಂದ್ಯಗಳಲ್ಲಿ 3 ಬಾರಿ 200+ ರನ್ ದಾಖಲಾಗಿದ್ದರೆ, ನಂತರದ 2 ಪಂದ್ಯಗಳಲ್ಲಿ 2 ಬಾರಿ ತಂಡ ಗಳು 120ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿವೆ. ಹೀಗಾಗಿ ಕ್ವಾಲಿಫೈ ಯರ್ ಪಂದ್ಯದಲ್ಲಿ ಪಿಚ್ ಹೇಗೆ ವರ್ತಿಸಲಿದೆ ಎಂಬ ಕುತೂಹಲವಿದೆ.
ಇನ್ನು ಹವಾಮಾನ ವರದಿಯ ಪ್ರಕಾರ ಮುಲ್ಲಾನಪುರ ಭಾಗದಲ್ಲಿ ಈಗ ಬೇಸಿಗೆಯ ಸಮಯವಾಗಿದ್ದು, ಪಂದ್ಯ ನಡೆಯುವ ದಿನವಾದ ಇಂದು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಗಾಳಿಯು ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಆದರೆ ಉಭಯ ತಂಡದಲ್ಲೂ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳ ದಂಡೇ ಇರುವುದರಿಂದ ರನ್ ಮಳೆ ಹರಿಯುವ ಸಾಧ್ಯತೆಯಿದೆ.
ಸದ್ಯ ಕ್ವಾಲಿಫೈಯರ್ 1 ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾದರೇ ಯಾವುದೇ ಮೀಸಲು ದಿನವಿಲ್ಲ. ಮಳೆ ಅಥವಾ ಇನ್ನಿತರ ಕಾರಣದಿಂದ ಒಂದು ವೇಳೆ ಪಂದ್ಯ ರದ್ದಾದರೇ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಪಂಜಾಬ್ ಕಿಂಗ್ಸ್ ತಂಡವು ಅಧಿಕೃತವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ಜತೆಗೆ ಇನ್ನೊಂದು ತಂಡ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ ನೋಡಿ
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾನ್ಶ್ ಆರ್ಯ, ಜೋಶ್ ಇಂಗ್ಲಿಶ್,ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ನೆಹಾಲ್ ವದೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಅಝ್ಮತುಲ್ಲಾ ಓಮರ್‌ಝೈ, ಹರ್ಪ್ರೀತ್ ಬ್ರಾರ್, ಕೈಲ್ ಜೇಮಿಸನ್,ವೈಶಾಕ್ ವಿಜಯಕುಮಾರ್, ಅರ್ಶದೀಪ್ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್(ನಾಯಕ), ಮಯಾಂಕ್ ಅಗರ್‌ವಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.
