Asianet Suvarna News Asianet Suvarna News

ಆ್ಯಷಸ್ ಸರಣಿಗಾಗಿ ಟಿ20 ವಿಶ್ವಕಪ್‌ ತ್ಯಾಗಕ್ಕೆ ರೆಡಿಯಾದ ಸ್ಮಿತ್..!

* ಆ್ಯಷಸ್ ಸರಣಿ ಮೇಲೆ ಕಣ್ಣಿಟ್ಟಿರುವ ಸ್ಟೀವ್ ಸ್ಮಿತ್

* ಆ್ಯಷಸ್ ಸರಣಿಗಾಗಿ ಟಿ20 ವಿಶ್ವಕಪ್ ತ್ಯಾಗದ ಬಗ್ಗೆಯೂ ಆಸೀಸ್ ಕ್ರಿಕೆಟಿಗ ಚಿಂತನೆ

* ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟೀವ್ ಸ್ಮಿತ್

 

Australian Cricketer Steve Smith Ready To Sacrifice T20 World Cup To Be Fit For Ashes Series kvn
Author
Melbourne VIC, First Published Jul 3, 2021, 1:24 PM IST

ಮೆಲ್ಬರ್ನ್‌(ಜು.03): ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್ ಐತಿಹಾಸಿಕ ಆ್ಯಷಸ್ ಸರಣಿಗೆ ಸಂಪೂರ್ಣ ಫಿಟ್ ಇರುವ ಉದ್ದೇಶದಿಂದ ಟಿ20 ವಿಶ್ವಕಪ್‌ ಟೂರ್ನಿಯಿಂದ ಹಿಂದೆ ಸರಿದರೂ ಅಚ್ಚರಿಪಡುವಂತಿಲ್ಲ. ಈ ಕುರಿತಾದ ಸುಳಿವನ್ನು ಸ್ವತಃ ಸ್ಮಿತ್ ಬಿಟ್ಟುಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೊಣಕೈ ಗಾಯದ ಸಮಸ್ಯೆಯಿಂದಾಗಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಸ್ಮಿತ್, ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ನಿಧಾನವಾಗಿ ನಾನು ಗುಣಮುಖರಾಗುತ್ತಿದ್ದೇನೆ. ಸದ್ಯಕ್ಕೆ ಏನೂ ತೊಂದರೆಯಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಕೋವಿಡ್ 19 ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಯುಎಇ ಹಾಗೂ ಓಮನ್‌ನಲ್ಲಿ ನಡೆಯಲಿದೆ.

ವಿಂಡೀಸ್, ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ; ಸ್ಟಾರ್ ಆಟಗಾರರು ಗೈರು..!

ನಾನು ಖಂಡಿತವಾಗಿಯೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಬಯಸುತ್ತೇನೆ. ಆದರೆ ನನ್ನ ದೃಷ್ಠಿಯಲ್ಲಿ, ನನ್ನ ಮೊದಲ ಆಧ್ಯತೆಯೇನಿದ್ದರೂ ಟೆಸ್ಟ್ ಕ್ರಿಕೆಟ್. ಮುಂಬರುವ ಆ್ಯಷಸ್‌ ಸರಣಿಯ ಮೇಲೆ ನಾನು ಕಣ್ಣಿಟ್ಟಿದ್ದು, ಈ ಹಿಂದೆ ಆ್ಯಷಸ್ ಸರಣಿಯಲ್ಲಿ ತೋರಿದ ಪ್ರದರ್ಶನವನ್ನೇ ಮರುಕಳಿಸಲು ಎದುರು ನೋಡುತ್ತಿದ್ದೇನೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಬಾಲ್‌ ಟ್ಯಾಂಪರಿಂಗ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದ ಸ್ಟೀವ್ ಸ್ಮಿತ್, ಆ್ಯಷಸ್ ಸರಣಿಯಲ್ಲಿ ಅತ್ಯಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 2019ರಲ್ಲಿ ಇಂಗ್ಲೆಂಡ್‌ನಲ್ಲೇ ನಡೆದ ಆ್ಯಷಸ್ ಸರಣಿಯ 4 ಪಂದ್ಯಗಳಲ್ಲಿ 2 ಶತಕ ಸೇರಿದಂತೆ 110.57ರ ಬ್ಯಾಟಿಂಗ್ ಸರಾಸರಿಯಲ್ಲಿ 774 ರನ್‌ ಚಚ್ಚಿದ್ದರು. ಮುಂಬರುವ 5 ಪಂದ್ಯಗಳ ಆ್ಯಷಸ್ ಸರಣಿಯು ಡಿಸೆಂಬರ್ 08ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.

Follow Us:
Download App:
  • android
  • ios